ಕೌಶಲ್ಯಾಧಾರಿತ ತರಬೇತಿಗಳು ಯುವಜನತೆಗೆ ವರದಾನವಿದ್ದಂತೆ-ಡಾ. ಅಜಿತ ಪ್ರಸಾದ

ಕೌಶಲ್ಯಾಧಾರಿತ ತರಬೇತಿಗಳು ಯುವಜನತೆಗೆ ವರದಾನವಿದ್ದಂತೆ-ಡಾ. ಅಜಿತ ಪ್ರಸಾದ Skill-based training is a boon for the youth - Dr. Ajit Prasad


ಧಾರವಾಡ 06 : ಕೇವಲ ವಿದ್ಯಾರ್ಜನೆಯಿಂದ ಉದ್ಯೋಗ ದೊರಕಿಸಿಕೊಳ್ಳಲು ಸಾಧ್ಯವಿಲ್ಲ. ವಿದ್ಯಾರ್ಜನೆಯ ಜೊತೆ ಜೊತೆಗೆ ಕೌಶಲ್ಯಾಧಾರಿತ ತಾಂತ್ರಿಕ ತರಬೇತಿಗಳನ್ನು ಪಡೆಯುವದರಿಂದ ಉದ್ಯೋಗ ದೊರೆಯದಿದ್ದರು ಕೂಡ ನಾವು ಸ್ವ-ಉದ್ಯೋಗವನ್ನು ಪ್ರಾರಂಭಿಸಬಹುದು, ಕೌಶಲ್ಯಾಧಾರಿತ ತರಬೇತಿಗಳು ನಿರುದ್ಯೋಗಿ ಯುವಕರ ಪಾಲಿಗೆ ವರದಾನವಿದ್ದಂತೆ ಎಂದು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 78ನೇ ಹುಟ್ಟುಹಬ್ಬದ ಸವಿನೆನಪಿಗಾಗಿ ಧಾರವಾಡದ ಜೆ.ಎಸ್‌.ಎಸ್ ಕೌಶಲ್ಯ ಐ.ಟಿ.ಐ, ಧಾರವಾಡ ಜೈನ ಮಿಲನ ಹಾಗೂ ಅರ್ಬ ಸೋಲಾರ ಎನರ್ಜಿ ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ 15 ದಿನಗಳ ಉಚಿತ ಸೋಲಾರ ಟೆಕ್ನಿಶಿಯನ್ ತರಬೇತಿಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಅಜಿತ ಪ್ರಸಾದರವರು ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಸೋಲಾರ ಎನರ್ಜಿ ಮುಖ್ಯವಾದ ಪಾತ್ರ ವಹಿಸುತ್ತಿದೆ. ಕೈಗಾರಿಕೆಗಳು, ಮನೆ, ಶಾಲಾ-ಕಾಲೇಜುಗಳ ಛಾವಣಿ ಮೇಲೆ ಸೋಲಾರ ಪ್ಯಾನಲ್‌ಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸಿ ಸರಕಾರಕ್ಕೂ ಸಹ ಮರಳಿ ಮಾರಾಟ ಮಾಡುತ್ತಿದ್ದಾರೆ. ಸೋಲಾರ ಎನರ್ಜಿ ಉತ್ಪಾದನೆಗೆ ಸರಕಾರದಿಂದಲೂ ಸಹಾಯ ಸಹಕಾರ ದೊರೆಯುತ್ತಿದ್ದು, ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಿದೆ. ಅದಕ್ಕೆ ಪೂರಕವಾಗಿ ಐ.ಟಿ.ಐ ನಲ್ಲಿ ಸೋಲಾರ್ ಟೆಕ್ನೀಶಿಯನ್ ಕೋರ್ಸನ್ನು ಕೂಡ ಪರಿಚಯಿಸಲಾಗಿದ್ದು, ಗ್ರಾಮೀಣ ಅಭ್ಯರ್ಥಿಗಳ ಶ್ರೇಯೋಭಿವೃದ್ಧೀಗಾಗಿ ಪೂಜ್ಯ ಹೆಗ್ಗಡೆಯವರು ಸವದತ್ತಿ ರಸ್ತೆಯಲ್ಲಿ ಸ್ಥಾಪಿಸಿರುವ ಜೆ.ಎಸ್‌.ಎಸ್ ಕೌಶಲ್ಯ ಐ.ಟಿ.ಐ ನಲ್ಲಿ ಈ ಕೋರ್ಸನ್ನು ಕಲಿಯಬಹುದು. ಸೋಲಾರ ತರಬೇತಿಯ ನಂತರ ಉದ್ಯೋಗವನ್ನು ಸಹ ದೊರಕಿಸಿಕೊಡಲಾಗುವುದು. ಸ್ವ-ಉದ್ಯೋಗ ಮಾಡಬಯಸುವ ಅಭ್ಯರ್ಥಿಗಳಿಗೆ ಬ್ಯಾಂಕ ಮೂಲಕ ಸಾಲ ಸೌಲಭ್ಯಗಳು ಕೂಡ ದೊರಕುತ್ತಿವೆ. ಅಭ್ಯರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. 

ಜೆ.ಎಸ್‌.ಎಸ್ ಆಡಳಿತಾಧಿಕಾರಿಗಳಾದ ಶ್ರೀ ಅರಿಹಂತ ಪ್ರಸಾದ ಮಾತನಾಡಿ ಮೊದಲು ಸೋಲಾರ ಶಕ್ತಿಯ ಬಳಕೆಯನ್ನು ಕೇವಲ ಶ್ರೀಮಂತರಿಗೆ ಮಾತ್ರ ಎಂಬುದು ವಾಡಿಕೆಯಲ್ಲಿ ಇತ್ತು, ಆದರೆ ಈಗ ಕಾಲ ಬದಲಾಗಿದೆ. ಈಗ ಬಡವರ ಕೈಗೆಟುಕುವ ದರದಲ್ಲೂ ಸೋಲಾರ ಶಕ್ತಿಯ ಮೂಲಗಳು ದೊರೆಯುತ್ತಿವೆ ಹಾಗೂ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಿದೆ ಸೋಲಾರ ಶಕ್ತಿಯಿಂದ ಮನೆ ಮತ್ತು ಮನಗಳು ಬೆಳಗುತ್ತಿವೆ ಎಂದ ಹೇಳಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅರ್ಬ್‌ ಸೋಲಾರ ಎನರ್ಜಿಯ ಶ್ರೀ ಹರ್ಷಕುಮಾರ ಶೆಟ್ಟಿ ಮಾತನಾಡಿ ಅರ್ಬ್‌ ಸೋಲಾರ ಎನರ್ಜಿ ವಿಕಸಿತ ಸೋಲಾರ ಫಲಕಗಳ ತಯಾರಿಕಾ ಮತ್ತು ಅಳವಡಿಕೆ ಮಾಡಿಕೊಡುವಂತಹ ಕಂಪನಿಯಾಗಿದ್ದು, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಪರ್ಯಾಯ ಇಂಧನ ಹಾಗೂ ಸೌರಶಕ್ತಿ ದೊರಕಬೇಕೆಂಬ ಉದ್ದೇಶ ಹೊಂದಿದೆ. ಅರ್ಬ ಸೋಲಾರ ಎನರ್ಜಿ ಕಂಪನಿಗೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ಒದಗಿಸಲು ಜೆ.ಎಸ್‌.ಎಸ್ ಕೌಶಲ್ಯ ಐ.ಟಿ.ಐ ನಲ್ಲಿ ಸೋಲಾರ ತರಬೇತಿ ಹಮ್ಮಿಕೊಳ್ಳಲಾಗಿದ್ದು ಶ್ಲಾಘನೀಯ ಎಂದು ಹೇಳಿದರು. 

ಸನ್ಮತಿ ಸೇವಾ ಸಮಾಜದ ಉಪಾಧ್ಯಕ್ಷರಾದ ಶ್ರೀಮತಿ ನಂದಿನಿ ಬಾಗಿ ಮಾತನಾಡಿ ಕೌಶಲ್ಯಾಧಾರಿತ ತಾಂತ್ರಿಕ ತರಬೇತಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇಂತಹ ತರಬೇತಿ ಉಚಿತವಾಗಿ ಜೆ.ಎಸ್‌.ಎಸ್ ಸಂಸ್ಥೆ ನೀಡುತ್ತಿದೆ ಎಂದರೇ ಶಿಬಿರಾರ್ಥಿಗಳು ಸದರ ಸದುಯೋಗ ಸರಿಯಾಗಿ ಪಡೆದುಕೊಂಡು ಉದ್ಯೋಗ ಗಿಟ್ಟಿಕೊಳ್ಳಿ ಇಂತಹ ತರಬೇತಿಗಳು ವಿಕಸಿತ ಭಾರತ ನಿರ್ಮಾಣಕ್ಕೆ ಪೂರಕವಾಗಲಿವೆ ಎಂದು  ಹೇಳಿದರು. 

ಜೆ.ಎಸ್‌.ಎಸ್ ಐ.ಟಿ.ಐ ನ ಪ್ರಾಚಾರ್ಯರಾದ ಶ್ರೀ ಮಹಾವೀರ ಉಪಾದ್ಯೆ ಮಾತನಾಡಿ ಸೋಲಾರ್ ಟೆಕ್ನೀಶಿಯನ್ ಕೋರ್ಸ ಡಾ. ಅಜಿತ ಪ್ರಸಾದರವರ ಕನಸಿನ ಕೂಸಾಗಿದ್ದು, ಸೋಲಾರ ಶಕ್ತಿಯ ನೂತನ ತಂತ್ರಜ್ಞಾನದ ಪರಿಚಯ ಪ್ರತಿಯೊಬ್ಬರಿಗೂ ಆಗಬೇಕಿದೆ. ಅದಷ್ಟು ಅಭ್ಯರ್ಥಿಗಳು ಇದರಿಂದ ಉದ್ಯೋಗ ಪಡೆದುಕೊಂಡು ನೆಮ್ಮದಿಯ ಜೀವನ ಸಾಗಿಸಲಿ ಎಂಬ ಮಹದಾಸೆಯಿಂದ ಈ ತರಬೇತಿ ಪ್ರಾರಂಭಿಸಲಾಗಿದ ಎಂದು ಹೇಳಿದರು. 

ಹುಬ್ಬಳ್ಳ್ಳಿಯ ಸನ್‌ರೇ ಸೋಲಾರ ಮ್ಯೂಸಿಯಂ ನ ನಿರ್ದೇಶಕರಾದ ಮಹೇಶ ವ್ಹಿ.ಎಸ್ ಮಾತನಾಡಿ ಇತ್ತಿಚಿನ ದಿನಗಳಲ್ಲಿ ಮನೆಯ ವಿದ್ಯುತ್ ಚಾಲಿತ ವಸ್ತುಗಳಿಗೆ ಸರಕಾರದ ವಿದ್ಯುತ್‌ಗಾಗಿ ಕಾಯುವ ಪ್ರಮೇಯವೇ ಬೇಕಾಗಿಲ್ಲ ಮಿಕ್ಸಿ, ಗೀಜರ್, ಪ್ರಿಡ್ಜ್‌, ಟಿ.ವಿ, ಫ್ಯಾನ್, ಎಸಿ ಯಿಂದ ವಾಹನಗಳವರೆಗೂ ಸೋಲಾರ್ ಶಕ್ತಿ ಬಳಕೆಯಾಗುತ್ತಿದೆ. ಮುಂದಿನ ದಿನಮಾನಗಳಲ್ಲಿ ಸೌರಶಕ್ತಿಯೊಂದೆ ಜಗವನ್ನು ಬೆಳಗಲಿದೆ ಎಂದು ಹೇಳಿದರು. ಪ್ರಾರಂಭದಲ್ಲಿ ಅಶ್ವಿನಿ ದೇಸಾಯಿ ಪ್ರಾರ್ಥಿಸಿದರು, ರಾಹುಲ್ ಉಪಾದ್ಯೆ ವಂದಿಸಿದರು.  ರತ್ನಾಕರ ಹೋಳಗಿ ಕಾರ್ಯಕ್ರಮ ನಿರೂಪಿಸಿದರು, ಜಿನ್ನಪ್ಪ ಕುಂದಗೊಳ, ಮೋಹನಕುಮಾರ ಗೋಗಿ ಇತರರು ಉಪಸ್ಥಿತರಿದ್ದರು.