ಕೌಶಲ್ಯಾಭಿವೃದ್ಧಿ ಚಟುವಟಿಕೆಗಳು ಶಿಕ್ಷಣದ ಅವಿಭಾಜ್ಯ ಅಂಗ: ಪ್ರೊ. ಖೊದ್ನಾಪೂರ

Skill development activities are an integral part of education: Prof. Khodnapura

ವಿಜಯಪುರ 11: ಇಂದಿನ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳು ಪಠ್ಯಕ್ರಮ, ಪಠ್ಯ ಯೋಜನೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ವೈವಿಧ್ಯಮ ಕೌಶಲ್ಯಗಳನ್ನು ಒಡಮೂಡಿಸಲು ಪೂರಕವಾಗಿದೆ ಎಂದು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್‌.ಖೊದ್ನಾಪೂರ ತಿಳಿಸಿದರು. 

ಅವರು ನಗರದ ನವಭಾಗದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಿಂದ ಬಿ.ಕಾಂ ವಿದ್ಯಾರ್ಥಿಗಳಿಗಾಗಿ ದಿನಾಂಕ: 10-12-2024 ರಂದು ಆಯೋಜಿಸಿದ ಪ್ರೊಜೆಕ್ಟ್‌ ಕಾರ್ಯ ಮತ್ತು ಪ್ರಸ್ತುತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪದವಿ ವಿದ್ಯಾರ್ಥಿಗಳು ವಿಷಯ ಜ್ಞಾನವನ್ನು ಪಡೆಯಲಷ್ಟೇ ಸಿಮೀತವಾಗಬಾರದೆಂಬ ಮಹೋನ್ನತವಾದ ಉದ್ಧೇಶದಿಂದ ಅವರು ಶಿಕ್ಷಣದ ವಿವಿಧ ಮಜಲುಗಳಲ್ಲಾಗುತ್ತಿರುವ ಬದಲಾವಣೆಗಳಿಗೆ ಹೊಂದಿಕೊಳ್ಳುವಂತೆ ಮತ್ತು ಪ್ರಚಲಿತವಾದ ಸನ್ನಿವೇಶ-ಸಂದರ್ಭ, ಅಗತ್ಯತೆಗನುಗುಣವಾಗಿ ಉದ್ದಿಮೆ, ಕೈಗಾರಿಕೆ ಮತ್ತು ಕಾರ​‍್ೋರೇಟ್ ಜಗತ್ತು ಅಪೇಕ್ಷಿತವಾದ ಪ್ರಾಯೋಗಿಕ ಜ್ಞಾನ, ಪ್ರಾಜೆಕ್ಟ್‌ ತಯಾರಿಕೆ, ಯೋಜನೆ ರೂಪಿಸುವುದು ಮುಂತಾದ ಕೌಶಲ್ಯಗಳನ್ನು ಹೊಂದುವಂತೆ ರೂಪಿಸುತ್ತಿದೆ. ವಿದ್ಯಾರ್ಥಿಗಳಿಗೆ ಯಾವುದಾದರೊಂದು ವಿಷಯವನ್ನು ಹಂಚಿಕೆ ಮಾಡಿ ಅವರಲ್ಲಿ ಕ್ರಿಯಾಶೀಲತೆ, ಸೃಜನಾತ್ಮಕತೆ, ವಿವೇಚನಾಶಕ್ತಿ, ವಿಶ್ಲೇಷಣಾ ಮನೋಭಾವನೆ ಮತ್ತು ತಾರ್ಕಿಕ ಶಕ್ತಿಯಂತಹ ಗುಣಗಳನ್ನು ಒಡಮೂಡಿಸುವುದು ಹೊಸ ಶಿಕ್ಷಣ ನೀತಿಯ ಪ್ರಮುಖ ಧ್ಯೇಯವಾಗಿದೆ ಎಂದು ಅಭಿಪ್ರಾಯಪಟ್ಟರು.  

ಅವರು ಮಾತನಾಡುತ್ತಾ, ವಿದ್ಯಾರ್ಥಿಗಳಲ್ಲಿ “ಉದ್ಯೋಗಿಯಾಗು ಉದ್ಯೋಗ ನೀಡು” ಎಂಬಂತೆ ಉದ್ಯಮಶೀಲತೆಯ ಗುಣವಿಶೇಷತೆಗಳನ್ನು ಶಿಕ್ಷಣದ ಒಂದು ಭಾಗವಾಗಿ ಕಲಿಸುತ್ತಾ, ಅವರು ತಮ್ಮ ಮುಂದಿನ ಭಾವೀ ಜೀವನದಲ್ಲಿ ಕೈಗೆತ್ತಿಕೊಂಡ ಪ್ರಾಜೆಕ್ಟ ಅಥವಾ ಕಾರ್ಯಚಟುವಟಿಕೆಯಲ್ಲಿ ಸಾಫಲ್ಯವನ್ನು ಕಾಣಲು ನೆರವಾಗುವಂತೆ ವಿದ್ಯಾರ್ಥಿದೆಸೆಯಲ್ಲಿಯೇ ಅವರಲ್ಲೊಂದು ಕೌಶಲ್ಯತಾ ಗುಣಗಳು ಮೊಳಕೆಯೊಡೆಯುವಂತೆ ಪ್ರೇರೇಪಿಸಲಾಗುತ್ತಿದೆ.  ಹೀಗೆ ಲೆಕ್ಕಶಾಸ್ತ್ರ, ಲೆಕ್ಕಪರಿಶೋಧನೆ, ಸಂಖ್ಯಾಶಾಸ್ತ್ರ ಮತ್ತು ವ್ಯವಸ್ಥಾಪನಾ ಲೆಕ್ಕಶಾಸ್ತ್ರ ವಿಷಯಗಳಲ್ಲಿ ವಿದ್ಯಾರ್ಥಿಗಳು ತಾವು ಸ್ವತಃ ಆಯ್ಕೆ ಮಾಡಿಕೊಂಡ ವಿಷಯದ ಮೇಲೆ ಪ್ರೊಜೆಕ್ಟ ಹೇಗೆ ತಯಾರಿಸುವುದು, ಅದಕ್ಕೆ ಬೇಕಾದ ಬಂಡವಾಳ ಮೂಲಗಳ ಸಂಗ್ರಹಣೆ, ಬಂಡವಾಳೀಕರಣ ಕಾರ್ಯವಿಧಾನ, ಫಾರ್ಮುಲಾ ಬಳಕೆ, ಹಣಕಾಸು ನಿರ್ವಹಣೆ ಮತ್ತು ಸ್ವಯಂ ಉದ್ಯೋಗಕ್ಕಾಗಿ ತರಬೇತಿ ನೀಡುವ ಮತ್ತು ಹಣಕಾಸು ಒದಗಿಸುವ ಸಂಸ್ಥೆಗಳಾದ ರುಡ್‌ಸೆಟ್, ಟ್ರೈಸೆಮ್ ಮತ್ತು ಇತರ ಸರಕಾರದ ಸಹಾಯಧನಗಳ ಬಗ್ಗೆ ಮಾಹಿತಿ ನೀಡಲಾಗುವುದು.   

ವಿಷಯ ಪರೀವೀಕ್ಷಕರಾಗಿ ಆಗಮಿಸಿದ್ದ ಆಂಗ್ಲಭಾಷಾ ಪ್ರಾಧ್ಯಾಪಕ ಡಾ. ಬಿ.ಎನ್‌.ಶಾಡದಳ್ಳಿ ಅವರು ಮಾತನಾಡುತ್ತಾ, ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಲ್ಲಿರುವ ಸುಪ್ತ ಕಲೆ-ಕೌಶಲ್ಯ ಮತ್ತು ಕುಶಲಗಾರಿಕೆಯನ್ನು ಅಭಿವ್ಯಕ್ತಿಗೊಳಿಸುವಲ್ಲಿ ಹಮ್ಮಿಕೊಳ್ಳುತ್ತಿರುವ ಇಂತಹ ಕಾರ್ಯಚಟುವಟಿಕೆಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗಬಲ್ಲವು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕ್ರಿಯಾಶೀಲತೆಗೆ ಹೆಚ್ಚಿನ ಪ್ರಾಧ್ಯಾನತೆಯಿದೆ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯಕ್ಕೆ ಸಂಬಂಧಿಸಿದ ವಿಷಯಗಳ ಜತೆಗೆ ಸಂವಹನ ಕೌಶಲ್ಯ ಮತ್ತು ಪ್ರಾಯೋಗಿಕ ಜ್ಞಾನ ನೀಡುವ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಷಯ ಮಂಡನೆಯ ಕಲೆಯನ್ನು ಕರಗತ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.  

ಈ ಪ್ರಾಜೆಕ್ಟ ತಯಾರಿಕೆ ಮತ್ತು ಪ್ರಸ್ತುತಿ ಕಾರ್ಯಾಗಾರದಲ್ಲಿ ಬಿ.ಕಾಂ-3 ನೇಯ ಸೆಮೆಸ್ಟರ್ ನ ವಿದ್ಯಾರ್ಥಿಗಳಾದ ಸುಶ್ಮೀತಾ ಶಿರಹಟ್ಟಿ, ಕಾವೇರಿ ಕಂಟೇನವರ, ಶಂಕ್ರೆಮ್ಮ ನಾಗಠಾಣ, ಗೀತಾ ಮಿಸ್ಕಿನ್, ಐಶ್ವರ್ಯ ಕುಂಬಾರ, ಆಸ್ಮಾ ಮನಿಯಾರ, ಶ್ರೀಶೈಲ್ ಪಟ್ಟಣಶೆಟ್ಟಿ, ರಾಜಕುಮಾರ ಕನಮಸ, ಅಶ್ವಿನಿ ಕುಂಬಾರ, ಸೃಷ್ಠಿ ಗೋಂಧಳಿ ಇನ್ನತರರು ತಮ್ಮ ಅಭಿರುಚಿ-ಆಸಕ್ತಿಗನುಗುಣವಾಗಿ ಪ್ರೊಜೆಕ್ಟಗಳನ್ನು ತಯಾರಿಸಿ ಅದರ ಬಗ್ಗೆ ವಿಷಯ ಪ್ರಸ್ತುತಪಡಿಸಿದರು. ಬಿ.ಕಾಂ ವಿಭಾಗದ ಎಲ್ಲ್ಲ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.