ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಸಮಾಜ ಮುಂದೆ ಬರಬೇಕು

  ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಸಮಾಜ ಮುಂದೆ ಬರಬೇಕು Society must move forward economically, socially, educationally, and politically.

ಲೋಕದರ್ಶನ ವರದಿ 

 ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಸಮಾಜ ಮುಂದೆ ಬರಬೇಕು 

 ಜಮಖಂಡಿ 18: ಡಾ.ಅಂಬೇಡ್ಕರ ಅವರು ನೀಡಿರುವ ಸಂವಿಧಾನದ ಫಲವಾಗಿ ಇಂದು ಸಮಾಜ ಬೆಳಕಿಗೆ ಬಂದಿದೆ. ಸರ್ಕಾರ ಅನೇಕ ಯೋಜನೆಗಳು, ಸಾಲಸೌಲಭ್ಯಗಳನ್ನು ಸಮಾಜಕ್ಕೆ ನೀಡಿದೆ. ಅವೆಲ್ಲದರ ಸದುಪಯೋಗ ಪಡಿಸಿಕೊಂಡು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಸಮಾಜ ಮುಂದೆ ಬರಬೇಕು ಎಂದು ಲೋಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.  

          ನಗರದ ಬಸವಭವನದಲ್ಲಿ ನಡೆದ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಸಹಯೋಗದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಗಾಗಿ ಇಂಥಹ ಕಾರ್ಯಕ್ರಮಗಳು ನಡೆಯಬೇಕು, ಸಮಾಜದ ಸ್ಥಿತಿಯನ್ನು ಸುಧಾರಿಸುವ ಅದರ ಬಗ್ಗೆ ಚರ್ಚಿಸುವ ಕೆಲಸವಾಗ ಬೇಕಿದೆ ಎಂದರು.  

       ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ವಾಲ್ಮೀಕಿ ಸಮಾಜವನ್ನು ಮೇಲೆತ್ತುವ ಕೆಲಸವಾಗಬೇಕಿದೆ. ಆನಿಟ್ಟಿನಲ್ಲಿ ಕೆಲಸಗಳು ನಡೆಯಬೇಕು. ಮಹರ್ಷಿ ವಾಲ್ಮೀಕಿ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.  

          ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ದೇಶದಾದ್ಯಂತ ಜಾತಿಯತೆ ಹೆಚ್ಚುತ್ತಿದೆ, ರಾಜಕೀಯ ಲಾಭಕ್ಕಾಗಿ ಜಾತಿಗಳನ್ನು ಒಡೆದು ಹಾಕುವ ಕೆಲಸ ನಡೆಯುತ್ತಿದೆ. ನಮ್ಮ ಮನೆಗಳಲ್ಲಿ ಯಾವುದೇ ಸಂಪ್ರದಾಯ ಆಚರಣೆಗಳು, ದೇವರ ಪೂಜೆಗಳಿದ್ದರೂ ನಾವೆಲ್ಲ ಹಿಂದೂಗಳು ನಾವೆಲ್ಲರು ಸನಾತನಧರ್ಮದವರು ಎಂಬ ಭಾವನೆ ಬರಬೇಕಿದೆ. ರಾಮಾಯಣ ಮಹಾಕಾವ್ಯ ರಚಿಸಿರುವ ವಾಲ್ಮೀಕಿ ಮಹರ್ಷಿಗಳು.  

          ಶ್ರೀರಾಮ ಕ್ಷತ್ರಿಯ , ಶ್ರೀಕೃಷ್ಣ ಗೊಲ್ಲರ ಕುಲದವನು ಅವರನ್ನು ಪೂಜಿಸುವರು ಬ್ರಾಹ್ಮಣರು, ಜನಿವಾರ ಧರಿಸುವರು ಮಾತ್ರ ಹಿಂದುಗಳು ಎಂಬ ಭಾವನೆಯನ್ನು ಬಿತ್ತುವ ಕೆಲಸ ನಡೆದಿದೆ. ಹಿಂದು ಎಂದರೆ ಅದು ಜಾತಿಯ ಪ್ರತಿಕ ಅಲ್ಲ ಅದೊಂದು ಜೀವನ ಪದ್ಧತಿಯಾಗಿದೆ. ಉಳಿದೆಲ್ಲ ಸಂಸ್ಕೃತಿಗಳಿಗೆ ಆಧಾರಗಳಿವೆ, ಆದರೆ ಹಿಂದು ಮಾತ್ರ ಸನಾತನ, ಆದಿ ಅಂತ್ಯ ರಹಿತವಾದ ಪದ್ಧತಿಯಾಗಿದೆ. ದೇವ ನಿರ್ಮಿತ ದೇಶ ಭಾರತ 15 ಲಕ್ಷ ವರ್ಷಗಳ ಹಿಂದೆ ಶ್ರೀರಾಮ ಸೇತು ನಿರ್ಮಾಣವಾಗಿದೆ ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಮಹಾತ್ಮಾ ಗಾಂಧಿಜಿ ಅವರು ಭಾರತವನ್ನು ದೇವರನಾಡು ಎಂದು ಕರೆದಿದ್ದಾರೆ. ವಿಶ್ವದಲ್ಲಿ ಭಾರತ ಅತ್ಯಂತ ಬಲಿಷ್ಠ ಮತ್ತು ಶ್ರೀಮಂತ ರಾಷ್ಟ್ರವಾಗಲಿದೆ. ಸಾಧು ಸಂತರ ಮಾರ್ಗದರ್ಶನದಲ್ಲಿ ಒಗ್ಗಟ್ಟಿನಿಂದ ರಾಷ್ಟ್ರಕಟ್ಟುಲು ಎಲ್ಲರೂ ಮುಂದಾಗಬೇಕಿದೆ ಎಂದು ಹೇಳಿದರು.  

        ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿದರು, ಬಬಲೇಶ್ವರದ ಶಿಕ್ಷಕ ಡಿ,ಜಿ, ನಾಯಕ ವಿಶೇಷ ಉಪನ್ಯಾಸ ನೀಡಿದರು. ಅಬಕಾರಿ ಸಚಿವ ಆರ್,ಬಿ, ತಿಮ್ಮಾಪೂರ, ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ, ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಗಂಗಾಧರ ಮಾರದಾನಿ, ಸಮಾಜ ಕಲ್ಯಾಣ ಅಧಿಕಾರಿ ಜಗದೇವ ಪಾಸೋಡಿ, ಮುಖಂಡರಾದ ಕಾಡು ಮಾಳಿ, ಶ್ರೀಶೈಲ ದಳವಾಯಿ, ವರ್ಧಮಾನ ನ್ಯಾಮಗೌಡ, ಡಿಎಸ್‌ಎಸ್‌ನ ನಾಗವಾರ ಬಣದ ರಾಜ್ಯಾಧ್ಯಕ್ಷ ಶಾಮರಾವ ಘಾಟಗೆ, ಪುಟ್ಟು ಪಾಣಿ, ಐಎನ್‌ಟಿಯುಸಿ ಜಿಲ್ಲಾಅಧ್ಯಕ್ಷ ತೌಫಿಕ್ ಪಾರ್ಥನಳ್ಳಿ, ರಾಜು ಮೇಲಿನಕೇರಿ, ಶಂಕರ ಕಾಂಬಳೆ ಹಾಗೂ ಸಮಾಜದ ಮುಖಂಡರು ವೇದಿಕೆಯಲ್ಲಿದ್ದರು.  

         ಶಂಕರ ಲಮಾಣಿ, ಸವಿತಾಬಾಯಿ ಅವರು ಕಾರ್ಯಕ್ರಮ ನಿರೂಪಿಸಿದರು. ಪರಶುರಾಮ ಬಿಸನಾಳ ಸ್ವಾಗತಿಸಿದರು. ನಗರದ ಹಳೆಯ ತಹಸೀಲ್ದಾರ ಕಚೇರಿಯಿಂದ ಬಸವಭವನದವರೆಗೆ ಭವ್ಯ ಮೆರವಣಿಗೆ ನಡೆಯಿತು. 


ಪೋಟೋ : ಜಮಖಂಡಿ ನಗರದ ಬಸವಭವನದಲ್ಲಿ ನಡೆದ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಸಹಯೋಗದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಲೋಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಿದರು,