ಶಿವಶರಣ ಹಡಪದ ಅಪ್ಪಣ್ಣ ಜಯಂತಿ: ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ

ಶಿವಶರಣ ಹಡಪದ ಅಪ್ಪಣ್ಣ ಜಯಂತಿ: ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ Shivasharana Hadapada Appanna Jayanti: Talent Award and Felicitation Ceremony

ಲೋಕದರ್ಶನ ವರದಿ 

 ಶಿಗ್ಗಾವಿ  09:  ಪಟ್ಟಣ: ಡಾ. ಬಿ.ಆರ್‌. ಅಂಬೇಡ್ಕರ್ ಸರ್ಕಾರಿ ವಿವಿಧ ಇಲಾಖೆಗಳ ಸಂಕೀರ್ಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ವಿವಿಧ ಇಲಾಖೆಗಳು ಹಾಗೂ ತಾಲೂಕು ಹಡಪದ ಸಮಾಜದ ಸಂಯುಕ್ತ ಆಶ್ರಯದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಅವರ 892ನೇ ಜಯಂತ್ಯೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮ ನಡೆಯಿತು.  

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಯಾಸಿರ್ ಅಹ್ಮದ್ ಖಾನ್ ಪಠಾಣ್, ಬಸವಣ್ಣನವರು ಜನ್ಮ ತಾಳದಿದ್ದರೆ ಹಲವು ಮಹನೀಯರು ಬೆಳಕಿಗೆ ಬರುತ್ತಿರಲಿಲ್ಲ. ಅವರ ಚಿಂತನೆಗಳು ಸಮಾಜ ಸುಧಾರಣೆಗೆ ದಾರಿ ತೋರಿವೆ. ಹಡಪದ ಅಪ್ಪಣ್ಣ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.  

ಹಡಪದ ಅಪ್ಪಣ್ಣ ಅವರು 250 ವಚನಗಳನ್ನು ರಚಿಸಿದ್ದು, ಅವುಗಳಲ್ಲಿನ ಸಮಾಜಮುಖಿ ಸಂದೇಶಗಳನ್ನು ಅರಿತುಕೊಳ್ಳಬೇಕು. ವ್ಯಕ್ತಿಗಿಂತ ಸಮಾಜ ಮುಖ್ಯವಾಗಬೇಕು ಹಾಗೂ ಪ್ರೀತಿಯಿಂದ ಸಮಾಜ ಕಟ್ಟುವ ಕೆಲಸವಾಗಬೇಕು ಎಂದು ಅವರು ತಿಳಿಸಿದರು.  

ಸಿತಾಗಿರಿ ಸದ್ಗುರು ಸಮರ್ಥ ಎ.ಸಿ. ವಾಲಿ ಮಹಾರಾಜರು ಮಾತನಾಡಿ, ಹಡಪದ ಅಪ್ಪಣ್ಣನವರನ್ನು ನಾಡಿಗೆ ಪರಿಚಯಿಸಿದವರು ಬಸವಣ್ಣನವರು. ಸಮಾಜದ ಸಂಘಟನೆ ಬಲಪಡಿಸುವುದು, ವೃತ್ತಿ ಕೌಶಲ್ಯಕ್ಕೆ ಉತ್ತೇಜನ ನೀಡುವುದು ಮತ್ತು ಸಮಾಜದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸುವುದು ಅಗತ್ಯ ಎಂದರು.  

ರಾಜ್ಯ ಸಮಿತಿ ಸದಸ್ಯ ಮಲ್ಲಿಕಾರ್ಜುನ ಹಡಪದ ಮಾತನಾಡಿ, ವೃತ್ತಿ ಆಧಾರಿತವಾಗಿ ಬದುಕುತ್ತಿರುವ ಸಮಾಜಕ್ಕೆ ನಿವೇಶನ, ಮೂಲಸೌಕರ್ಯ ಹಾಗೂ ಅಭಿವೃದ್ಧಿ ನಿಗಮದ ಅಗತ್ಯವಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು.  

ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳನ್ನೂ ಗೌರವಿಸಲಾಯಿತು. ವಿವಿಧ ಸಮಾಜಗಳ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಹಡಪದ ಸಮಾಜದ ಮುಖಂಡರು ಉಪಸ್ಥಿತರಿದ್ದರು.