ಶಿಗ್ಗಾವಿ: ಶ್ರೀ ಆಂಜನೇಯ ದೇವಸ್ಥಾನ ಘಟನೆ ಖಂಡಿಸಿದ ಅಂಜುಮನ್ ಇಸ್ಲಾಂ ಸಂಸ್ಥೆ

ಶಿಗ್ಗಾವಿ: ಶ್ರೀ ಆಂಜನೇಯ ದೇವಸ್ಥಾನ ಘಟನೆ ಖಂಡಿಸಿದ ಅಂಜುಮನ್ ಇಸ್ಲಾಂ ಸಂಸ್ಥೆ Shiggavi: Anjuman Islam organization has condemned the Sri Anjaneya temple incident

ಲೋಕದರ್ಶನ ವರದಿ 

ಶಿಗ್ಗಾವಿ, ಆ.೨೪: ಪಟ್ಟಣದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ನಡೆದ ಘಟನೆಯಿಂದ ಹಿಂದೂ ಬಾಂಧವರಿಗೆ ಉಂಟಾದ ನೋವಿಗೆ ಅಂಜುಮನ್ ಇಸ್ಲಾಂ ಸಂಸ್ಥೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ನಡೆಯುವ ಕಾನೂನು ಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ. 

ಪಟ್ಟಣದಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆ ವತಿಯಿಂದ ಕರೆಯಲಾಗಿದ್ದ ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಮೌಲಾಲಿ ದೊಡ್ಡಮನಿ ಮಾತನಾಡಿ, ಶ್ರೀ ಆಂಜನೇಯ ದೇವಸ್ಥಾನದಲ್ಲಿ ನಡೆದ ಘಟನೆಯನ್ನು ಸಂಸ್ಥೆ ತೀವ್ರವಾಗಿ ಖಂಡಿಸುತ್ತದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸುವುದರ ಜೊತೆಗೆ, ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟಾಗದAತೆ ಸಾರ್ವಜನಿಕರು ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. 

ಸಂಸ್ಥೆಯ ಸದಸ್ಯ ಸಲೀಂ ಅಹ್ಮದ್ ಫರೋಖಿ ಮಾತನಾಡಿ, ಯಾವುದೇ ಧರ್ಮದ ಆರಾಧನಾ ಸ್ಥಳದ ಪಾವಿತ್ರö್ಯಕ್ಕೆ ಧಕ್ಕೆ ತರುವುದು ಅಕ್ಷಮ್ಯ ಅಪರಾಧ. ಕೃತ್ಯ ಎಸಗಿದ ವ್ಯಕ್ತಿ ಯಾರೇ ಆಗಿದ್ದರೂ, ಅವರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ಕಾನೂನುಬದ್ಧ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು. 

ದೇವಸ್ಥಾನದಲ್ಲಿ ನಡೆದ ಘಟನೆ ಹಿಂದೂ ಸಮಾಜಕ್ಕೆ ಮಾತ್ರವಲ್ಲದೆ, ಮುಸ್ಲಿಂ ಸಮುದಾಯದ ಹಿರಿಯರು ಹಾಗೂ ಯುವಕರಿಗೂ ನೋವುಂಟು ಮಾಡಿದೆ. ಹಿಂದೂ ಸಹೋದರರ ನೋವಿನಲ್ಲಿ ತಾವೂ ಭಾಗಿಯಾಗಿದ್ದು, ನ್ಯಾಯಕ್ಕಾಗಿ ಕಾನೂನುಬದ್ಧವಾಗಿ ನಡೆಯುವ ಪ್ರತಿಯೊಂದು ಹೆಜ್ಜೆಗೂ ಸಂಸ್ಥೆಯ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು. 

ಸೌಹಾರ್ದತೆಗೆ ಧಕ್ಕೆ ತರದಂತೆ ಮನವಿ 

ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ಹೊಣೆ ಮಾಡುವುದು ಸರಿಯಲ್ಲ. ಶಿಗ್ಗಾವಿಯಲ್ಲಿ ಬಹುಕಾಲದಿಂದ ನೆಲೆಸಿರುವ ಹಿಂದೂ-ಮುಸ್ಲಿA ಬಾಂಧವ್ಯ ಮತ್ತು ಸೌಹಾರ್ದತೆಗೆ ಯಾವುದೇ ಕಾರಣಕ್ಕೂ ಧಕ್ಕೆ ಉಂಟಾಗಬಾರದು ಎಂದು ಅವರು ಮನವಿ ಮಾಡಿದರು. 

ಆಗಸ್ಟ್ ೨೬ರಂದು ಅಂಜುಮನ್ ಇಸ್ಲಾಂ ಸಂಸ್ಥೆ ವತಿಯಿಂದ ಪ್ರವಾದಿ ಮಹಮ್ಮದ್ ಅವರ ಜನ್ಮದಿನದ ಅಂಗವಾಗಿ (ಈದ್ ಮಿಲಾದ್) ಆಯೋಜಿಸಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಹಿಂದೂ ಬಾಂಧವರು, ಹಿರಿಯರು ಹಾಗೂ ಯುವಕರು ಪ್ರತಿವರ್ಷದಂತೆ ಭಾಗವಹಿಸಿ ಸಹಕರಿಸಬೇಕು ಎಂದು ಸಂಸ್ಥೆಯ ಪದಾಧಿಕಾರಿಗಳು ಮನವಿ ಮಾಡಿದರು. 

ಇತ್ತೀಚೆಗೆ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಮುಂಬರುವ ಈದ್ ಮಿಲಾದ್ ಕಾರ್ಯಕ್ರಮಕ್ಕೂ ಆಗಮಿಸಿ ಸೌಹಾರ್ದತೆಯ ಸಂಕೇತವಾಗಿ ನಮ್ಮೊಂದಿಗೆ ನಿಲ್ಲಬೇಕು ಎಂಬುದು ಸಂಸ್ಥೆಯ ಪದಾಧಿಕಾರಿಗಳ ಆಶಯವಾಗಿದೆ ಎಂದು ತಿಳಿಸಿದರು. 

“ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವೇ ಶಿಗ್ಗಾವಿಯ ನಿಜವಾದ ಶಕ್ತಿ. ಪ್ರತಿಯೊಂದು ಧರ್ಮದ ಪವಿತ್ರ ಸ್ಥಳಗಳ ಗೌರವವನ್ನು ಎತ್ತಿಹಿಡಿಯುವುದು ಎಲ್ಲರ ಕರ್ತವ್ಯ,” ಎಂದು ಅಂಜುಮನ್ ಇಸ್ಲಾಂ ಸಂಸ್ಥೆ ಪ್ರತಿಪಾದಿಸಿತು. 

ಸಭೆಯಲ್ಲಿ ಅಧ್ಯಕ್ಷ ಮೌಲಾಲಿ ದೊಡ್ಡಮನಿ, ಉಪಾಧ್ಯಕ್ಷ ಖಾಜಾ ಚೂಡಿಗಾರ, ಅಬ್ದುಲ್ ತುಫಲಿ, ಸಾದಿಕ್ ಸವಣೂರು, ಖಾಜಾ ಶ್ಯಾಬಾಳ, ಮಹಮ್ಮದ್ ಹನೀಫ್ ಅಂಬೂರ, ಇಮ್ತಿಯಾಜ್ ಅಹ್ಮದ್ ಮುಲ್ಲಾ, ಶಕೀರ್ ಅಹ್ಮದ್ ಬೇಪಾರಿ, ಅತಾವುಲ್ಲಾ ಖಾಜೆಕಾನವರ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.