ಲಂಡನ್, ಏ 17, ಕೋವಿಡ್ -19 ವೈರಸ್ ಹಿನ್ನೆಲೆಯಲ್ಲಿ ಇದೇ ವರ್ಷ ನಡೆಯಬೇಕಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಮುಂದಿನ ವರ್ಷಕ್ಕೆ ಮುಂದೂಡುವುದು ಉತ್ತಮ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಸಿಮೋನ್ ಕಾಟಿಚ್ ಅಭಿಪ್ರಾಯಪಟ್ಟಿದ್ದಾರೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿರುವ ಕಾಟಿಚ್, ಮುಂದಿನ ವರ್ಷ ಫೆಬ್ರುವರಿಯಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್ ಸಮಯದಲ್ಲೇ ಪುರುಷರ ಟಿ20 ವಿಶ್ವಕಪ್ ಆಯೋಜಿಸುವುದು ಒಳಿತು ಎಂದಿದ್ದಾರೆ."ಇದೇ ವರ್ಷ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್ ರೀತಿ ಮುಂದಿನ ಅಕ್ಟೋಬರ್‌ನಲ್ಲಿ ಐಸಿಸಿ ಪುರುಷರ ಟಿ20 ವಿಶ್ವಕಪ್ ಸುಗಮವಾಗಿ ನಡೆಯುವುದು ಕಷ್ಟ. ಏಕೆಂದರೆ, ಇಡೀ ವಿಶ್ವದಲ್ಲಿಯೇ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಇದನ್ನು ನಿಯಂತ್ರಿಸಲು ಎಲ್ಲ ದೇಶಗಳು ಸಾಕಷ್ಟು ಕಠಿಣ ಪರಿಶ್ರಮ ಪಡುತ್ತಿವೆ," ಎಂದು ಅವರು ಹೇಳಿದ್ದಾರೆ. ಆಸ್ಟ್ರೇಲಿಯಾ ನಿಗದಿತ ದಿನಾಂಕದಲ್ಲಿಯೇ ಐಸಿಸಿ ಟಿ20 ವಿಶ್ವಕಪ್ ಆಯೋಜಿಸುವ ಬಗ್ಗೆ ಆಸಕ್ತಿ ತೋರಿಸಿತ್ತು. ಆದರೆ, ಕೊರೊನಾ ವೈರಸ್ ನಿಂದ ಮುಂದಿನ ಬೇಸಿಗೆಯಲ್ಲಿ ಟೂರ್ನಿ ನಡೆಸಬಹುದಾದ ವಾತಾವರಣ ಸೃಷ್ಟಿಯಾಗುವುದು ಕಷ್ಟ ಎಂದು ನನಗೆ ಅನಿಸುತ್ತಿದೆ. ಹಾಗಾಗಿ ಮುಂದಿನ ವರ್ಷ ಟಿ20 ವಿಶ್ವಕಪ್ ಆಯೋಜಿಸುವುದು ಎಲ್ಲರ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.