ಶ್ರೀನಗರ: ಜಮ್ಮು ಕಾಶ್ಮೀರದ ಸೌಂದರ್ಯ ಸವಿಯಲು ಬಂದಿದ್ದ ಪ್ರವಾಸಿಗರ ಮೇಲೆ ಪಾಕ್ ಬೆಂಬಲಿತ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಬೈಸರನ್ ಪರ್ವತ ಶ್ರೇಣಿಯ ಪಹಲ್ಗಾಮ್ ನಲ್ಲಿ ಮಂಗಳವಾರ ಟ್ರೆಕ್ಕಿಂಗ್ ಮಾಡುತ್ತಿದ್ದ ಪ್ರವಾಸಿಗರ ಮೇಲೆ ಶಸ್ತ್ರಸಜ್ಜಿತ ಉಗ್ರರ ಗುಂಪು ಗುಂಡಿನ ದಾಳಿ ನಡೆಸಿದೆ.
ಟ್ರೆಕ್ಕಿಂಗ್ ಗೆ ಎಂದು ಬಂದಿದ್ದ ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಅದರಲ್ಲೂ ಮುಸ್ಲಿಂ ಅಲ್ಲದವರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿ ಹೇಳಿದೆ.
ಘಟನಾ ಸ್ಥಳದ ಪ್ರತ್ಯಕ್ಷದರ್ಶಿಗಳ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಾಗಿದೆ. ಮಹಿಳೆಯೊಬ್ಬರು ಮಾತನಾಡಿದ್ದು, ತಾನು ಭೇಲ್ಪುರಿ ತಿನ್ನುತ್ತಿದ್ದಾಗ, ಒಬ್ಬ ಬಂದೂಕುಧಾರಿ ಬಂದು ತನ್ನ ಗಂಡನ ಮೇಲೆ ಗುಂಡು ಹಾರಿಸಿದನು ಎಂದು ಹೇಳಿದ್ದಾರೆ. “ಬಂದೂಕುಧಾರಿಯು ನನ್ನ ಗಂಡನ ಬಳಿ ಬಂದು ನೀನು ಮುಸ್ಲಿಂ ಅಲ್ಲ ಎಂದು ಹೇಳಿ ಗುಂಡು ಹಾರಿಸಿದನು” ಎಂದು ಆ ಮಹಿಳೆ ಹೇಳಿದರು.
ಮಹಿಳೆ ಅಸಹಾಯಕಳಾಗಿ ಅಳುತ್ತಾ ತನ್ನ ಗಂಡನನ್ನು ರಕ್ಷಿಸುವಂತೆ ಬೇಡಿಕೊಂಡ ವಿಡಿಯೋ ಕೂಡಾ ವೈರಲ್ ಆಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಬಂದೂಕುಧಾರಿಗಳು ಗುಂಡು ಹಾರಿಸಿ ಒಬ್ಬ ವ್ಯಕ್ತಿಯನ್ನು ಕೊಂದಿದ್ದನ್ನು ಅವಳು ಕಣ್ಣಾರೆ ಕಂಡಿದ್ದಾಗಿ ಹೇಳಿಕೊಂಡಿದ್ದಾರೆ.
“ದಯವಿಟ್ಟು ನನ್ನ ಗಂಡನನ್ನು ಉಳಿಸಿ” ಎಂದು ಅವಳು ಮತ್ತೆ ಮತ್ತೆ ಬೇಡಿಕೊಳ್ಳುತ್ತಿದ್ದಳು.
ಬೈಸರನ್ ಹುಲ್ಲುಗಾವಲುಗಳಲ್ಲಿ ಕುದುರೆ ಸವಾರಿಯನ್ನು ಆನಂದಿಸುತ್ತಿದ್ದ ಪ್ರವಾಸಿಗರ ಮೇಲೆ ಇಬ್ಬರು ಅಥವಾ ಮೂವರು ಬಂದೂಕುಧಾರಿಗಳು ಮನಬಂದಂತೆ ಗುಂಡು ಹಾರಿಸಿದರು.<ಲಷ್ಕರ್-ಎ-ತೊಯ್ಬಾದ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.