ಬೆಂಗಳೂರು, ಏ.14,ಸರ್ಕಾರ ಬಿಡಿಎ ನಿವೇಶನಗಳನ್ನು ಮಾರಾಟ ಮಾಡಲು ಹೊರಟಿರುವುದು ಅದರ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಸರ್ಕಾರ ದಿವಾಳಿಯಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.ಕೊರೊನಾ ವೈರಸ್ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮೇ 3 ರವರೆಗೆ ಲಾಕ್ ಡೌನ್ ಅವಧಿ ವಿಸ್ತರಣೆ ಮಾಡಿರುವುದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.ಕೊರೋನ ಸಂಕಷ್ಟ ನಿವಾರಣೆಗಾಗಿ ಮೇ 3 ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿರುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಸಂಕಷ್ಟದಲ್ಲಿರುವ ರೈತ ವರ್ಗ ಮತ್ತು ದಿನಗೂಲಿ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡದಿರುವುದು ನಿರಾಸೆ ತಂದಿದೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.ಎರಡನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ 2 ನೇ ಬಾರಿಗೆ ಮೇ 3 ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿರುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ರೈತ ವರ್ಗ ಮತ್ತು ದಿನಗೂಲಿ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಿತ್ತು ಎಂದು ಅವರು ಹೇಳಿದ್ದಾರೆ.
ರೈತರು, ದಿನ ನಿತ್ಯ ಕೂಲಿ ಮಾಡುವವರಿಗಾಗಿ ಮೋದಿ ತಮ್ಮ ಭಾಷಣದಲ್ಲಿ ಏನನ್ನು ಘೋಷಣೆ, ಪ್ರಸ್ತಾಪ ಮಾಡಿಲ್ಲ. ಲಾಕ್ ಡೌನ್ ಘೋಷಣೆ ಮಾಡಿ ಎಲ್ಲ ವಹಿವಾಟು ಸ್ಥಗಿತಗೊಳಿಸಿದ ಮೇಲೆ ಸಾಲ ತೀರಿಸಲು ಹೇಗೆ ಸಾಧ್ಯ ? ಎಂದು ಅವರು ಪ್ರಶ್ನಿಸಿದ್ದಾರೆ.ಲಾಕ್ ಡೌನ್ ಅವಧಿ ಮುಗಿದ ಮೇಲೆ ಬಡ್ಡಿ ಸಮೇತ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿಕೃಷಿ ಸಾಲವನ್ನೇ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.ದೇಶದ ಆರ್ಥಿಕತೆ 30 ವರ್ಷಗಳ ಹಿಂದಕ್ಕೆ ಹೋಗಿದ್ದು, 2-2.2 ಆರ್ಥಿಕ ಹಿಂಜರಿಕೆ ಆಗಬಹುದು ಎಂದು ಆರ್ಥಿಕ ತಜ್ಞರೇ ಆತಂಕ ವ್ಯಕ್ತಪಡಿಸಿದ್ದಾರೆ. ಕೃಷಿ ಕಾರ್ಮಿಕರು, ಹಳ್ಳಿಗಾಡಿನ ಜನ ಸಂಕಷ್ಟದಲ್ಲಿ ಇದ್ದಾರೆ. ಕೇಂದ್ರ ಸರ್ಕಾರ ಬಡವರು ಕಾರ್ಮಿಕರಿಗೆ ಅವರಿಗೆ ಜೀವನ ಭದ್ರತೆ ನೀಡಬಹುದು ಎಂಬ ನಿರೀಕ್ಷೆಯಿತ್ತು. ಅವರ ಭಾಷಣ ರಾಜಕೀಯ ಭಾಷಣದ ರೀತಿಯಲ್ಲಿ ಇತ್ತು. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಬಡ ಜನರ ಜೊತೆಗೆ ನಾವು ಇದ್ದೇವೆ. ರೈತರು , ಬಡವರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಯಾವುದೇ ಯೋಜನೆ ಘೋಷಿಸಿಲ್ಲ. ಬಿಡಿಎ ಸೈಟ್ ಗಳನ್ನು ಹರಾಜು ಹಾಕುವುದಕ್ಕೆ ಮುಂದಾಗಿದೆ ಎಂದರೆ ಸರ್ಕಾರ ದಿವಾಳಿ ಆಗಿದೆ ಎಂದರ್ಥ ಎಂದು ಸೂಚ್ಯವಾಗಿ ತಿಳಿಸಿದರು.
ಸರ್ಕಾರದ ಆಸ್ತಿಯನ್ನು ಮಾರುವುದಕ್ಕೆ ಹೋಗಿರುವುದನ್ನು ಗಮನಿಸಿದರೆ ಸರ್ಕಾರ ಆರ್ಥಿಕ ದಿವಾಳಿ ಆಗಿದೆ. ಸರ್ಕಾರಕ್ಕೆ ಖರ್ಚಿನ ಮೇಲೆ ನಿಯಂತ್ರಣ ಇಲ್ಲ , ಭ್ರಷ್ಟಾಚಾರ ಹೆಚ್ಚಾಗಿದೆ. ಅಬಕಾರಿ ಮತ್ತು ನೋಂದಣಿ ನಿಂತಿದೆ. ಈ ಸಂದರ್ಭದಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಕಷ್ಟ. ರಾಜ್ಯ ಸರ್ಕಾರ ಅನಗತ್ಯ ಖರ್ಚು ಮಾಡುತ್ತಿದೆ ಎಂದರು.
ಇನ್ನೂ ನಿಗಮ ಮತ್ತು ಮಂಡಳಿ ಅಧ್ಯಕ್ಷರ ನೇಮಕ ಆಗಿಲ್ಲ. ಆದರೂ ಅವರ ಹೆಸರಲ್ಲಿರುವ ವಾಹನಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇಂಥವಕ್ಕೆ ಕಡಿವಾಣ ಹಾಕಬೇಕು. ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲದ ರೀತಿ ಮಾಡಬೇಕು. ಈಗ ಸರ್ಕಾರದಲ್ಲಿ ಹೆಚ್ಚು ಭ್ರಷ್ಟಾಚಾರ ಇದೆ ಎಂದು ಸಿದ್ದರಾಮಯ್ಯ ಟೀಕಿಸಿದರು.ಆರ್ಥಿಕ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಪಾಲು ಕೊಡಲಿಲ್ಲ. ಸರ್ಕಾರದ ಭ್ರಷ್ಟಾಚಾರ ಕಡಿಮೆ ಆಗಬೇಕು. ಆರ್ಥಿಕ ನಿರ್ವಹಣೆ ಮಾಡಲು ಅನುಭವ ಕೊರತೆಯಿದೆ. ತೆರಿಗೆ ಸಂಗ್ರಹ ಮಾಡುವಲ್ಲಿ ವಿಫಲವಾಗಿದೆ. ರಾಜ್ಯದ ಲ್ಲಿ ಜಿಎಸ್‌ಟಿ ನಿರ್ವಹಣೆ ಮಾಡಲು ಬಂದಿಲ್ಲ. ಅನವಶ್ಯಕ ಖರ್ಚು ಗಳಿಗೆ ಕಡಿವಾಣ ಹಾಕಿಲ್ಲ ಎಂದು ಟೀಕಿಸಿದರು.