ಸ್ಪೀಕರ್ ನಡೆ ಸರ್ವಾಧಿಕಾರಿ ಧೋರಣೆ: ಡಿ.ಕೆ.ಶಿವಕುಮಾರ್ ಕಿಡಿ

ಬೆಂಗಳೂರು,ಜ  31, ಜಂಟಿ ಅಧಿವೇಶನದ ವೇಳೆ ರಾಜ್ಯಪಾಲರ ಭಾಷಣಕ್ಕೆ ಯಾವುದೇ ಸದಸ್ಯರು  ಅಡ್ಡಿಪಡಿಸುವುದು ಇಲ್ಲವೇ ಕ್ರಿಯಾಲೋಪ ಎತ್ತಿದರೆ ಅಂತಹ ಸದಸ್ಯರನ್ನು  ಅಮಾನತುಪಡಿಸುವುದಾಗಿ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು  ಹೊರಡಿಸಿರುವ ಅಧಿಸೂಚನೆಗೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್  ಕಿಡಿಕಾರಿದ್ದಾರೆ.ಸ್ಪೀಕರ್ ನಡೆಗೆ ಬೇಸರ ವ್ಯಕ್ತಪಡಿಸಿರುವ  ಶಿವಕುಮಾರ್, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ. ಆದರೆ ವಾಕ್  ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಬಿಜೆಪಿಯವರದ್ದು ಸರ್ವಾಧಿಕಾರಿ ಧೋರಣೆಯಾಗಿದೆ. ಈ  ಬಗ್ಗೆ ಮೊದಲು ಬಿಎಸ್ ಸಿ  ಸಭೆಯಲ್ಲಿ ಚರ್ಚೆ ಮಾಡಲಿ. ಆ ನಂತರ ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳಲಿ ಎಂದರು.

ಸ್ಪೀಕರ್ ಅಧಿವೇಶನದ ಕಲಾಪದಿಂದ ಮಾಧ್ಯಮಗಳನ್ನೇ ಹೊರಗಿಡುವ ಕೆಲಸ ಮಾಡಿದ್ದಾರೆ. ಬೇಕಾದರೆ ಸದನಕ್ಕೆ ಪೊಲೀಸರನ್ನೇ ತುಂಬಿಕೊಳ್ಳಲಿ. ಪ್ರಜಾಪ್ರಭುತ್ವದಲ್ಲಿ ಸರ್ಕಾರದ ತೀರ್ಮಾನಗಳ ಬಗ್ಗೆ ಧ್ವನಿ ಎತ್ತುವ ಅವಕಾಶವಿದೆ. ಕಲಾಪ ಜನರ ಧ್ವನಿಯನ್ನು ಪ್ರತಿನಿಧಿಗಳು ವ್ಯಕ್ತಪಡಿಸಲಿರುವ ಸ್ಥಳ. ಹೀಗಾಗಿ ವಿಧಾನಸಭೆಯಲ್ಲಿಯೇ ಪ್ರಸ್ತಾಪಮಾಡಬೇಕು ಎಂದರು.

ಈ  ಹಿಂದೆ ವಿಪಕ್ಷದಲ್ಲಿದ್ದಾಗ ಬಿಜೆಪಿಯ ನಾಯಕರು  ಏನು ಮಾಡಿದ್ದಾರೆ? ರಾಜ್ಯಪಾಲರ ಭಾಷಣದ  ವೇಳೆ ಏನು ಮಾಡಿದ್ದರು? ಯಾವ ರೀತಿ ಅಡೆತಡೆ ಮಾಡಿದ್ದರು. ರಾಷ್ಟ್ರಪತಿಗಳು ಬಂದಿದ್ದಾಗಲೂ  ಇವರು ಏನು ಮಾಡಿದ್ದರೆಂಬುದು ಎಲ್ಲರಿಗೂ ತಿಳಿದಿದೆ. ಅವರೇನು ಮಾಡಿದ್ದರೆಂಬ ಬಗ್ಗೆ  ಆತ್ಮಾವಲೋಕನ‌ ಮಾಡಿಕೊಳ್ಳಲಿ.ಪಜಾಪ್ರಭುತ್ವದ ಹಕ್ಕು ಮೊಟಕುಗೊಳಿಸಲು  ಸಾಧ್ಯವಿಲ್ಲ. ಬಿಜೆಪಿಗರಿಂದ ಪಾಠ ಹೇಳಿಸಿಕೊಳ್ಳಲು ನಾವು ಮಕ್ಕಳಲ್ಲ. ಬಿಜೆಪಿ ಅಧಿಕಾರಕ್ಕೆ  ಬಂದಾಗಿನಿಂದ ದ್ವೇಷದ ರಾಜಕಾರಣವನ್ನೇ ಮಾಡುತ್ತಿದೆ.ಮೈತ್ರಿ ಸರ್ಕಾರದಲ್ಲಿ ಜಾರಿಯಾದ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ.  ಹೊಸದಾಗಿ  ಏನು ಬೇಕಾದರೂ ಮಂಜೂರು ಮಾಡಿಕೊಳ್ಳಲಿ.ಮಂಜೂರಾತಿ ಆಗಿರುವುದನ್ನು ರದ್ದು ಮಾಡಿದ್ದು  ಸರಿಯಲ್ಲ.ಈ ಬಗ್ಗೆ ನಮ್ಮ ಶಾಸಕರು ಸಭೆಯಲ್ಲಿ ಪ್ರಸ್ತಾಪಿಲೇಬೇಕು ಎಂದರು.ಮುಖ್ಯಮಂತ್ರಿ   ಯಡಿಯೂರಪ್ಪ ಅವರಂತೆ ಸ್ಪೀಕರ್ ಸಹ ಏಕೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು   ಪ್ರಶ್ನಿಸಿದ ಶಿವಕುಮಾರ್, ಸರ್ಕಾರದ ವಿರುದ್ಧ ತಮ್ಮ ಹೋರಾಟ ನಿರಂತರ ಎಂದು ಎಚ್ಚರಿಸಿದರು.ಕೆಪಿಸಿಸಿ ಅಧ್ಯಕ್ಷ ಸ್ಥಾನ ನೇಮಕ ವಿಳಂಬ ವಿಚಾರವಾಗಿ ಬೀದಿಯಲ್ಲಿ ಮಾತನಾಡುವುದು  ಸರಿಯಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಡಿ.ಕೆ.ಶಿವಕುಮಾರ್ ಉತ್ತರಿಸಿದರು.