ಬೆಂಗಳೂರು, ಮೇ 2, ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಮೃಗಾಲಯದ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಹಾರ ಮತ್ತು ಇನ್ನಿತರೆ ಸೌಲಭ್ಯಗಳಿಗೆ ಆರ್ಥಿಕ ಸಹಾಯವನ್ನು ಮಾಡಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ. ಸುಧಾ ನಾರಾಯಣಮೂರ್ತಿ ಅವರಿಗೆ ಪತ್ರ ಬರೆದಿದ್ದಾರೆ. ಭಾರತ ದೇಶವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಶಿಕ್ಷಣ, ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ವಲಯಗಳ ಅಭಿವೃದ್ಧಿಗಾಗಿ ತಮ್ಮದೇ ಆದ ರೀತಿಯಲ್ಲಿ ಸಹಕಾರ ನೀಡುತ್ತಿದ್ದು, ಮುಖ್ಯವಾಗಿ ದೇಶದ ಆರ್ಥಿಕತೆಯ ಬೆಳವಣಿಗೆಗೆ ತಮ್ಮ ಸಂಸ್ಥೆಯು ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಉದ್ಯೋಗ ಮತ್ತು ಅವಲಂಬಿತ ಕುಟುಂಬಗಳಿಗೆ ನಾರಾಯಣ ಮೂರ್ತಿ ಅವರು ಮತ್ತು ತಾವು ಆಸರೆಯಾಗಿದ್ದು, ತಾವುಗಳು ಭಗವಂತನ ಕೃಪೆಯಿಂದ ಮತ್ತಷ್ಟು ಹೆಚ್ಚಿನ ಸೇವೆ ಸಲ್ಲಿಸಲು ಆಯಸ್ಸು, ಆರೋಗ್ಯವನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ. ಇದಲ್ಲದೆ ತಾವು ದಿನದ 24 ಗಂಟೆಯ ಬಿಡುವಿಲ್ಲದೆ ಅಹರ್ನಿಶಿ ಜನಸೇವೆಯಲ್ಲಿ ತೊಡಗಿಸಿಕೊಂಡು ನಮ್ಮಂತವರಿಗೆ ಮಾದರಿಯಾಗಿದ್ದೀರಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ತಾವು ಇತ್ತೀಚೆಗೆ ಸುಮಾರು 125 ವರ್ಷಕ್ಕೂ ಹೆಚ್ಚು ಇತಿಹಾಸವನ್ನು ಹೊಂದಿರುವ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ್ದೆ. ಮೃಗಾಲಯವು ಸ್ವಾಯತ್ತ ಸಂಸ್ಥೆಯಾಗಿದ್ದು, 2002ರಿಂದ ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯ ಪಡೆಯದೆ ವೀಕ್ಷಕರು ನೀಡುವ ಹಣದಿಂದಲೇ ಪ್ರಾಣಿಗಳ ಮತ್ತು ಪಕ್ಷಿಗಳ ಆಹಾರ, ಸಿಬ್ಬಂದಿ ವೇತನ ಹಾಗೂ ಮ್ರಗಾಲಯದ ನಿರ್ವಹಣೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಮಾಡಲಾಗುತ್ತಿದೆ. ಅಲ್ಲಿನ ಪ್ರಾಣಿ ಮತ್ತು ಪಕ್ಷಿಗಳಿಗೆ ಮೃಗಾಲಯದ ಅಧಿಕಾರಿಗಳು ಅತ್ಯಂತ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಿದ್ದಾರೆ. ಆದರೂ ಸಹ ನನ್ನ ಮತಕ್ಷೇತ್ರವಾದ ಯಶವಂತಪುರದ ದಾನಿಗಳಿಂದ ಸುಮಾರು ರೂ. 73.16 ಲಕ್ಷಗಳ ಮೊತ್ತವನ್ನು ಸಂಗ್ರಹಿಸಿ ನೀಡಲಾಗಿದೆ. ಮಾತ್ರವಲ್ಲಿ ಮೇ 2ರಂದು 45.30 ಲಕ್ಷಗಳ ಚೆಕ್ಕುಗಳನ್ನು ಮೃಗಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದೇನೆ. ತಾವು ಕೂಡ ತಮ್ಮ ಫೌಂಡೇಶನ್ ವತಿಯಿಂದ ಮೃಗಾಲಯದ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಹಾರ ಮತ್ತು ಇನ್ನಿತರೆ ಸೌಲಭ್ಯಗಳಿಗೆ ಆರ್ಥಿಕ ಸಹಾಯವನ್ನು ಮಾಡಬೇಕು ಎಂದು ಪತ್ರದಲ್ಲಿ ಸಚಿವರು ಮನವಿ ಮಾಡಿದ್ದಾರೆ.