ಹಿಂದುಳಿದ ವರ್ಗಗಳ ಸಾಮಾಜಿ ಮತ್ತು ಶೈಕ್ಷಣಿಕ ಸಮೀಕ್ಷೆ

ಹಿಂದುಳಿದ ವರ್ಗಗಳ ಸಾಮಾಜಿ ಮತ್ತು ಶೈಕ್ಷಣಿಕ ಸಮೀಕ್ಷೆ Social and Educational Survey of Backward Classes

ಸಮೀಕ್ಷೆಗೆ ನಿಯೋಜಿತ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು; ಅಗತ್ಯ ತರಬೇತಿ, ಸಹಕಾರಕ್ಕೆ ಜಿಲ್ಲಾಡಳಿತ ಸಿದ್ದ; ನಿರ್ಲಕ್ಷ್ಯ, ಉದಾಸೀನತೆ ತೋರುವವರ ವಿರುದ್ಧ ಶಿಸ್ತುಕ್ರಮ: ಜಿಲ್ಲಾಧಿಕಾರಿ ದಿವ್ಯ ಪ್ರಭು 

ಧಾರವಾಡ  26: ಸಾರ್ವಜನಿಕ ಅಭಿವೃದ್ಧಿಯ ಹಿತಾಸಕ್ತಿಯಿಂದ ರಾಜ್ಯ ಸರ್ಕಾರವು ಕೈಗೊಂಡಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜಿಸಿರುವ ಶಾಲಾ ಶಿಕ್ಷಣ, ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಸಮೀಕ್ಷೆಗೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕು. ಸಮೀಕ್ಷೆದಾರರಿಗೆ ಅಗತ್ಯವಿರುವ ತರಬೇತಿ, ಸಹಕಾರಕ್ಕೆ ಜಿಲ್ಲಾಡಳಿತ ಸಿದ್ಧವಿದೆ. ಆದರೂ ನೆಪ ಹೇಳುವ, ಕರ್ತವ್ಯದಲ್ಲಿ ನಿರ್ಲಕ್ಷ್ಯ ಮತ್ತು  ಉದಾಸೀನತೆ ತೋರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಆಯಾ ಇಲಾಖೆ ಮುಖ್ಯಸ್ಥರಿಗೆ ಹಾಗೂ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಸಮೀಕ್ಷೆಯ ಜಿಲ್ಲಾ ಸಮನ್ವಯ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.  

ಅವರು ಇಂದು (ಸೆ.26) ಮಧ್ಯಾಹ್ನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜಿಸಿರುವ ಜಿಲ್ಲೆಯ ಎಲ್ಲ ಮೇಲ್ವಿಚಾರಕರ ಹಾಗೂ ನಿಯೋಜಿತ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ, ಸಮೀಕ್ಷೆಯ ಪ್ರಗತಿ ಪರೀಶೀಲನೆ ಮಾಡಿ, ಮಾತನಾಡಿದರು.  

ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಸೆಪ್ಟೆಂಬರ 22 ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದೆ. ಸಮೀಕ್ಷೆಯಲ್ಲಿ ಆರಂಭಿಕವಾಗಿ ತಾಂತ್ರಿಕ ಸಮಸ್ಯೆಗಳು ಕಂಡು ಬಂದರೂ, ತಕ್ಷಣ ಸಂಬಂಧಿಸಿದ ಸಿಬ್ಬಂದಿ ಹಾಗೂ ತಾಂತ್ರಿಕ ಸಮಾಲೋಚಕರು ಪರಿಹರಿಸಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆಗಾಗಿ ಹೊಸ 3.5 ಆ್ಯಪ್‌ನ್ನು ಸಹ ಬಿಡುಗಡೆ ಮಾಡಿ, ಪ್ರತಿ ಸಮೀಕ್ಷೆದಾರರು ತಮ್ಮ ಮೊಬೈಲ್‌ದಲ್ಲಿ ಅಳವಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಈಗ ಯಾವುದೇ ರೀತಿಯ ಓಟಿಪಿ ಸಮಸ್ಯೆ ಇಲ್ಲ. ಆದಾಗ್ಯೂ ಇವತ್ತಿನವರೆಗೆ ನಿಗದಿತ ಗುರಿಯ ಪ್ರಕಾರ ಸಮೀಕ್ಷೆಯಲ್ಲಿ ನೀರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಕಾಣುತ್ತಿಲ್ಲ ಎಂದು ಅವರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.  

ಮಾನ್ಯ ಮುಖ್ಯ ಮಂತ್ರಿಗಳು ಇಂದು ಬೆಳಿಗ್ಗೆ ವಿಡಿಯೋ ಸಂವಾದದ ಮೂಲಕ ಎಲ್ಲ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ ಸಿಇಓ ಗಳ ಸಭೆ ಜರುಗಿಸಿ, ಸಮೀಕ್ಷೆಯ ಪ್ರಗತಿ ಪರೀಶೀಲನೆ ಮಾಡಿದ್ದಾರೆ. ಗುರಿ ಅನುಸಾರ ಜಿಲ್ಲೆಗಳಲ್ಲಿ ಸಮೀಕ್ಷಾ ಪ್ರಗತಿ ಕಾಣದಿರುವುದು ಮತ್ತು ಕೆಲವು ಸರ್ಕಾರಿ ನೌಕರರು ಸಮೀಕ್ಷೆಗೆ ಹಾಜರಾಗದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಅವರಿಗೆ ಸಮೀಕ್ಷೆಗೆ ಹಾಜರಾಗಲು ನಿರ್ದೇಶನ ನೀಡಿ, ಇಲ್ಲದಿದ್ದರೆ ನಾಳೆಯೊಳಗೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಸರ್ಕಾರದ ಕಾರ್ಯವಾಗಿರುವದರಿಂದ ನಿಯೋಜನೆಗೊಂಡಿರುವ ಯಾವ ಸರ್ಕಾರಿ ನೌಕರನೂ ಸಹ ಸಮೀಕ್ಷೆಯಿಂದ ವಿಮುಖವಾಗುವಂತಿಲ್ಲ. ಅನಾರೋಗ್ಯ, ಅಂಗವೈಕಲ್ಯ, ಗರ್ಬಿಣಿ ಸೇರಿದಂತೆ ವಿನಾಯಿತಿ ನೀಡಿರುವವರನ್ನು ಹೊರತುಪಡಿಸಿ, ಉಳಿದ ಎಲ್ಲರೂ ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೋಳ್ಳಬೇಕೆಂದು ನಿರ್ದೇಶಿಸಿದ್ದಾರೆ. ಸರ್ಕಾರವು ಈ ಮಹತ್ವದ  ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಯೋಜಿತ ಎಲ್ಲರೂ ಸಮನ್ವಯ, ಸಹಕಾರದಿಂದ ಭಾಗವಹಿಸಿ, ಸಮೀಕ್ಷೆಯನ್ನು ಯಶಸ್ವಿಗೊಳಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  

ಜಿಲ್ಲೆಯಲ್ಲಿ ನಿಯೋಜನೆಗೊಂಡಿರುವ ಮೇಲ್ವಿಚಾರಕರು ಹಾಗೂ ಸಮೀಕ್ಷೆದಾರರು ಸಮೀಕ್ಷಾ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಪ್ರತಿ ಮೇಲ್ವಿಚಾರಕರು ತಮ್ಮ ಅದೀನದಲ್ಲಿ ಕರ್ತವ್ಯ ನಿರ್ವಹಿಸುವ ಸಮೀಕ್ಷೆದಾರರನ್ನು ಸಂಪರ್ಕಿಸಿ, ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಸಮೀಕ್ಷೆಯ ಪ್ರಗತಿಯನ್ನು ಪರೀಶೀಲಿಸಿ, ಮಾರ್ಗದರ್ಶನ ಮಾಡಬೇಕು. ಮತ್ತು ಪ್ರಗತಿ ಮಾಹಿತಿಯನ್ನು ಪಡೆದುಕೊಳ್ಳಬೇಕು. ಸಮೀಕ್ಷೆದಾರರಿಗೆ ಉಂಟಾಗುವ ಸಮಸ್ಯೆಗಳನ್ನು ತಮ್ಮ ಹಂತದಲ್ಲಿ ಅಥವಾ ತಹಶೀಲ್ದಾರ, ತಾಂತ್ರಿಕ ಸಮಾಲೋಚಕರ ನೆರವಿನಿಂದ ಬಗೆಹರಿಸಬೇಕು. ಕಾಲಮಿತಿಯಲ್ಲಿ ಗುರಿ ಸಾಧಿಸಬೇಕೆಂದು ಅವರು ಹೇಳಿದರು.  

ಸಮೀಕ್ಷೆದಾರರು ಸಮೀಕ್ಷೆಯಲ್ಲಿ ನಿರಾಸಕ್ತಿ ತೊರಿದರೆ ಅಥವಾ ಕ್ಷೇತ್ರ ಭೇಟಿ ನೀಡಿದೇ ಇರುವದು, ಮೊಬೈಲ್ ಸ್ವೀಚ್ಡ್‌ ಆಪ್ ಮಾಡುವುದು, ಅನಗತ್ಯ ಕಾರಣ, ನೆಪಗಳನ್ನು ತಿಳಿಸಿ ಉದಾಸೀನತೆ ಹಾಗೂ ಕರ್ತವ್ಯ ಲೋಪ ಮಾಡಿದರೆ ತಕ್ಷಣ ಮೇಲ್ವಿಚಾರಕರು ತಹಶೀಲ್ದಾರರಿಗೆ ಹಾಗೂ ಸಮೀಕ್ಷೆದಾರರ ಇಲಾಖೆಯ ಮುಖ್ಯಸ್ಥರಿಗೆ ಲಿಖಿತವಾಗಿ ವರದಿ ನೀಡಬೇಕು. ಈ ವರದಿಗಳನ್ವಯ ಅಂತವರನ್ನು ಅಮಾನತ್ತುಗೊಳಿಸಲಾಗುತ್ತದೆ. ಮತ್ತು ಜಿಲ್ಲಾಡಳಿದಿಂದ ಆಯಾ ಇಲಾಖೆಯ ಮುಖ್ಯಸ್ಥರಿಗೆ ಹಾಗೂ ಸರ್ಕಾರಕ್ಕೆ ಅಂತಹ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಇಲಾಖಾ ತನಿಖೆ ಮಾಡಿ, ಶಿಸ್ತು ಕ್ರಮಕೈಗೊಳ್ಳಲು ಶಿಫಾರಸ್ಸು ಮಾಡುವುದಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಎಚ್ಚರಿಕೆ ನೀಡಿದರು.  

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಆಯಾ ಇಲಾಖೆಯ ಜಿಲ್ಲಾ ಮುಖ್ಯಸ್ಥರ ಹಾಗೂ ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನದಿಂದ ತೆರಳುವಂತಿಲ್ಲ. ಮತ್ತು ರಜೆ ಹೊಗುವಂತಿಲ್ಲ. ತೀರಾ ಅನಿವಾರ್ಯತೆ ಸಂದರ್ಭಗಳಿದ್ದಲ್ಲಿ ತಹಶೀಲ್ದಾರ ಅವರನ್ನು ಸಂಪರ್ಕಿಸಿ ಲಿಖಿತ ಮನವಿ ನೀಡಿ, ಪರ್ಯಾಯವಾಗಿ ಸಮೀಕ್ಷೆದಾರರನ್ನು ನಿಯೋಜಿಸಿ, ಅನುಮತಿ ಪಡೆಯಬೇಕು ಎಂದು ಅವರು ಹೇಳಿದರು.  

ಜಿಲ್ಲೆಯಲ್ಲಿ ಅಂದಾಜು 5,46,098 ಮನೆಗಳಿದ್ದು, ಈ ಎಲ್ಲ ಮನೆಗಳಲ್ಲಿನ ಕುಟುಂಬಗಳ ಸಮೀಕ್ಷೆಗಾಗಿ 4,886 ಬ್ಲಾಕ್‌ಗಳನ್ನು ರಚಿಸಲಾಗಿದೆ. ಸಮೀಕ್ಷೆಗಾಗಿ 4,671 ಜನ ಸಮೀಕ್ಷೆದಾರರನ್ನು ತರಬೇತಿ ನೀಡಿ, ಸಿದ್ಧಗೊಳಿಸಲಾಗಿದೆ. ಸಮೀಕ್ಷೆದಾರರ ಮೇಲ್ವಿಚಾರಣೆಗಾಗಿ 208 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ತಾಲೂಕಾ ಮಟ್ಟದಲ್ಲಿ ತಹಶೀಲ್ದಾರ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ತಾಲೂಕಾ ಪಂಚಾಯತ ಇಓ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾ ವಿಸ್ತಾರಣಾಧಿಕಾರಿ ಸಮೀಕ್ಷಾ ಕಾರ್ಯವನ್ನು ಮೇಲ್ವಿಚಾರಣೆ ನಿರ್ವಹಿಸುತ್ತಾರೆ. ಅಕ್ಟೋಬರ್ 7 ರೊಳಗಾಗಿ ಜಿಲ್ಲೆಯ ಎಲ್ಲ ಕುಟುಂಬಗಳನ್ನು ಸಮೀಕ್ಷೆ ಮಾಡಬೇಕೆಂದು ಅವರು ಹೇಳಿದರು.  

ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಎಲ್ಲ ಸಮೀಕ್ಷೆದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಸರ್ಕಾರ ನಿಗದಿಪಡಿಸಿರುವ ಗೌರವಧನವನ್ನು ಜಿಲ್ಲಾಡಳಿತದಿಂದ ಬಿಡುಗಡೆ ಮಾಡಲಾಗುತ್ತದೆ. ಸರ್ಕಾರವು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಜಿಲ್ಲಾಡಳಿತಕ್ಕೆ ಗೌರವಧನ ಬಿಡುಗಡೆಗೆ ಕ್ರಮವಹಿಸಿದೆ ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು. 

ಸಮೇಕ್ಷೆದಾರರಿಗೆ ಸಮೀಕ್ಷೆಗೆ ಅನುಕೂಲವಾಗುವಂತೆ ಯುಎಚ್‌ಐಡಿ ಸಂಖ್ಯೆ ಇರುವ ಹಾಗೂ ಈಗಾಗಲೇ ಪಟ್ಟಿ ಮಾಡಿರುವ ಸಮೀಕ್ಷಾ ಮನೆಗಳ ವಿವರವಿರುವ ಪಟ್ಟಿಯನ್ನು ಕೂಡಲೇ ಸಮೀಕ್ಷೆದಾರರಿಗೆ ಪೂರೈಸಲು ಹೆಸ್ಕಾಂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.   

ಸಮೀಕ್ಷೆದಾರರು ಸಮೀಕ್ಷೆಯಲ್ಲಿ ಯಾವುದೇ ರೀತಿಯ ತಾಂತ್ರಿಕ ಅಡಚಣೆ ಎದುರಿಸಿದ್ದಲ್ಲಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಾಲೂಕುವಾರು ನಿಯೋಜಿಸಿರುವ ತಾಂತ್ರಿಕ ಸಮಾಲೋಚಕರನ್ನು ಸಂಪರ್ಕಿಸಿ, ಪರಿಹರಿಸಿಕೊಳ್ಳಬಹುದು. ಪ್ರತಿ ತಾಲೂಕಿಗೆ ಇಬ್ಬರಂತೆ ಪ್ರತಿ ದಿನ ಎರಡು ಶಿಫ್ಟ್‌ದಲ್ಲಿ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯವರಿಗೆ ತಾಂತ್ರಿಕ ಸಮಾಲೋಚಕರು ಲಭ್ಯವಿರುತ್ತಾರೆ. ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.  

ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಸಮೀಕ್ಷೆದಾರರಿಗೆ ಸಮೀಕ್ಷೆ ಆರಂಭವಾಗುವ ಪೂರ್ವದಲ್ಲಿಯೇ ಮಾಹಿತಿ ನೀಡಿ, ಸಮೀಕ್ಷೆಗೆ ಆದೇಶ ಪತ್ರ ನೀಡಲಾಗಿದೆ. ಮತ್ತು ಮಾಸ್ಟರ್ ಟ್ರೇನರ್‌ಗಳಿಂದ ಅಗತ್ಯ ತರಬೇತಿಯನ್ನು ಜಿಲ್ಲಾಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ನೀಡಲಾಗಿದೆ. ಪ್ರತಿ ದಿನ ಎಲ್ಲ ಸಮೀಕ್ಷೆದಾರರಿಗೆ ಅವರ ಮೇಲ್ವಿಚಾರಕರ ಮೂಲಕ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನವನ್ನು ನೀಡಲಾಗುತ್ತಿದೆ. ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿಗಳು ತಮಗೆ ವಹಿಸಿರುವ ಕರ್ತವ್ಯವನ್ನು ನಿಯಮಾನುಸಾರ ನಿರ್ವಹಸಿಬೇಕು. ತಪ್ಪದಲ್ಲಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದರು.  

ವೇದಿಕೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ರೀತಿಕಾ ವರ್ಮಾ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ನಗರಾಭಿವೃದ್ಧಿಕೊಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎಸ್‌.ಕೆಳದಿಮಠ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಾನುಮತಿ ಎಚ್‌. ಇದ್ದರು.  

ಸಭೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜನೆಗೊಂಡಿರುವ ಸಮೀಕ್ಷೆದಾರರ ಮೇಲ್ವಿಚಾರಕರು, ವಿವಿಧ ಇಲಾಖೆಗಳ ಜಿಲ್ಲಾ ಮುಖ್ಯಸ್ಥರು, ಎಲ್ಲ ತಾಲೂಕುಗಳ ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.