ಶಿರಹಟ್ಟಿ : ಗಟಾರದ ಕೊಳಚೆ ನೀರಿನಿಂದ ತುಂಬಿದ ರಸ್ತೆಗಳು

ಶಶಿಧರ ಶಿರಸಂಗಿ

ಶಿರಹಟ್ಟಿ 24: ಇತ್ತೀಚೆಗೆ ಎಲ್ಲೆಡೆಯೂ ಎಲ್ಲ ಸ್ಥಳಗಳಲ್ಲಿಯೂ ಸ್ವಚ್ಛತೆಗೆ ಪ್ರಾಧಾನ್ಯತೆ ನೀಡುತ್ತಿರುವುದು ಪ್ರಮುಖವಾಗಿದೆ. ಅದರಂತೆಯೇ ಶಿರಹಟ್ಟಿ ಪಟ್ಟಣ ಪಂಚಾಯತಿ ಕಾರ್ಯ ವೈಖರಿಯನ್ನು ನೋಡಿದರೆ ಇದಕ್ಕೆ ತದ್ವಿರುದ್ಧವಾಗಿದೆ ಎಂಬಂತೆ ಕಾಣುತ್ತದೆ ಇದಕ್ಕೆ ಸಾಕ್ಷಿಯೇ ಸುರಿದ ಮಳೆಯ ನೀರು ರಸ್ತೆ ಮೇಲೆ ಹರಿದು ಜನಸಾಮಾನ್ಯರಿಗೆ ತೊಂದರೆ ನೀಡಿದ್ದು. 

ಹೌದು ಕೇವಲ ಒಂದು ಘಂಟೆಗೂ ಅಧಿಕ ಕಾಲ ಸುರಿದ ಮಳೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿನ ಚರಂಡಿಗಳು ಅಲ್ಲಲ್ಲಿ ಬ್ಲಾಕ್ ಆದ ಕಾರಣ ಮಳೆ ನೀರಿನ ಜೊತೆಗೆ ಕೊಳಚೆ ನೀರು ಸೇರಿ ರಸ್ತೆ ಮೇಲೆ ನುಗ್ಗಿ ಕೊಳಚೆ ಪ್ರವಾಹವನ್ನೇ ಸೃಷ್ಟಿಸಿತ್ತು. ಪಟ್ಟಣದಲ್ಲಿನ ರಸ್ತೆಗಳನ್ನು ನೋಡಿದರೆ ಜನರು ಮೂಗು ಮುಚ್ಚಿಕೊಂಡು ಓಡಾಡುವು ಸ್ಥಿತಿ ಬಂದೊದಗಿತ್ತು. 

ಚರಂಡಿಗಳು ತುಂಬಿದ ತಕ್ಷಣ ಅವುಗಳನ್ನು ಸ್ವಚ್ಚಗೊಳಿಸುವ ಕಾರ್ಯದಲ್ಲಿ ತೊಡಗುವ ಪಟ್ಟಣ ಪಂಚಾಯತಿ ಸಿಬ್ಬಂದಿ, ಚರಂಡಿ ಒಳಗಿನ ಗಲಿಜನ್ನು ಎತ್ತಿ ಹೊರಕ್ಕೆ ಹಾಕುವದು ಮತ್ತು ಅದನ್ನು ಟ್ಯಾಕ್ಟರನಲ್ಲಿ ತೆಗೆದು ಊರಾಚೆ ಹಾಕುವದು ಬಿಟ್ಟರೆ ಚರಂಡಿಗಳು ಎಲ್ಲಿ ಬ್ಲಾಕ್ ಆಗಿವೆ ಎನ್ನುವದರ ಬಗ್ಗೆ ತಲೆ ಕೆಡಿಸಿಕೊಳ್ಳದಿರುವ ಪರಿಣಾಮವೇ ಮಳೆಯ ರಭಸಕ್ಕೆ ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆ ಉದ್ದಕ್ಕೂ ಹರಿಯುತ್ತಿರುವ ಪರಿಣಾಮವಾಗಿ  ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. 

ನೆಹರು ವೃತ್ತದಿಂದ ಚರಂಡಿಯ ಕೊಳಚೆ ನೀರು ರಸ್ತೆಗೆ ಧುಮಕಿ ಮಳೆಯ ನೀರಿನ ಜೊತೆಗೆ ಸೇರಿ ಪೇಟೆ ರಸ್ತೆಯಲ್ಲಿ ಜನರ ಪಾದ ಮುಣುಗುವ ವರೆಗೂ ರಭಸದ ಓಟ ಜನರಿಗೆ ಮಳೆ ನಿಂತ ಮೇಲೂ ಮುಗು ಮುಚ್ಚಿಕೊಂಡು ಓಡಾಡುವ ಕಿರಿಕಿರಿ ಉಂಟು ಮಾಡಿದ್ದಂತು ಸುಳ್ಳಲ್ಲ. ಇನ್ನೂ ಕೆಳಗೇರಿ ಹಾಗೂ ಆಸಾರಗಲ್ಲಿ ಪಟ್ಟಣದ ಇಳಿಜಾರು ಪ್ರದೇಶದಲ್ಲಿದ್ದು ಅಲ್ಲಿಯ ಜನರ ಗೋಳಂತು ಹೇಳತಿರದು.