ಶಿರವಾಡ ಅತಿಕ್ರಮಣ ಮನೆ ತೆರವು ಪ್ರಕರಣ : ಸ್ಥಳೀಯ ನಿವಾಸಿಗಳ ಮನವಿಗೆ ಶಾಸಕರ ಸ್ಪಂದನೆ

ಶಿರವಾಡ  ಅತಿಕ್ರಮಣ ಮನೆ ತೆರವು ಪ್ರಕರಣ : ಸ್ಥಳೀಯ ನಿವಾಸಿಗಳ ಮನವಿಗೆ ಶಾಸಕರ ಸ್ಪಂದನೆ    Shirwad encroachment house eviction case: MLAs respond to local residents' plea

ಕಾರವಾರ 21 : ಕಾರವಾರ ನಗರಕ್ಕೆ ಸಮೀಪದ ಶಿರವಾಡ ಪಂಚಾಯತ ವ್ಯಾಪ್ತಿಯಲ್ಲಿ ಅರಣ್ಯ ಭೂಮಿ ಅತಿಕ್ರಮಣ ಮಾಡಿ ಕಟ್ಟಿದ್ದಾರೆ ಎನ್ನಲಾದ ಮನೆ ತೆರವು ಪ್ರಕರಣ ಹೊಸ ತಿರುವು ಪಡೆದಿದೆ. ಶಿರವಾಡ ಬಂಗಾರ​‍್ಪ ನಗರದಲ್ಲಿ ಅರಣ್ಯ ಇಲಾಕೆ ಅನುಮತಿ ಇಲ್ಲದೆ ಸರ್ಕಾರಿ ಜಾಗ ಅತಿಕ್ರಮಣ ಮಾಡಿ ಕೆಲವರು ಕಟ್ಟಿದ ಮನೆಗಳನ್ನು ತೆರವು ಮಾಡಲು ಅರಣ್ಯ ಇಲಾಖೆ ಮುಂದಾಗಿದ್ದು, ಇದರ ವಿರುದ್ಧ ಮನೆ ನಿವಾಸಿಗಳು ಮನೆಗಳನ್ನು ತೆರವು ಮಾಡದಂತೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರಿಗೆ ಗುರುವಾರ ಮನವಿ ನೀಡಿದರು.

ಮಳೆಗಾಲ ಹತ್ತಿರ ಇರುವಾಗ ಮನೆಗಳನ್ನು ನಾಶ ಮಾಡಬಾರದು ಎಂದು ವಿನಂತಿಸಿದೆ. ಜಿಲ್ಲಾಧಿಕಾರಿ ಕಚೇರಿಯ ಹೊರ ಆವರಣಕ್ಕೆ ಆಗಮಿಸಿದ ಶಾಸಕ ಸತೀಶ್ ಸೈಲ್ ಕಾರವಾರ ತಾಲ್ಲೂಕಿನ ಶಿರವಾಡ ಗ್ರಾಮದ ಅರಣ್ಯ ಇಲಾಖೆಯವರು ಬಂಗಾರ​‍್ಪ ನಗರದ ಮನೆ ತೆರವುಗೊಳಿಸುವುದನ್ನು ತಡೆಹಿಡಿಯುವಂತೆ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಹಾಗೂ ಅರಣ್ಯ ಇಲಾಖೆಯವರಿಗೆ ಅತಿಕ್ರಮಣ ಮನೆ ಕೆಡವದಂತೆ ಸೂಚಿಸಿದರು. ಜಿಲ್ಲಾಧಿಕಾರಿಗಳು ಮನೆ ಕಳೆದುಕೊಂಡವರಿಗೆ ಮನೆ ನೀಡುವ ಪ್ರಕ್ರಿಯೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.  

ತಡೆಗೋಡೆ ನಿರ್ಮಿಸಿ : ಅಂಕೋಲಾ ತಾಲ್ಲೂಕಿನ ಹಾರವಾಡ ಗ್ರಾಮದ ಕಡಲ ಕೊರೆತದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಹಾರವಾಡ ಕಡಲತೀರದ ನಿವಾಸಿಗಳು ಸರ್ಕಾರವನ್ನು ಆಗ್ರಹಿಸಿದರು. ಸ್ಥಳದಲ್ಲಿದ್ದ ಶಾಸಕ ಸತೀಶ್ ಸೈಲ್ ಮಾತನಾಡಿ , ಹಾರವಾಡ ಕಡಲ ತಡೆಗೋಡೆ ಕಾಮಗಾರಿಗೆ ಅಗತ್ಯ ಟೆಂಡರ ಪ್ರಕ್ರಿಯೆ ಆದಷ್ಟು ಶೀಘ್ರ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು. ಪೌರ ಕಾರ್ಮಿಕರ ಸಮಸ್ಯೆ : ಇದೇ ವೇಳೆ ಪೌರ ಕಾರ್ಮಿಕರು ಸಮಸ್ಯೆ ಹೊತ್ತು ಜಿಲ್ಲಾಧಿಕಾರಿ ಬಳಿ ಆಗಮಿಸಿದ್ದರು. ಪೌರ ಕಾರ್ಮಿಕರು ತಾವು ವಾಸ ಇರುವ ಗಾಂಧಿನಗರದ ಹಳೆ ಮನೆಗಳನ್ನು ಬಿಡುವಂತೆ ಪೌರಾಯುಕ್ತ ಹುಲಗೆಜ್ಜೆ ಒತ್ತಾಯಿಸುತ್ತಿದ್ದಾರೆ.  

ಹೊಸ ಮಲ್ಟಿ ಸ್ಟೋರ್ ಕಟ್ಟುವ ಕಾರಣಕ್ಕೆ ನಮ್ಮನ್ನು ವಕ್ಕಲೆಬ್ಬಿಡಲಾಗುತ್ತಿದೆ. ಮಳೆಗಾಲ ಹತ್ತಿರ ಇರುವಾಗ ಹಳೆ ಮನೆ ಬಿಡಿಸಿದರೆ, ಎಲ್ಲಿಗೆ ಹೋಗುವುದು ಎಂದು ಪೌರಕಾರ್ಮಿಕರು ಜಿಲ್ಲಾಧಿಕಾರಿ ಬಳಿ ಅಳಲು ತೋಡಿಕೊಂಡರು. ಕಾರವಾರದ ಗಾಂಧಿನಗರದ ಪೌರ ಕಾರ್ಮಿಕರ ಮನೆಯನ್ನು ಮಳೆಗಾಲ ಮುಗಿಯುವ ತನಕ ತೆರವುಗೊಳಿಸದಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಲಾಯಿತು. ಪೌರಾಯುಕ್ತರು ಗಾಂಧಿನಗರದ ಹಳೆ ಮನೆಗಳ ಬಗ್ಗೆ ವಿವರಣೆ ನೀಡಲು ಮುಂದಾದರು. ಆದರೆ ಅವರಿಗೆ ಹೊಸ ಬಹುಮಹಡಿ ಕಟ್ಟಡ ಪ್ರಾರಂಭಿಸಲು ಯಾಕೆ ವಿಳಂಬ ಮಾಡಿದಿರಿ . ಮಳೆಗಾಲದಲ್ಲಿ ಪೌರ ಕಾರ್ಮಿಕರನ್ನು ಹೊರ ಹಾಕಬೇಡಿ ಎಂದು ಶಾಸಕರು ಸೂಚಿಸಿದರು .

ಶಿರವಾಡ, ಹಾರವಾಡ, ಗಾಂಧಿನಗರ ನಿವಾಸಿಗಳ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಎಲ್ಲಾ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರೀಶೀಲಿಸುವ ಭರವಸೆ ನೀಡಿದರು. ಈ ಬೇಡಿಕೆಗಳ ಸಲ್ಲಿಕೆಯ ವೇಳೆ ಕಾಂಗ್ರೆಸ್ ಧುರೀಣ ಕೆ. ಶಂಭು ಶೆಟ್ಟಿ, ಮಾಜಿ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಸಮೀರ , ಪೋಲಿಸರು , ನಗರ ಸಭೆ ಪೌರಾಯುಕ್ತರು,ಅರಣ್ಯ ಅಧಿಕಾರಿ ಕೆ.ಡಿ ನಾಯ್ಕ, ಕೃಷ್ಣಾನಂದ ಗಾಂವಕಾರ, ಶಿರವಾಡ ಗ್ರಾಮಸ್ಥರು, ಹಾರವಾಡದ ಮುಖಂಡರು,ಗ್ರಾಮಸ್ಥರು ,ಕಾರವಾರದ ಗಾಂಧಿನಗರದ ಪೌರಕಾರ್ಮಿಕರು , ನಿವಾಸಿಗಳು ಉಪಸ್ಥಿತರಿದ್ದರು.