ಸಿದ್ದರಾಮ್ಯನವರೇ, ಕುಣಿಯೊಕೆ ಬರಲಿಲ್ಲ ಅಂದ್ರೆ ನೆಲ ಡೊಂಕಾ?!

ರಾಜ್ಯದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ತಾನು ಗೆದ್ದೇ ತೀರಬೇಕೆಂಬ ಬರದಲ್ಲಿ ತಾವು ಅಧಿಕಾರಕ್ಕೆ ಬಂದರೆ ಉಚಿತ, ಖಚಿತ, ನಿಶ್ಚಿತ ಅಂತ ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಅದರಂತೆ ಪಕ್ಷ ಕೂಡಾ ಅಧಿಕಾರಕ್ಕೆ ಬಂದಿತು. ಇದೀಗ ಕೊಟ್ಟ ಮಾತಿನಂತೆ ಆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವಲ್ಲಿ ಸರ್ಕಾರ ತಿಣುಕಾಡುತ್ತಿದೆ. ಅದರಲ್ಲೂ ಪ್ರತಿಯೊಬ್ಬರಿಗೂ ತಲಾ ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಘೋಷಿಸಿತ್ತು. ಈ ಹೆಚ್ಚುವರಿ ಐದು ಕೆಜಿ ಇದು ಕೇವಲ ಕಾಂಗ್ರೆಸ್ ಪಕ್ಷದ ಚುನಾವಣೆಯ ಆಶ್ವಾಸನೆ. ಅದರಂತೆ ಜನ ಅವರನ್ನು ಗೆಲ್ಲಿಸಿದ್ದಾರೆ. ಇದೀಗ ಜನರಿಗೆ ಕೊಟ್ಟ ಮಾತಿನಂತೆ ಅದನ್ನು ಉಳಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷದ ಕರ್ತವ್ಯವೇ ಹೊರತು ಅದು ಕೇಂದ್ರಕ್ಕೆ ಸಂಬಂಧಿಸಿದುದಲ್ಲ. ಈ ಮೊದಲು ಬಿಪಿಎಲ್ ಕಾಡುದಾರರಿಗೆ ಸಿಗುತ್ತಿದ್ದ ತಲಾ 5 ಕೆಜಿ, ಅಕ್ಕಿಯನ್ನು ಕೇಂದ್ರವು ರಾಜ್ಯಗಳಿಂದ ಒಂದೇ ಒಂದು ರೂಪಾಯಿಯನ್ನ ಪಡೆಯದೆ ಹಾಗೇ ಕೊಡುತ್ತಿತ್ತು. ಆದರೆ ಆಯಾ ರಾಜ್ಯಸರಕಾರಗಳು ಅದನ್ನು ತಮ್ಮದೇ ಯೋಜನೆಯಂತೆ ಅದರ ಮೇಲೆ ‘ಅನ್ನ ರಾಮಯ್ಯ’ ಅನ್ನೊ ಲೇಬಲ್ ಅಂಟಿಸಿಕೊಂಡು ಜನರಿಗೆ ಸುಳ್ಳು ಹೇಳುತ್ತ ಬಂದಿದ್ದಾರೆ. ಅದರಲ್ಲೂ ಕಾನೂನಿನ ಪ್ರಕಾರ ಉಚಿತ, ಉಚಿತ ಅಂತ ಹೇಳುವ ಹಾಗೆಯೇ ಇಲ್ಲ! ಆರ್ಟಿಕಲ್ 36 ರಿಂದ 51 ಡೈರೆಕ್ಟರ್ ಪ್ರಿನ್ಸಿಪಲ್ ಸ್ಟೇಟ್ ನಲ್ಲಿ, ‘ಸರಕಾರವು ಬಡವರಿಗೆ ಕೊಡುವ ಯೋಜನೆಗಳನ್ನು ಉಚಿತ ಅಂತ ಹೇಳುವ ಹಾಗಿಲ್ಲ. ಬದಲಿಗೆ ಅದು ‘ಸಾಮಾಜಿಕ ಹೊಣೆಗಾರಿಕೆ’ ಹೊರತು, ಅದು ಉಚಿತವಲ್ಲ. ಬಡವ, ಶ್ರಮಿಕ, ಹಾಗೂ ಕೂಲಿ ಕಾರ್ಮಿಕ ವರ್ಗಕ್ಕೆಲ್ಲ ನಾವು ಉಚಿತವಾಗಿ ಕೊಡುತ್ತಿದ್ದೇವೆ ಅಂತ ಹೇಳಿ ಅವಮಾನ ಮಾಡುವಹಾಗಿಲ್ಲ ಅಂತ ಕಾನೂನು ಬಹಳ ಸ್ಪಷ್ಟವಾಗಿ ಹೇಳುತ್ತದೆ. ಅದರ ಕನಿಷ್ಠ ಅರಿವು ಕೂಡಾ ನಮ್ಮನ್ನು ಆಳುವ ಸರ್ಕಾರಗಳಿಲ್ಲ. ಇದೀಗ ರಾಜ್ಯ ಕಾಂಗ್ರೆಸ್ ಸರಕಾರವು, ಕೇಂದ್ರ ಸರಕಾರ ತನ್ನ ಬಳಿ ಇರುವ ಹೆಚ್ಚುವರಿ ಅಕ್ಕಿಯನ್ನು ಕೊಡುತ್ತಿಲ್ಲ ಬಡವರಿಗೆ ಅನ್ಯಾಯ ದ್ರೋಹ ಮಾಡುತ್ತಿದೆ ಅಂತ ಬೊಬ್ಬೆ ಹಾಕುವ ಬದಲು ಚುನಾವಣೆಯ ಸಂದರ್ಭದಲ್ಲಿ ಇಂತಹದೊಂದು ಹೆಚ್ಚುವರಿ ಘೋಷಣೆಯನ್ನು ಮಾಡುವಾಗ ಅದರ ಸಾಧಕ ಭಾದಕಗಳನ್ನು ಯೋಚನೆ ಮಾಡಿ ಘೋಷಣೆ ಮಾಡಬೇಕೆನ್ನುವಷ್ಟು ಸಾಮಾನ್ಯ ಪ್ರಜ್ಞೆ ಇರಬೇಕಿತ್ತು.  

ಅವರ ಹೆಚ್ಚುವರಿ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರಕಾರ ಯಾಕೆ ಹಿಂದೇಟು ಹಾಕುತ್ತಿದೆ ಗೊತ್ತಾ?! ಈ ಬಾರಿ ಮುಂಗಾರು ಬಹಳಷ್ಟು ವಿಳಂಬ ಆಗ್ತಾ ಇದೆ. ಚಂಡಮಾರುತ ಕರಾವಳಿ ತೀರವನ್ನು ಬಹಳಷ್ಟು ಸಮಸ್ಯೆಗೆ ದೂಡಿದೆ. ಇದೀಗ ಮಳೆ ಎಷ್ಟು ಪ್ರಮಾಣದಲ್ಲಿ ಆಗುತ್ತದೋ ಬಿಡುತ್ತದೋ ಎಂಬುದಂತೂ ಜನರಿಗೆ ಗೊತ್ತಿಲ್ಲ. ಆದರೆ ಮಳೆಯ ಮೇಲೆ ಅಚಲವಾದ ನಂಬಿಕೆ ಇಟ್ಟ ರೈತ ರಾಜ್ಯದ ತೊಂಬೆಲ್ಲಾ ಬಿತ್ತನ ಕಾರ್ಯಗಳನ್ನು ಅತ್ಯಂತ ಭರದಿಂದ ಆರಂಭಿಸಿದ್ದಾನೆ. ಹಾಗಾಗಿ ಇದೀಗ ಕೇಂದ್ರದ ಆಹಾರ ಇಲಾಖೆಯು ತನ್ನ ಬಳಿ ಶೇಖರಿಸಿಟ್ಟಂತಹ ಹೆಚ್ಚುವರಿ ದಾಸ್ತಾನುಗಳನ್ನು ತಮ್ಮ ಚುನಾವಣಾ ಲಾಭಕ್ಕೋಸ್ಕರ ಹೆಚ್ಚುವರಿಯಾಗಿ ಘೋಷಣೆ ಮಾಡಿದ ರಾಜ್ಯಗಳಿಗೆಲ್ಲ ಕೊಟ್ಟು ಮುಂದೆ ಆಹಾರದ ಸಮಸ್ಯೆ ಉಂಟಾದರೆ ಏನು ಮಾಡಲು ಸಾಧ್ಯ? ಈಗಾಗಲೇ ಮಳೆ ಪ್ರಮಾಣ ವಿಳಂಬವಾಗುತ್ತಿದ್ದಂತೆ ವ್ಯಾಪಾರಿಗಳು ತಮ್ಮ ದಾಸ್ತಾನುವಿನ ಬೆಲೆಗಳನ್ನು ಏರಿಸಲು ಕಾತುರದಲ್ಲಿದ್ದಾರೆ. ಹಾಗಾದಾಗ ಸಾಮಾನ್ಯ ಜನರಿಗೆ ಬಹಳಷ್ಟು ಹೊಡೆತ ಬೀಳುತ್ತದೆ. ಆದ್ದರಿಂದ ಭಾರತೀಯ ಆಹಾರ ಇಲಾಖೆಯು ಯಾವುದೇ ರಾಜ್ಯಗಳಿಗೂ ಹೆಚ್ಚುವರಿ ಅಕ್ಕಿ ಕೊಡಲು ಒಪ್ಪುತ್ತಿಲ್ಲ.  

ಈ ಹಿಂದೆ ಭಾರತ ಸರಕಾರವು ಆಹಾರ ಕಾಯ್ದೆಗಳನ್ನು ಜಾರಿಗೆ ತಂದು ದೇಶದ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಅಗತ್ಯ ಪ್ರಮಾಣದ ಆಹಾರ ವಿತರಣೆಯನ್ನು ಮಾಡಿತ್ತು. ಈ ಆಹಾರ ಕಾಯ್ದೆ ಜಾರಿಯಾಗುವುದಕ್ಕೂ ಮೊದಲು ಎಲ್ಲಾ ರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಪಡಿತರವನ್ನು ಒದಗಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. 80ರ ದಶಕದಲ್ಲಿ ಆಂಧ್ರ​‍್ರದೇಶದ ಮುಖ್ಯಮಂತ್ರಿ ಎನ್‌.ಟಿ ರಾಮರಾವ್ ಅವರು ಕೇವಲ ಎರಡು ರೂಪಾಯಿಗೆ ಕೆಜಿ ಅಕ್ಕಿ ಯೋಜನೆ ಜಾರಿಗೆ ತಂದಿದ್ದರು. ಆ ಸಂದರ್ಭದಲ್ಲಿ ಕೇಂದ್ರ 3 ರೂಪಾಯಿ ಕೆಜಿ ಅಕ್ಕಿ, 2 ರೂಪಾಯಿಗೆ ಕೆಜಿ ಗೋಧಿ, 1 ರೂಪಾಯಿ ಕೆಜಿ ರಾಗಿ ಹೀಗೆ ಇತರೆ ದವಸ ಧಾನ್ಯಗಳನ್ನು ರಾಜ್ಯಗಳಿಗೆ ಒದಗಿಸುತ್ತಿತ್ತು. ಆ ಹಣವನ್ನು ಕೆಲ ರಾಜ್ಯಗಳು ತಾವೇ ಬರಿಸಿ ಜನರಿಗೆ ಉಚಿತವಾಗಿ ಹಂಚಿದ್ದವು. ಈ ಯೋಜನೆಗಾಗಿ ಕೇಂದ್ರ ಸರಕಾರವು ಪ್ರತಿ ವರ್ಷ ಸುಮಾರು 550 ಲಕ್ಷ ಟನ್ ಗಳಷ್ಟು ದವಸಧಾನ್ಯಗಳನ್ನು ಶೇಖರಿಸಿ ಇಡುತ್ತಿತ್ತು. ಹೀಗೆ ಸ್ಟಾಕ್ ಇಡದೆ ಹೋದರೆ, ಅತಿವೃಷ್ಟಿ-ಅನಾವೃಷ್ಟಿಗಳಂತಹ ಪ್ರಾಕೃತಿಕ ವಿಕೋಪಗಳನ್ನು ಎದುರಿಸುವುದು ಕಷ್ಟವಾಗುತ್ತದೆ. ಮತ್ತು ಆಹಾರ ಸಾಮಗ್ರಿಗಳ ದಾಸ್ತಾನು ಕಡಿಮೆಯಾಗಿ ಬೇಡಿಕೆ ಹೆಚ್ಚಾದರೆ ದೇಶದಲ್ಲಿ ಕಾಳಸಂತೆ ಕೋರರ ಹಾವಳಿ ಕೂಡ ಹೆಚ್ಚಾಗಿ ಬೆಲೆಗಳು ಗಗನಕ್ಕೆ ಎರುತ್ತವೆ. ಈ ನಿಟ್ಟಿನಲ್ಲಿ ಇಂತಹ ಯಾವುದೇ ಸಮಸ್ಯೆಗಳಾಗಬಾರದೆಂಬುದು ಕೇಂದ್ರ ಸರ್ಕಾರದ ಉದ್ದೇಶ. ಹಾಗಾಗಿಯೇ ಸಾಕಷ್ಟು ಪ್ರಮಾಣದ ಆಹಾರ ಧಾನ್ಯಗಳನ್ನು ಸರಕಾರಿ ಗೋಧಾಮಗಳಲ್ಲಿ ಸ್ಟಾಕ್ ಇಡಲಾಗುತ್ತದೆ. ಆ ಸ್ಟಾಕ್ ಮತ್ತು ರಾಜ್ಯಗಳ ಪರಿಸ್ಥಿತಿಯನ್ನು ನೋಡಿಕೊಂಡು ಇತರೆ ರಾಜ್ಯಗಳಿಗೆ ಆಹಾರ ಸರಬರಾಜಕ್ಕೆ ಇಲಾಖೆಯು ಅನುಮತಿಯನ್ನು ಕೊಡುತ್ತದೆ. ನಮ್ಮ ದೇಶದಲ್ಲಿ ಆಹಾರ ಸಮಸ್ಯೆ ಅದರ ಸೂಚನೆಗಳು ಕಂಡು ಬಂದರೆ ವಿದೇಶಗಳಿಗೆ ಸಾಗಿಸುವ ಆಹಾರ ಸಾಮಗ್ರಿಗಳ ಮೇಲೆ ಕೇಂದ್ರ ಸರ್ಕಾರವು ನಿರ್ಬಂಧಗಳನ್ನು ಹೆರುತ್ತದೆ.  

ಕಳೆದ ವರ್ಷ ರಷ್ಯಾ ಉಕ್ರೇನ್ ಯುದ್ಧದ ಕಾರಣದಿಂದಾಗಿ ಇಡೀ ವಿಶ್ವದಾದ್ಯಂತ ಗೋಧಿಗೆ ಬೇಡಿಕೆ ಹೆಚ್ಚಾಗಿತ್ತು. ಆಗ ಭಾರತವು ಕೆಲವೇ ಆಪ್ತ ದೇಶಗಳಿಗೆ ಮಾತ್ರ ಗೋಧಿಯ ಸರಬರಾಜನ್ನು ಮಾಡಿ ಉಳಿದಂತೆ ತನ್ನ ಗೋಧಿಯ ಮೇಲೆ ನಿರ್ಬಂಧವನ್ನು ಹೇರಿತು. ಸದ್ಯಕ್ಕೆ ಫುಡ್ ಕಾರ​‍್ೊರೇಷನ್ ಆಫ್ ಇಂಡಿಯಾದಲ್ಲಿ 262.2 ಲಕ್ಷ ಟನ್ ನಷ್ಟು ಅಕ್ಕಿ, 313.8 ಲಕ್ಷ ಟನ್ ನಷ್ಟು ಗೋಧಿ, 226.8 ಲಕ್ಷ ಟನ್ನಷ್ಟು ಭತ್ತ, ಹಾಗೂ 4.3.6 ಲಕ್ಷ ಟನ್‌ನಷ್ಟು ಬೇಳೆಕಾಳುಗಳ ದಾಸ್ತಾನು ಇದೆ. ಸರಕಾರ ಇದೆಲ್ಲವನ್ನು ಯಾವ ಯಾವ ಸಂದರ್ಭದಲ್ಲಿ ಉಪಯೋಗ ಮಾಡುತ್ತದೆ ಅಂದ್ರೆ, ಇದೀಗ ಮುಂಗಾರುವಿನ ಕೊರತೆಯಿಂದಾಗಿ ಆಹಾರ ಉತ್ಪಾದನೆ ಕಡಿಮೆಯಾದರೆ, ಅಥವಾ ಯಾವುದಾದರೂ ರಾಜ್ಯಕ್ಕೆ ಆಹಾರದ ಕೊರತೆ ತೀವ್ರವಾಗಿ ಉಂಟಾದಾಗ ಮಾತ್ರ ಇದನ್ನು ಸರಬರಾಜು ಮಾಡುತ್ತದೆ. ಈ ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿಯವರು ಕೇಂದ್ರದಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆಯ ಮಂತ್ರಿಯಾಗಿದ್ದಾಗ ಈ ಒಕ್ಕೂಟ ವ್ಯವಸ್ಥೆಯ ರಾಜ್ಯಗಳಲ್ಲಿ ನೈಸರ್ಗಿಕ ವಿಕೋಪಗಳು, ಕ್ಷಾಮ, ಬರಗಾಲ ಬಿದ್ದು ರಾಜ್ಯಗಳು ತತ್ತರಿಸದೇ ಇರಲಿ ಎನ್ನುವ ಉದ್ದೇಶದೊಂದಿಗೆ ಅವರು ಈ ‘ಫುಡ್ ಕಾರ​‍್ೊರೇಷನ್ ಆಫ್ ಇಂಡಿಯಾ’ವನ್ನು ಸ್ಥಾಪನೆ ಮಾಡಿದ್ದರೇ ವಿನಹ:, ರಾಜ್ಯ ಸರ್ಕಾರಗಳು ಚುನಾವಣೆಯಲ್ಲಿ ತಮ್ಮ ಲಾಭಕ್ಕೋಸ್ಕರ ಬೇಕಾಬಿಟ್ಟಿಯಾಗಿ ಹೆಚ್ಚುವರಿ ಘೋಷಣೆ ಮಾಡಿದಾಗಲೆಲ್ಲ ಅವರಿಗೆ ವಿತರಿಸುವುದಕಲ್ಲ!  

ಒಂದು ವೇಳೆ ‘ಪುಡ್ ಕಾರ​‍್ೊರೇಷನ್ ಆಫ್ ಇಂಡಿಯಾ’ ರಾಜ್ಯ ಸರ್ಕಾರ ಕೇಳಿದ ಹೆಚ್ಚುವರಿ ಅಕ್ಕಿಯನ್ನು ಕೊಡದೇ ಹೋದರೆ, ರಾಜ್ಯವು ಬೇರೆ ಬೇರೆ ರಾಜ್ಯಗಳಿಂದ ಅಕ್ಕಿ ತರಿಸಿಕೊಳ್ಳುವ ಪ್ರಯತ್ನ ಮಾಡಿದರೆ ಟ್ರಾನ್ಸ್ಪೋರ್ಟ್‌ ಚಾರ್ಜ್‌ ಬಹಳಷ್ಟು ಹೆಚ್ಚಾಗುತ್ತದೆ. ದಾಸ್ತನಿಗೂ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಇದೆಲ್ಲ ಸೇರಿದರೆ ಒಟ್ಟು ಒಂದು ಕೆಜಿ ಅಕ್ಕಿಗೆ 42ರಿಂದ 45 ರೂಪಾಯಿ ಖರ್ಚಾಗುತ್ತದೆ. ಹಾಗೆ ಮಾಡುವ ಬದಲು ಮಾರ್ಕೆಟುಗಳಲ್ಲಿ 36 ರಿಂದ 40 ರೂಪಾಯಿಯಲ್ಲಿ ಬಹಳಷ್ಟು ಉತ್ತಮ ಗುಣಮಟ್ಟದ ಅಕ್ಕಿಯೇ ಸಿಗುತ್ತದೆ, ಅದನ್ನೇ ಖರೀದಿಸಿ ಕೊಟ್ಟರೆ ಜನ ಕೂಡಾ ಖುಷಿ ಪಡುತ್ತಾರೆ. ಹಾಗಾಗಿ ರಾಜ್ಯ ಸರ್ಕಾರ ಈ ಬಗ್ಗೆ ಯೋಚಿಸಿದರೆ ಆ ಹಣ ಮತ್ತೆ ಮಾರುಕಟ್ಟೆಗೆ ಬಂದು ಅದು ಚಲಾವಣೆಯಾಗಿ ವ್ಯಾಪಾರಗಳು ಮತ್ತಷ್ಟು ಹೆಚ್ಚಾಗುತ್ತವೆ. ಹಾಗೂ ಅದರ ತೆರಿಗೆ ಹಣ ಮರಳಿ ಸರಕಾರಕ್ಕೇ ಬರುತ್ತದೆ.  

ಅಷ್ಟಕ್ಕೂ ರಾಜ್ಯ ಸರ್ಕಾರ ಜನರಿಗೆ ಅಕ್ಕಿಯನ್ನೇ ಕೊಡಬೇಕು ಅಂತ ಯಾಕೆ ಅಂದುಕೊಳ್ಳುತ್ತಿದೆ? ನಮ್ಮಲ್ಲಿ ಎಲ್ಲರ ಆಹಾರ ಅಕ್ಕಿಯೇ ಅಲ್ಲ. ಮೈಸೂರು ಕರ್ನಾಟಕ ಭಾಗದ ಜನರು ಹೆಚ್ಚಾಗಿ ರಾಗಿಯನ್ನು ತಮ್ಮ ಮುಖ್ಯ ಅಹಾರವನ್ನಾಗಿಸಿ ಕೊಂಡಿದ್ದಾರೆ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜನ ಕುಚಲಕ್ಕಿಯನ್ನೇ ತಿನ್ನುತ್ತಾರೆ. ಅವರಿಗೆ ಈ ರೇಷನ್ ಅಕ್ಕಿ ಇಷ್ಟ ಆಗುವುದಿಲ್ಲ. ಉತ್ತರ ಕರ್ನಾಟಕ ಭಾಗದ ಜನರಿಗೆ ಜೋಳದ ರೊಟ್ಟಿ ಇಲ್ಲ ಅಂದ್ರೆ ಊಟಾನೇ ಅಲ್ಲ ಅದು, ಜೋಳ, ಮೆಕ್ಕೆ ಜೋಳ ಇವರ ಪ್ರಮುಖ ಆಹಾರ . ಹೀಗಿರುವಾಗ ಎಲ್ಲರಿಗೂ ಅಕ್ಕಿಯನ್ನೇ ಕೊಟ್ಟರೆ ಅದನ್ನು ತಗೊಂಡು ಜನ ಏನು ಮಾಡುತ್ತಾರೆ ಹೇಳಿ. ಅನ್ನಭಾಗ್ಯ ಅಂದ್ರೆ ಕೇವಲ ಅಕ್ಕಿ ಅಷ್ಟೇ ಅಲ್ಲ. ಈಗ ಕೇಂದ್ರದಿಂದ ಬರುವ 5 ಕೆಜಿ ಅಕ್ಕಿಯ ಜೊತೆಗೆ, ಜನರು ಆಯಾಭಾಗದಲ್ಲಿ ಬಳಸುವ ಆಹಾರ ಧಾನ್ಯಗಳನ್ನು ವಿತರಿಸಿದರೂ ಆಗುತ್ತದೆ. ಜೋಳ ರಾಗಿ, ಕುಚುಲಕ್ಕಿ, ಬೇಳೆ ಮುಂತಾದವುಗಳನ್ನು ಸರಕಾರ ಇಲ್ಲಿನ ರೈತರಿಂದ ನೇರವಾಗಿ ಖರೀದಿ ಮಾಡಿ ಪಡಿತರಿಗೆ ವಿತರಿಸಿದರೆ ಅದರಿಂದ ನಮ್ಮ ರೈತರಿಗೂ ಲಾಭವಾಗುತ್ತದೆ ಮತ್ತು ಜನರಿಗೂ ಕೂಡ ಅವರ ಇಷ್ಟ ಪದಾರ್ಥಗಳು ಸಿಕ್ಕಂತಾಗುತ್ತದೆ.  

ಈಗ ಆಂಧ್ರ​‍್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳಗಳ ರಾಜ್ಯಗಳಲ್ಲಿ ತಮಗೆ ಬೇಕಾದ ಅಕ್ಕಿಯನ್ನು ತಮ್ಮ ರಾಜ್ಯದಲ್ಲಿಯೇ ಖರೀದಿ ಮಾಡಿ ಪಡಿತರಿಗೆ ಹಂಚಿಕೆ ಮಾಡುತ್ತಿದ್ದಾರೆ. ನೀವು ಕೂಡ ಹಾಗೆ ಮಾಡಿ ಅಂತ ಕೇಂದ್ರದ ಆಹಾರ ಇಲಾಖೆಯು ರಾಜ್ಯ ಸರ್ಕಾರಕ್ಕೆ ಸಲಹೆಯನ್ನು ನೀಡಿದೆ. ಅದಾಗಿಯೂ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಬೇರೆ ಬೇರೆ ರಾಜ್ಯಗಳಿಗೆ ಅಕ್ಕಿಯನ್ನು ಕೇಳಿದ್ದಾರೆ. ಒಂದು ವೇಳೆ ಅವರು ಒಪ್ಪಲಿಲ್ಲ ಅಂದ್ರು ಕತ್ತೆ ಬಾಲ ಕುದುರೆ ಜುಟ್ಟು! ಬಿಟ್ಟುಬಿಡಿ! ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈಗ ಸರ್ಕಾರ 36 ರಿಂದ 40 ಖರ್ಚು ಮಾಡಿ ಬೇರೆ ಕಡೆಯಿಂದ ಅಕ್ಕಿ ಖರೀದಿಸಿ ಜನರಿಗೆ ಕೊಟ್ಟರೆ ಅದು ಅವರ ಅಗತ್ಯಕ್ಕಿಂತ ಹೆಚ್ಚಾಗಿ ಅದನ್ನು ಮಾರ್ಕೆಟ್ ಗಳಲ್ಲಿ ಹತ್ತರಿಂದ ಹದಿನೈದು ರೂಪಾಯಿ ಕೆ.ಜಿಯಂತೆ ಮಾರಾಟ ಮಾಡಿಕೊಳ್ಳುತ್ತಾರೆ. ಹಾಗಾಗಿ ಕೊನೆ ಪಕ್ಷ ಯಾವುದು ಸಾಧ್ಯ ಆಗಲಿಲ್ಲ ಅಂದ್ರೆ ರಾಜ್ಯ ಸರ್ಕಾರ ಇದೀಗ 40 ರುಪಾಯಿ ಖರ್ಚು ಮಾಡಿ ಅಕ್ಕಿ ಖರೀದಿಗೆ ಮುಂದಾಗಿದೆಯೋ ಆ 5 ಕೆಜಿಯ 200 ರೂಪಾಯಿಯಷ್ಟು ಹಣವನ್ನೇ ಬಡವರ ಅಕೌಂಟ್ ಗಳಿಗೆ ನೇರವಾಗಿ ಹಾಕಿದರೆ ಅವರು ಆ ಹಣದಲ್ಲಿ ತಮಗೆ ಇಷ್ಟವಾದ ಪದಾರ್ಥಗಳನ್ನು ಖರೀದಿಸುತ್ತಾರೆ ಮತ್ತು ಇವರ ಗ್ಯಾರಂಟಿಯೂ ಈಡೇರಿದಂತಾಗುತ್ತದೆ.  

- ಡಾ.ಜಗದೀಶ ಮಾನೆ  

ರಾಜ್ಯಶಾಸ್ತ್ರ ವಿಭಾಗ, ಧಾರವಾಡ 


ಲೇಖಕರು: ಅಧ್ಯಾಪಕರು ಹಾಗೂ ಅಂಕಣಕಾರರು  


- * * * -