ಲೋಕದರ್ಶನವರದಿ
ಧಾರವಾಡ10: ಶಿವ ಶರಣೆಯರು ತಮ್ಮ ಕಾಯಕದ ಮೂಲಕ ವಚನ ಸಾಹಿತ್ಯವನ್ನು ರಚನೆ ಮಾಡಿದ್ದಾರೆ. ಇಂದು ನಾವೆಲ್ಲರೂ ಆ ವಚನಗಳನ್ನು ಗಮನಿಸಿ ಅನುಕರಣೆ ಮಾಡಬೇಕೆಂದು ಕಲ್ಯಾಣನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಬಸವ ಸಮಿತಿ, ಟಿ. ಎಸ್. ಪಾಟೀಲ ಪ್ರತಿಷ್ಠಾನ ಹಾಗೂ ಕಲ್ಯಾಣ ನಗರದ ಶರಣರ ಬಳಗದ ಸಂಯುಕ್ತ ಆಶ್ರಯದಲ್ಲಿ ಶಿವಶರಣ ಅಂಬಿಗರ ಚೌಡಯ್ಯ ಜಯಂತಿ ಪೂರ್ವಭಾವಿಯಾಗಿ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕರಾದ ಎಸ್. ವಿ. ಅಯ್ಯನಗೌಡರ ತಿಳಿಸಿದರು.
ಭಕ್ತಿ ಬಹಳ ಮಹತ್ವವಾದ ಶಕ್ತಿ ಹೊಂದಿದೆ. ಈ ದಿಶೆಯಲ್ಲಿ ಪ್ರತಿಯೊಬ್ಬರು ಸಂಸ್ಕಾರದ ಮೂಲಕ ಸಂಸ್ಕೃತಿ ಬೆಳೆಸಬೇಕೆಂದರು. ವೀರತ್ವ ಮತ್ತು ನಿಷ್ಠೆಯಲ್ಲಿ ಅಂಬಿಗರ ಚೌಡಯ್ಯ ಮಹತ್ವದ ಸ್ಥಾನ ಪಡೆದಿದ್ದಾರೆ. ಅವರು ನಿಜ ಶರಣರು ಆಗಿದ್ದರು. ಅಂಬಿಗರ ಚೌಡಯ್ಯನವರು ಸುಮಾರು 276 ವಚನಗಳನ್ನು ರಚಿಸಿದ್ದಾರೆ. ಅವುಗಳ ಅಧ್ಯಯನ ನಾವಿಂದು ಮಾಡಬೇಕೆಂದರು. ಶಿವಶರಣರ ಸಾಧನೆಗಳು ಹಾಗೂ ಸಂದೇಶಗಳ ಸ್ಮರಣೆ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು.
ಬಸವ ಸಮಿತಿಯ ಸಂಚಾಲಕರಾದ ಎಂ. ಜಿ. ಮುಳಕೂರ ಅಧ್ಯಕ್ಷತೆವಹಿಸಿ ಮಾತನಾಡಿ ಪ್ರತಿಯೊಬ್ಬರಿಗೂ ಉತ್ತಮವಾದ ಆರೋಗ್ಯ ಮತ್ತು ಆದ್ಯಾತ್ಮಿಕ ಜ್ಞಾನ ನೀಡಲು ಈ ಸಮೀತಿ ಶ್ರಮಿಸುತ್ತದೆ. ಈ ಕೇಂದ್ರದಲ್ಲಿ ಪ್ರತಿ ರವಿವಾರ ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಇಷ್ಠಲಿಂಗ ಶಿಬಿರ ಎರ್ಪಡಿಸಲಾಗುತ್ತದೆ. ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಇದೇ ಸಂದರ್ಭದಲ್ಲಿ ಕಲ್ಯಾಣ ನಗರದ ಶರಣ ಶರಣಿಯರಿಗಾಗಿ ಉಷಾ ಗದಗಿನಮಠ ಅವರು ಶಿವಶರಣರ ಕುರಿತು ರಸಪ್ರಶ್ನೆ ಕಾರ್ಯಕ್ರಮ ಎರ್ಪಡಿಸಿದ್ದರು.
ಆರಂಭದಲ್ಲಿ ಮಂಜುಳಾ ಹಿರೇಮಠ ವಚನಗಾಯನ ಮಾಡಿದರು. ಸುಜಾತಾ ಕಿತ್ತೂರ ಸ್ವಾಗತಿಸಿದರು. ಚಿನ್ಮಯಿ ಪಾಟೀಲ ಕಾರ್ಯಕ್ರಮ ನಿರೂಪಣೆ ಮಾಡಿದರು. ಶರಣ ಬಿ. ಕೆ. ಪೊಲೀಸಪಾಟೀಲ ಅತಿಥಿಗಳ ಪರಿಚಯ ಮಾಡಿದರು. ಮುಕ್ತಾ ಅಳಗವಾಡಿ ವಂದಿಸಿದರು.
ಉಪನ್ಯಾಸ ಕಾರ್ಯಕ್ರಮದಲ್ಲಿ ಎಂ. ಪಿ. ಹಳ್ಳಿಕೇರಿ ಮಹದೇವ ಪಾಟೀಲ, ಪಿ. ಎಸ್. ಹಿರೇಮಠ ಎಂ. ಆರ್. ಈಶಣ್ಣ ಹಾಗೂ ಕಲ್ಯಾಣನಗರದ ಶರಣ ಶರಣೆಯರು ಭಾಗವಹಿಸಿದ್ದರು.