ಧಾರವಾಡ 27: ಪ್ರಕೃತಿಯಲ್ಲಿ ನಡೆಯಲಿರುವ ಅತ್ಯಂತ ಕೌತುಕದ ಅಪರೂಪದ ವಿದ್ಯಮಾನ ಕಂಕಣ ಸೂರ್ಯಗ್ರಹಣವನ್ನು ವೀಕ್ಷಿಸಲು ಧಾರವಾಡ-ಹುಬ್ಬಳ್ಳಿ ಜನತೆ ನೃಪತುಂಗ, ಮೈಲಾರ ಗುಡ್ಡದಲ್ಲಿ ನೆರೆದಿದ್ದರು.
ಬ್ರೇಕ್ಥ್ರೂ ಸೈನ್ಸ್ ಸೊಸೈಟಿ ವತಿಯಿಂದ ಸೂರ್ಯಗ್ರಹಣ ವೀಕ್ಷಣೆಗೆ ಸುರಕ್ಷಿತ ಕನ್ನಡಕದ ವ್ಯವಸ್ಥೆ ಮಾಡಲಾಗಿತ್ತು. ನೃಪತುಂಗ ಬೆಟ್ಟಕ್ಕೆ ಬೆಳಗ್ಗೆ 7-30ಯಿಂದ ಜನತೆ ಸುರಕ್ಷಿತ ಕನ್ನಡಕ್ಕಗಾಗಿ ಕಾಯುತ್ತಿದ್ದರು. ಗ್ರಹಣ ಬೆಳಗ್ಗೆ 8.05ಕ್ಕೆ ಪ್ರಾರಂಭವಾಗಿ 9.29ಕ್ಕೆ ಗರಿಷ್ಟ ತಲುಪಿ ಬೆಳಗ್ಗೆ 11.11ಕ್ಕೆ ಮುಕ್ತಾಯವಾಯಿತು. ಸುಮಾರು ಶೇಕಡ 85 ರಷ್ಷು ಗ್ರಹಣ ಈ ಭಾಗದಲ್ಲಿ ಗೋಚರಿಸಿತು. 9.15 ರ ವೇಳೆಗೆ ಸೂರ್ಯನನ್ನು ಚಂದ್ರ ಮರೆಮಾಚಿದ್ದರಿಂದ ವಾತಾವರಣ ಮಂಕುಕವಿದಂತಾಗಿತ್ತು.
ನೂರರು ಸಂಖ್ಯೆಯಲ್ಲಿ ಪೋಷಕರು ತಮ್ಮ ಮಕ್ಕಳೊಂದಿಗೆ ಸೂರ್ಯಗ್ರಹಣ ವೀಕ್ಷಣೆಗೆ ಬಂದಿದ್ದು ಅವರಲ್ಲಿರುವ ವಿಜ್ಞಾನ ಆಸಕ್ತಿಯನ್ನು ತೋರುತ್ತಿತ್ತು. ಜೆ.ಎಸ್.ಎಸ್ ಕಾಲೇಜಿನ ಪ್ರಾಧ್ಯಾಪಕಿ ಜ್ಯೋತಿ ಅಕ್ಕಿಯವರು ಮಾತನಾಡಿ ಸುರಕ್ಷಿತ ಗ್ರಹಣ ವೀಕ್ಷಣೆ ಬಗ್ಗೆ ವಿವರಿಸಿ, ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಕರೆ ನೀಡಿದರು. ಬ್ರೇಕ್ಥ್ರೂ ಸೈನ್ಸ್ ಸೊಸೈಟಿಯ ಜಿಲ್ಲಾ ಸಂಚಾಲಕ ದೀಪರವರು ಉಪಸ್ಥಿತರಿದ್ದರು. ಬ್ರೇಕ್ಥ್ರೂ ಸೈನ್ಸ್ ಸೊಸೈಟಿಯ ಕಾರ್ಯಕರ್ತರಾದ ಮಹೇಶ್, ಆನಂದ್, ಹನುಮಂತ್, ಮಾರುತಿ, ರವಿ ಇತರರು ಇದ್ದರು.