ನ.14 ರಂದು ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಪೋಷಕ-ಶಿಕ್ಷಕರ ಮಹಾಸಭೆ : ಡಾ.ದೀಲೀಷ್ ಶಶಿ

ನ.14 ರಂದು ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಪೋಷಕ-ಶಿಕ್ಷಕರ ಮಹಾಸಭೆ : ಡಾ.ದೀಲೀಷ್ ಶಶಿ Simultaneous parent-teacher conference across the district on November 14th: Dr. Dilish Shashi

ಕಾರವಾರ, ನ.12: ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿ ಸರ್ಕಾರದಿಂದ ಅನುಷ್ಠ್ಠಾನಿಸಲಾಗಿರುವ ಉಪಕ್ರಮಗಳು, ಪೋಷಕರು, ಶಿಕ್ಷಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸುವ ಉದ್ದೇಶದಿಂದ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯ ಪ್ರಯುಕ್ತ ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಸರ್ಕಾರದ ಸುತ್ತೋಲೆಯನ್ವಯ ಪೋಷಕ-ಶಿಕ್ಷಕರ ಮಹಾಸಭೆಯನ್ನು ಏಕಕಾಲಕ್ಕೆ ನಡೆಸಲಾಗುತ್ತಿದ್ದು, ಈ ಸಭೆಗೆ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ಪಾಲಕರು-ಪೋಷಕರು ಹಾಜರಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದೀಲೀಷ್ ಶಶಿ ಕೋರಿದ್ದಾರೆ. 

ಸಭೆಯಲ್ಲಿ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆಯ ಓದು ಹಾಗೂ ಸಭೆಯ ಉದ್ದೇಶಗಳ ಮಂಡನೆ, ಮಕ್ಕಳ ಕಲಿಕಾ ಪ್ರಗತಿ, ಹಾಜರಾತಿ ಮಾಹಿತಿ ಹಂಚಿಕೆ, ಪೋಷಕರೊಂದಿಗೆ ಮಕ್ಕಳ ಪ್ರಗತಿ ಪತ್ರ ವಿತರಣೆ, ಮತ್ತು ಪ್ರಗತಿಯ ಬಗ್ಗೆ ಚರ್ಚೆ, ಮಕ್ಕಳ ಸವಾಂರ್ಗೀಣ ಅಭಿವೃದ್ಧಿ ಮತ್ತು ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರದ ಬಗ್ಗೆ ಅರಿವು ಮೂಡಿಸುವುದು. ಹಾಗೂ ಉತ್ತಮ ಸಾಧನೆ ತೋರಿದ ಎಸ್‌.ಎಸ್‌.ಎಲ್‌.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಅಭಿನಂದಿಸುವುದು. ಬಾಲ್ಯ ವಿವಾಹ ನಿಷೇಧ ಮತ್ತು ಬಾಲ ಕಾರ್ಮಿಕ ನಿಷೇಧ ನೀತಿಗಳ ಬಗ್ಗೆ ಹಾಗೂ ವಿಶೇಷ ಚೇತನ ಮಕ್ಕಳಿಗೆ ನೀಡಲಾಗುವ ಸೌಲಭ್ಯಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸುವುದು. ಶಾಲೆಯ ಅಭಿವೃದ್ಧಿಯಲ್ಲಿ ಭಾಗೀದಾರರ ಪಾತ್ರ ಮತ್ತು ಸಹಕಾರ, ಪೋಷಕರ ಪ್ರತಿಭೆ ಗುರ್ತಿಸುವಿಕೆ ಮತ್ತು ಅವರ ಸಹಕಾರ ಪಡೆಯಲಾವುದು. 

ಜಿಲ್ಲೆಯಲ್ಲಿ ಪೋಷಕ ಶಿಕ್ಷಕರ ಮಹಾಸಭೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ 1089 ಪ್ರಾಥಮಿಕ ಶಾಲಾ ವಿಭಾಗದ 41,224 ಮತ್ತು 76 ಪ್ರೌಢಶಾಲೆಗಳ 7259 ವಿದ್ಯಾರ್ಥಿಗಳು ಮತ್ತು ಕಾರವಾರ ಶೈಕ್ಷಣಿಕ ಜಿಲ್ಲೆಯ 913 ಪ್ರಾಥಮಿಕ ಶಾಲಾ ವಿಭಾಗದ 36,689 ಮತ್ತು 49 ಪ್ರೌಢಶಾಲೆಗಳ 6562 ವಿದ್ಯಾರ್ಥಿಗಳು ಹಾಗೂ ಜಿಲ್ಲೆಯ ಪದವಿ ಪೂರ್ವ ವಿಭಾಗದ  37 ಕಾಲೇಜುಗಳ 12,488 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2164 ಸರ್ಕಾರಿ ಶಾಲಾ ಕಾಲೇಜುಗಳ 1,04,222 ವಿದ್ಯಾರ್ಥಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.