ಸಾರ್ವಜನಿಕರು ಕೈ ಜೋಡಿಸಿ ಸಮೀಕ್ಷೆಯನ್ನು ಯಶಸ್ವಿಗೊಳಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು
Social and educational survey launched in the district
ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಚಾಲನೆ
ಧಾರವಾಡ 22: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಇಂದಿನಿಂದ ರಾಜ್ಯಾದ್ಯಂತ ಆರಂಭಿಸಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಧಾರವಾಡ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ. ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಅವಳಿ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಸಮೀಕ್ಷಾ ಕಾರ್ಯವನ್ನು ಪರೀಶೀಲಿಸಿದರು.
ಅವರು ಇಂದು (ಸೆ.22) ಮಧ್ಯಾಹ್ನ ಧಾರವಾಡ ನಗರದ ಪೆಂಡಾರಗಲ್ಲಿ, ತಡಕೋಡ ಓಣಿ ಪ್ರದೇಶಗಳಲ್ಲಿ ಸಂಚರಿಸಿ, ಸಮೀಕ್ಷಿಕರು ಮಾಡುತ್ತಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪರೀಶೀಲಿಸಿ, ಸಮೀಕ್ಷೆದಾರರಿಂದ ಮಾಹಿತಿ ಪಡೆದು, ಮಾರ್ಗದರ್ಶನ ಮಾಡಿದರು.
ಪೆಂಡಾರಗಲ್ಲಿಯ ರೇಣುಕಾ ಬೋಮ್ಮಣ್ಣವರ ಮನೆಯ ಕುಟುಂಬ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿಗಳು, ಕುಟುಂಬದ ಮುಖ್ಯಸ್ಥೆ ರೇಣುಕಾ ಅವರಿಂದ ಸಮೀಕ್ಷಾ ಪ್ರಶ್ನಾವಳಿ ಕುರಿತು ಮಾಹಿತಿ ಪಡೆದು, ಸಮೀಕ್ಷೆಯ ಉಪಯುಕ್ತತೆಯನ್ನು ವಿವರಿಸಿದರು. ಮಗಳು ಸೌಭಾಗ್ಯ ಇದ್ದರು.
ಸಮೀಕ್ಷಾ ಪ್ರದೇಶಗಳ ಭೇಟಿ ಸಮಯದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಸಮೀಕ್ಷಿಕರಿಗೆ ತರಬೇತಿ ನೀಡಲಾಗಿದೆ. ಸಮೀಕ್ಷೆ ನಿಯೋಜನೆ ಆಗಿರುವ ಸಿಬ್ಬಂದಿಗಳು ತಮಗೆ ಹಂಚಿಕೆ ಆಗಿರುವ ಮನೆ, ಕುಟುಂಬಗಳ ಮಾಹಿತಿಯನ್ನು ನಿಯಮಾನುಸಾರ ಭರ್ತಿ ಮಾಡಬೇಕು. ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ಜಿಲ್ಲಾ ತಾಂತ್ರಿಕ ಸಮಾಲೋಚಕರಿಗೆ ಅಥವಾ ಸಹಾಯವಾಣಿಗೆ ಕರೆ ಮಾಡಿ, ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮೀಕ್ಷಿಕರು ತಮಗೆ ಗುರುತಿಸಿರುವ ಎಲ್ಲ ಮನೆ ಹಾಗೂ ಕುಟುಂಬಗಳ ಸಮೀಕ್ಷೆಯನ್ನು ಅಕ್ಟೋಬರ್ 7 ರೊಳಗೆ ಪೂರ್ಣಗೊಳಿಸಬೇಕು. ಪ್ರತಿದಿನ ಸಂಜೆ ಅಂದಿನ ಸಮೀಕ್ಷೆ ಕಾರ್ಯದ ಪ್ರಗತಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು ಎಂದು ಹೇಳಿದರು.
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಧಾರವಾಡ ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. ಸೆಪ್ಟಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ಒಟ್ಟು 16 ದಿನಗಳ ಕಾಲ ಸಮೀಕ್ಷೆ ಮಾಡಲು ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.
ಧಾರವಾಡ ಜಿಲ್ಲೆಯಲ್ಲಿ ಸುಮಾರು 5 ಲಕ್ಷ 46 ಸಾವಿರ ಕುಟುಂಬಗಳನ್ನು ಗುರುತಿಸಲಾಗಿದೆ. ಇದನ್ನು ಹೆಸ್ಕಾಂ ಇಲಾಖೆ ಮುಖಾಂತರ ಪ್ರತಿಯೊಂದು ಮನೆಗೂ ಪ್ರತ್ಯೇಕವಾಗಿ ಐಡಿ ಕೊಡುವ ಮುಖಾಂತರ ಅದನ್ನು ಗುರುತಿಸಿ, 150 ರಿಂದ 200 ಮನೆಗಳನ್ನು ಒಂದು ಗುಂಪಾಗಿ ವಿಂಗಡಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 4,880 ಸಮೀಕ್ಷಿಕರು ಮತ್ತು ಮೇಲ್ವಿಚಾರಣೆ ಮಾಡುವುದಕ್ಕೆ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಪ್ರತಿ ಹಂತದಲ್ಲೂ ರಾಜ್ಯ, ಜಿಲ್ಲಾ, ಒಂದೊಂದು ಬ್ಲಾಕ್ ಮಟ್ಟದಲ್ಲಿ ತರಬೇತಿಯನ್ನು ನೀಡಲು ಮಾಸ್ಟರ್ ಟ್ರೈನರ್‌ಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗಿದೆ. ಸಂಬಂಧಪಟ್ಟ ಶಾಸಕರ ಗಮನಕ್ಕೆ ತೆಗೆದುಕೊಂಡು ಬಂದು, ಇಂದು ಚಾಲನೆ ನೀಡಿದೆ. ಎಲ್ಲಾ ಸಾರ್ವಜನಿಕರು ಕೈ ಜೋಡಿಸಿ ಸಮೀಕ್ಷೆಯನ್ನು ಯಶಸ್ವಿ ಮಾಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಭಾನುಮತಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ತಾಲೂಕು ವಿಸ್ತರಣಾ ಅಧಿಕಾರಿ ಸಂಜೀವ ಕೆಸರಿ, ಬ್ಲಾಕ್ ಮೇಲ್ವಿಚಾರಕರು, ನಿಲಯಪಾಲಕರು ಸಮೀಕ್ಷಿಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 