ಉದ್ಯೋಗಾವಕಾಶ ಹೆಚ್ಚಳಕ್ಕೆ ಕೌಶಲ್ಯಾಭಿವೃದ್ಧಿ ಅಗತ್ಯ: ಸಾಧಿಕಾ ಬಾನು

ಉದ್ಯೋಗಾವಕಾಶ ಹೆಚ್ಚಳಕ್ಕೆ ಕೌಶಲ್ಯಾಭಿವೃದ್ಧಿ ಅಗತ್ಯ: ಸಾಧಿಕಾ ಬಾನು Skill development is essential for increasing job opportunities: Sadhika Banu

ಲೋಕದರ್ಶನ ವರದಿ 

ರಾಣಿಬೆನ್ನೂರ 27:  ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕೌಶಲ್ಯಾಭಿವೃದ್ಧಿ ಹಾಗೂ ಪರಿಣಾಮಕಾರಿ ಸಂವಹನ ಕೌಶಲ್ಯಗಳು ಅತ್ಯಗತ್ಯವಾಗಿವೆ ಎಂದು ನಂದಿ ಫೌಂಡೇಶನ್‌ನ ತರಬೇತುಗಾರ್ತಿ ಸಾಧಿಕಾ ಬಾನು ಹೇಳಿದರು.   

ಸೋಮವಾರ ನಗರದ ಕೆ.ಎಲ್‌.ಇ. ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ನಂದಿ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಕೌಶಲ್ಯಾಭಿವೃದ್ಧಿ ಮತ್ತು ಸಂವಹನ ಸರ್ಟಿಫಿಕೇಟ್ ಕೋರ್ಸ್‌ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿನಿಯರು ತಮ್ಮ ವಿಚಾರಗಳನ್ನು ಆತ್ಮವಿಶ್ವಾಸದಿಂದ ವ್ಯಕ್ತಪಡಿಸಲು ಸಂವಹನ ಕೌಶಲ್ಯಗಳು ನೆರವಾಗುತ್ತವೆ. ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ, ವ್ಯಕ್ತಿತ್ವ ವಿಕಸನ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಅಗತ್ಯವಾದ ವಿವಿಧ ಕೌಶಲ್ಯಗಳನ್ನು ಈ ತರಬೇತಿ ಕಾರ್ಯಕ್ರಮದ ಮೂಲಕ ಬೆಳೆಸಿಕೊಳ್ಳಬಹುದು ಎಂದು ತಿಳಿಸಿದರು.  

ಜಾಗತೀಕರಣದ ಈ ಕಾಲಘಟ್ಟದಲ್ಲಿ ಉದ್ಯೋಗದಾತರು ನೀರೀಕ್ಷಿಸುವ ಕೌಶಲ್ಯಗಳನ್ನು ವಿದ್ಯಾರ್ಥಿನಿಯರಲ್ಲಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಪ್ರಾಯೋಗಿಕ ತರಬೇತಿ, ಚಟುವಟಿಕೆಗಳು ಹಾಗೂ ಯಶೋಗಾಥೆಗಳ ಮೂಲಕ ವಿದ್ಯಾರ್ಥಿನಿಯರನ್ನು ಉದ್ಯೋಗಕ್ಷೇತ್ರಕ್ಕೆ ಸಜ್ಜುಗೊಳಿಸುವ ಕಾರ್ಯ ನಡೆಯಲಿದೆ ಎಂದರು. ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊಽ ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿನಿಯರು ಇಂತಹ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ತಮ್ಮ ಭವಿಷ್ಯವನ್ನು ಉತ್ತಮಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.   

ಕಾರ್ಯಕ್ರಮದಲ್ಲಿ ನಂದಿ ಫೌಂಡೇಶನ್‌ನ ಶ್ಯಾಮ್ಯುಲ್, ಕುಸುಮಾ ಪ್ರಸಾದ್, ದಾಮೋದರನ್ ಸೇರಿದಂತೆ ಮಹಾವಿದ್ಯಾಲಯದ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕೌಶಲ್ಯಾಭಿವೃದ್ಧಿ ಮತ್ತು ಸಂವಹನ ಕಾರ್ಯಕ್ರಮದ ಸಂಯೋಜಕ ಪ್ರೊಽ ವೀರೇಶ ಕುರಹಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಪೃಥ್ವಿ ಜೆ. ಕಾರ್ಯಕ್ರಮ ನಿರೂಪಿಸಿದರು. ಪ್ರಭಾವತಿ ಹಾಗೂ ಕೃಪಾ ವಂದಿಸಿದರು.