ಮಟ್ಟಿಹಾಳದಲ್ಲಿ ಪೆಟ್ರೋಲ್ ಬಂಕ್ ಮಾಲೀಕನಿಂದ ಗುಂಡಿನ ದಾಳಿ: ಇಬ್ಬರಿಗೆ ಗಾಯ, ಆರೋಪಿ ವಶಕ್ಕೆ

ಮಟ್ಟಿಹಾಳದಲ್ಲಿ ಪೆಟ್ರೋಲ್ ಬಂಕ್ ಮಾಲೀಕನಿಂದ ಗುಂಡಿನ ದಾಳಿ: ಇಬ್ಬರಿಗೆ ಗಾಯ, ಆರೋಪಿ ವಶಕ್ಕೆ Shooting by petrol bunk owner in Mattihala: Two injured, accused taken into custody

ಕೊಲ್ಹಾರ: ತಾಲೂಕಿನ ಮಟ್ಟಿಹಾಳ ಗ್ರಾಮದ ಪೆಟ್ರೋಲ್ ಬಂಕ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ವಿಕೋಪಕ್ಕೆ ತಿರುಗಿ ಮಾಲೀಕನೇ ಗ್ರಾಹಕರ ಮೇಲೆ ಗುಂಡು ಹಾರಿಸಿರುವ ಭೀಕರ ಘಟನೆ ನಡೆದಿದೆ. ದಾಳಿಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಮಟ್ಟಿಹಾಳದ ಸುಖದೇವ ಚಲವಾದಿ (30) ಹಾಗೂ ರಾಜು ಚಲವಾದಿ (40) ಗಾಯಗೊಂಡವರು. ಪೆಟ್ರೋಲ್ ಬಂಕ್ ಮಾಲೀಕ ಸಂಗಪ್ಪ ಪೂಜಾರಿ (48) ಗುಂಡು ಹಾರಿಸಿದ ಆರೋಪಿಯಾಗಿದ್ದು, ಆತನನ್ನು ಕೊಲ್ಹಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಯ ವಿವರ:

ಸುಖದೇವ ಚಲವಾದಿ ತಮ್ಮ ಸ್ನೇಹಿತ ರಾಜು ಅವರೊಂದಿಗೆ ಗ್ರಾಮದ ಪೆಟ್ರೋಲ್ ಬಂಕ್‌ಗೆ ತೆರಳಿದ್ದರು. ಈ ವೇಳೆ ಮಾಲೀಕ ಸಂಗಪ್ಪ ಪೂಜಾರಿ ಹಾಗೂ ಸುಖದೇವ ನಡುವೆ ಯಾವುದೋ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಕೋಪೋದ್ರಿಕ್ತಗೊಂಡ ಸಂಗಪ್ಪ, ತಕ್ಷಣವೇ ತನ್ನ ಬಳಿಯಿದ್ದ ಪರವಾನಗಿ ಹೊಂದಿದ ಪಿಸ್ತೂಲ್‌ನಿಂದ ಇಬ್ಬರ ಮೇಲೆಯೂ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.ಗುಂಡೇಟಿನಿಂದ ಗಾಯಗೊಂಡ ಇಬ್ಬರನ್ನೂ ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸಾಕ್ಷ್ಯ ಸಂಗ್ರಹ, ತನಿಖೆ ಚುರುಕು:

ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕೊಲ್ಹಾರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಬೆರಳಚ್ಚು ಹಾಗೂ ಎಸ್‌ಒಸಿಒ (SOCO) ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನಾ ಸ್ಥಳದಲ್ಲಿದ್ದ ಗುಂಡಿನ ತುಣುಕುಗಳು ಸೇರಿದಂತೆ ಪ್ರಮುಖ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ.ಗುಂಡಿನ ದಾಳಿಗೆ ನಿಖರ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಕೊಲ್ಹಾರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.