ಕಾಂಗ್ರೆಸ್ ಹಿರಿಯ ಮುಖಂಡರ ಜೊತೆ ಸಿದ್ದರಾಮಯ್ಯ ಸಭೆ: ಮುನಿಯಪ್ಪ, ಹರಿಪ್ರಸಾದ್ಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ

ಬೆಂಗಳೂರು, ನ. 11:      ಉಪಚುನಾವಣೆಯನ್ನು ಗೆಲ್ಲುವ ಮೂಲಕ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ಮುಂದುವರೆಸಿದ್ದು, ಪಕ್ಷ ಸಂಘಟನೆ, ಅಭ್ಯರ್ಥಿಗಳ ಅಖೈರು ಹಿನ್ನೆಲೆಯಲ್ಲಿ  ಕೆಪಿಸಿಸಿ ಹಿರಿಯ ಮುಖಂಡರು ಇಂದು ಸಭೆ ನಡೆಸಿದರು. ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ರಾಜ್ಯಸಭಾ ಮಾಜಿ ಸದಸ್ಯ ರಹಮಾನ್ ಖಾನ್, ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ, ಕೆ.ಜೆ.ಜಾರ್ಜ್ ಟಿ.ಬಿ.ಜಯಚಂದ್ರ, ರಮೇಶ್ ಕುಮಾರ್, ಮೋಟಮ್ಮ, ಮಾಜಿ ಸಂಸದ ಧೃವನಾರಾಯಣ್ , ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು. ಸಭೆಯಲ್ಲಿ ಕೆಲವು ಹಿರಿಯ ನಾಯಕರ ಅಸಮಾಧಾನ ತಣಿಸಲು ಸಿದ್ದರಾಮಯ್ಯ ಪ್ರಯತ್ನಿಸಿದರು. ಈಗಾಗಲೇ ಹದಿನೈದು ಕ್ಷೇತ್ರಗಳ ಪೈಕಿ ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಖೈರಾಗಿದ್ದು, ಈ ಜಿಲ್ಲೆಗಳಿಗೆ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ತೀರ್ಪನ್ನು ಆಧರಿಸಿ ಉಳಿದ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಈ ಉಳಿದ ಕ್ಷೇತ್ರಗಳ ಉಸ್ತುವಾರಿಯನ್ನು ಮೂಲ ಕಾಂಗ್ರೆಸಿಗರಾದ ಹಿರಿಯ ನಾಯಕರಿಗೆ ವಹಿಸಲು ಶಾಸಕಾಂಗ ನಾಯಕರು ನಿರ್ಧರಿಸಿದ್ದು, ಸಭೆಯಲ್ಲಿ ಆಸಕ್ತ ಜಿಲ್ಲೆಗಳ ಉಸ್ತುವಾರಿ ಬಗ್ಗೆ ವಿವರಣೆ ಪಡೆದಿದ್ದಾರೆ. ಕೆ.ಹೆಚ್.ಮುನಿಯಪ್ಪ ಹಾಗೂ ಹರಿಪ್ರಸಾದ್ ಅವರಿಗೆ ಬೇಕಾದ ಜಿಲ್ಲೆಗಳ ಜವಾಬ್ದಾರಿ ಹಂಚಿಕೊಳ್ಳುವಂತೆ ಅಭ್ಯರ್ಥಿಗಳನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಂಡು ಬರುವಂತೆ ಸಲಹೆ ನೀಡಿದರು ಎನ್ನಲಾಗಿದೆ. ದಿನೇಶ್ ಗುಂಡೂರಾವ್ ಮಾತನಾಡಿ, ಮೊದಲಿಗೆ ಚುನಾವಣಾ ಆಯೋಗದ ಮೂಲಕ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದ ಟಿ. ಎನ್. ಶೇಷನ್ ರ ನಿಧನಕ್ಕೆ ಸಂತಾಪ ಕೋರಿದರು. ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆಸಲಾಗಿದ್ದು, ಬುಧವಾರದ ಸುಪ್ರಿಂ ಕೋರ್ಟ್ ತೀಪು ನೋಡಿಕೊಂಡು ಉಳಿದ 7 ಕ್ಷೇತ್ರ ಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಿದ್ದೇವೆ. ಈ ಬಗ್ಗೆ ಎಲ್ಲಾ ನಾಯಕರಲ್ಲೂ ಒಮ್ಮತ ಇದೆ. ಚುನಾವಣೆಯ ಬಗ್ಗೆ  ಬೇರೆ ಬೇರೆ ವದಂತಿ ಇದೆ, ಹಾಗಾಗಿ, ಸುಪ್ರಿಂ ಕೋರ್ಟ್ ತೀರ್ಪುನ ನಂತರ ಮುಂದಿನ ನಿರ್ಧಾರ ಆಗಲಿದೆ ಎಂದು ಪುನರುಚ್ಚರಿಸಿದರು. ಮುನಿಯಪ್ಪ ಸಭೆಯಿಂದ ಎದ್ದುಹೋಗಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟನೆ ನೀಡಿದ ದಿನೇಶ್ ಗುಂಡೂರಾವ್, ಸಭೆ ಮುಗಿದ ಬಳಿಕ ಮುನಿಯಪ್ಪ ಹೋಗಿದ್ದಾರೆ. ಕೋಲಾರದಲ್ಲಿ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಸಂಬಂಧ ಮುನಿಯಪ್ಪ ಸಭೆಯಿಂದ ಬೇಗನೇ ನಿರ್ಗಮಿಸಿದರು ಎಂದು ಸ್ಪಷ್ಟನೆ ನೀಡಿದರು. ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಅಭ್ಯರ್ಥಿಗಳ ಆಯ್ಕೆ ಕುರಿತ ಚರ್ಚೆಯಾಗಿದೆ. ಎಲ್ಲಾ ನಾಯಕರೂ ಒಗ್ಗಟ್ಟಿನಿಂದ ಚರ್ಚೆ ನಡೆಸಿದ್ದು, ಪಕ್ಷದ ನಾಯಕರಲ್ಲಿ ಐಕ್ಯತೆ ಇದೆ ಎಂದರು. ಪಕ್ಷದ ನಾಯಕರಿಗೆ ನೀಡಿದ ಎಸ್ ಪಿಜಿ ಭದ್ರತೆ ಹಿಂಪಡೆದದ್ದು,  ದ್ವೇಷದ ರಾಜಕೀಯವಾಗಿದೆ. ಬಿಜೆಪಿಯಿಂದ ದೇಶದ ಆರ್ಥಿಕ ವ್ಯವಸ್ಥೆ ಹಾಳಾಗಿದೆ, ಯುವಕರು ದಾರಿ ತಪ್ಪಿ ಹೋಗಿದ್ದಾರೆ. ನೋಟ್ ಬ್ಯಾನ್,  ಜಿಎಸ್ಟಿಯ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹೇಳಿದರು. ರಾಜ್ಯದಲ್ಲಿ ಹಿಂಬಾಗಿಲ ಮೂಲಕ ಬಿಜೆಪಿ  ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ ಹೋದ ಶಾಸಕರಿಗೆ ಮತದಾರರು ಉಪಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. 15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಎಂದು ಈಶ್ವರ್ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು. ರಾಜು ಕಾಗೆ ಕಾಂಗ್ರೆಸ್ ಸೇರ್ಪಡೆ ಹಾಗೂ ಉಪಚುನಾವಣೆಗೆ ಟಿಕೆಟ್ ನೀಡುವ ವಿಚಾರದ ಬಗ್ಗೆ  ಹೈಕಮಾಂಡ್ ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದರು. ಇದಕ್ಕೂ ಮುನ್ನ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಹಿರಿಯ ನಾಯಕರ ಸಭೆಯಲ್ಲಿ ಉಪಚುಚುನಾವಣೆಗೆ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆಸಲಾಯಿತು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಚರ್ಚೆ ಮಾಡಲಾಗಿದ್ದು, ಸಭೆಯಲ್ಲಿ ಹಲವು ಸಲಹೆಗಳನ್ನ ನೀಡಿದ್ದೇವೆ ಎಂದರು. ಕೋಲಾರ ನಗರಸಭೆ ಚುನಾವಣೆ ಸಂಬಂಧ ಸಭೆ ಇರುವುದರಿಂದ ಹೀಗಾಗಿ ಸಭೆಯ ಬಳಿಕ ನಿರ್ಗಮಿಸುತ್ತಿರುವುದಾಗಿಯೂ ಪಕ್ಷದಲ್ಲಿ ಯಾವುದೇ ಭಿನ್ನಾಬಿಪ್ರಾಯ ನಮಗಿಲ್ಲ. ಅಭ್ಯರ್ಥಿ ಗೆಲುವಿನ ಬಗ್ಗೆ ಸಲಹೆ ನೀಡಲಾಗಿದೆ ಎಂದರು.