ಕರಾವಳಿ ಉತ್ಸವ-25, ಮೊದಲ ದಿನ ಹುಚ್ಚೆದ್ದು ಕುಣಿದ ಯುವ ಜನತೆ

ಕರಾವಳಿ ಉತ್ಸವ-25, ಮೊದಲ ದಿನ ಹುಚ್ಚೆದ್ದು ಕುಣಿದ ಯುವ ಜನತೆ  Singer Shankar Mahadevan's singing performance a success

ಗಾಯಕ ಶಂಕರ್ ಮಹಾದೇವನ್ ಗಾಯನ ಪ್ರದರ್ಶನ ಯಶಸ್ಸು 

ನಾಗರಾಜ್ ಹರಪನಹಳ್ಳಿ 

ಕಾರವಾರ 23: ಇಲ್ಲಿನ ರವೀಂದ್ರನಾಥ ಕಡಲತೀರದಲ್ಲಿ ಸೋಮವಾರ ಪ್ರಾರಂಭವಾದ ಕರಾವಳಿ ಉತ್ಸವ -25ರ  ಮೊದಲ ದಿನ ಗಾಯಕ ಶಂಕರ್ ಮಹಾದೇವನ್ ಗಾಯನಕ್ಕೆ ಯುವ ಜನತೆ ಹುಚ್ಚೆದ್ದು ಕುಣಿಯಿತು. ಯುವಕರಿಗಿಂತ ಯುವತಿಯರೇ ವೇದಿಕೆ ಮುಂಭಾಗದಲ್ಲಿ ಹಾಗೂ ಹತ್ತಾರು ಕಡೆ ಕುಣಿದು ಕುಪ್ಪಳಿಸಿದರು. ಗಣೇಶ ಭಜನೆ ಮೂಲಕ ಗಾಯನ ಆರಂಭಿಸಿದ ಶಂಕರ್ ಮಹಾದೇವನ್ ತಾವೊಬ್ಬ ಹಿಂದೂಸ್ತಾನಿ ಸಂಗೀತದ ಶಾಸ್ತ್ರೀಯ ವಿದ್ಯಾರ್ಥಿ ಎಂಬುದನ್ನು ಸಾಬೀತು ಮಾಡಿದರು.  

ನಂತರ ಅವರೇ ಹಾಡಿದ ಫಾಸ್ಟ ಟ್ರಾಕ್ ಹಾಡು ಹಾಡಿ, ಆರಂಭದಲ್ಲಿ ಯುವಕರ ಮೈ ನವಿರೇಳಿಸಿದರು. ಕಡಲತೀರದ  ಚಳಿಯಲ್ಲೂ  ಯುವಕರು ಕೇಕೇ ಹಾಕಿ ಕುಣಿದರು . ಶಂಕರ್ ಮಹಾದೇವನ್ " ಬ್ರೀತ್ ಲೆಸ್ " ಹಾಡು ಹಾಡಿದಾಗ ಎಲ್ಲರೂ ಉಸಿರು ಬಿಗಿ ಹಿಡಿದು ಆಲಿಸಿದರು. ’ದಿಲ್ ಚಹತಾ ಹೈ’ ಹಾಡು ರೋಮಾಂಚನವಾಗಿತ್ತು. ಕಜರಾರೇ , ಪ್ರೆಟ್ಟಿ ವುಮನ್, ಜೂಮ್ ಬರಾಬರ್ ಜೂಮ್, ಶಿವ ತಾಂಡವ ಸ್ಟೊಟರಮ್ , ಕೋಹಿ ಕಹೇ ಕೆಹತಾ ರಹೇ, ಉಫ್ ತೇರಿ ಅದಾ, ದೇಸಿ ಗರ್ಲ, ಹಾಡುಗಳು ಮನರಂಜಿಸಿದವು. ಗಾಯಕ ಶಂಕರ್ ಮಹಾದೇವನ್ ಗಾಯನ ಪ್ರದರ್ಶನ ಯಶಸ್ಸು ಕಂಡಿತು.  

ಶಂಕರ್ ಮಹಾದೇವನ್ ಹಾಡುವಾಗ ಜಿಲ್ಲಾ ಉಸ್ತುವಾರಿ ಸಚಿವ ವೈದ್ಯ, ಶಾಸಕರು,  ಜಿಲ್ಲೆಯ ಇಬ್ಬರು ಎಂಎಲ್ಸಿಗಳು ಪ್ರೇಕ್ಷಕರ ಗ್ಯಾಲರಿಯಲ್ಲಿ ಓಡಾಡಿ, ಜನರ ನಾಡಿ ನೋಡಲು ಯತ್ನಿಸಿದರು. ಏಳು ವರ್ಷಗಳ ಬಿಡುವಿನ ನಂತರ ಹತ್ತು ಕೋಟಿ ವೆಚ್ಚದಲ್ಲಿ ಕರಾವಳಿ ಉತ್ಸವ ಹಮ್ಮಿಕೊಂಡಿದೆ. ಹಾಗಾಗಿ ಬಾಲಿವುಡ್ ಗಾಯಕರನ್ನು ಮೊದಲು ಹಾಗೂ ಮೂರು, ನಾಲ್ಕು ಹಾಗೂ ಏಳನೇ ದಿನ ಆಹ್ವಾನಿಸಿದೆ.  

ಗಾಯಕರಾದ  ಸೋನು ನಿಗಮ್, ದಿಲೇರ್ ಮೆಹಂದಿ, ಡ್ಯಾನಿಶ್ ಅವರ ಆಗಮನಕ್ಕೆ ಕಾರವಾರ ಕಡಲತೀರ ಕಾಯುತ್ತಿದೆ. ಶಂಕರ್ ಮಹಾದೇವನ್ ಗಾಯನದ ಮಧ್ಯೆ ಶಾಸಕ ಸತೀಶ್ ಸೈಲ್ ಅಪ್ತರು, ಕರಾವಳಿ ಉತ್ಸವದ ವೇದಿಕೆ ಹತ್ತಿ, ಸೈಲ್ ಜನ್ಮದಿನದ ಕೇಕ್ ಕತ್ತರಿಸಿ, ವೇದಿಕೆಯಲ್ಲಿ ಶಾಸಕರಿಗೆ ಜನ್ಮದಿನದ ಶುಭಾಶಯಗಳ ಕೋರಿದ್ದು, ಟೀಕೆಗೆ ಗುರಿಯಾಯಿತು.  

ಜನ್ಮದಿನ ಆಚರಿಸುವ ವೇಳೆ ಉಸ್ತುವಾರಿ ಸಚಿವ ವೈದ್ಯ , ಜಿಲ್ಲಾಧಿಕಾರಿ, ಎಸ್ಪಿ, ಸಿಇಒ ವೇದಿಕೆಯ ಮುಂಭಾಗದಿಂದ ಹೊರಟು ಹೋಗಿದ್ದರು.