ಹೆಣ್ಣೊಬ್ಬಳ ಹೃದಯಾಂತರಾಳದ ದಳ್ಳುರಿಯನ್ನು ಅಭಿವ್ಯಕ್ತಿಸುವ ಶಮಾ ಗಜಲ್

ಎಲ್ಲರನ್ನೂ ಕುಣಿಸಿ ನೋಡುವ ನೀನು ಕುಣಿದರೆ ಹೇಗಿರುತ್ತದೆ 

ಎಲ್ಲರನ್ನೂ ಅಳಿಸಿ ನಗುವ ನೀನು ಅಳುತಿರೆ ಹೇಗಿರುತ್ತದೆ 

ಮೇಲಿನವನ ಆಣತಿ ಮೀರಿ ಇಲ್ಲಿ ಏನೂ ನಡೆಯದು. ತನ್ನ ಮನಸಿಗೆ ಬಂದ ಹಾಗೆ ಎಲ್ಲರನ್ನೂ ಕುಣಿಸುವ, ಅಳಿಸುವ ಆತನಿಗೇ ಕಷ್ಟಗಳು ಆವರಿಸಿದರೆ, ಅವನೇ ಇನ್ನೊಬ್ಬರ ಆಣತಿಯಂತೆ ನಡೆಯಬೇಕಾಗಿ ಬಂದರೆ ಹೇಗಿರುತ್ತದೆಂದು ಒಮ್ಮೆ ನೋಡಬೇಕು ಎಂದು ಅಪೇಕ್ಷಿಸುವ ಈ ಗಜಲ್ ಸಾಲುಗಳು ಶಮಾ ಎಮ್‌. ಜಮಾದಾರ ಅವರದು. ಆಂಗ್ಲ ಭಾಷಾ ಸಾಹಿತ್ಯದಲ್ಲಿ ಪದವಿ ಪಡೆದಿರುವ ಶಮಾ ಜಮಾದಾರ ಬೆಳಗಾವಿ ಜಿಲ್ಲೆಯ ಯರಗಟ್ಟಿಯವರು. ವಿದ್ಯಾರ್ಥಿಯಾದಾಗಿನಿಂದಲೂ ಕತೆ, ಕವಿತೆ, ಹನಿಗವಿತೆ ಬರೆಯುವ ಹವ್ಯಾಸವಿದ್ದರೂ ಅದಕ್ಕೆ ಇಂಬು ದೊರೆತದ್ದು ಇತ್ತೀಚೆಗೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ರೇಡಿಯೋದಲ್ಲಿಯೂ ಇವರ ಕವಿತೆ, ಚುಟುಕುಗಳು ಪ್ರಸಾರವಾಗಿವೆ. ‘ಬಿಂಬ’ ಎಂಬ ಕವನ ಸಂಕಲನ 2019 ರಲ್ಲಿ ಪ್ರಕಟವಾಯಿತು. 2020 ರಿಂದ ಇವರು ಗಜಲ್ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ಶಮಾ’ ಎಂಬ ಕಾವ್ಯನಾಮದಿಂದ ಗಜಲ್ ಬರೆಯುವ ಇವರು ‘ಶಮಾ ಗಜಲ್‌’ ಹಾಗೂ ‘ನೆಂದ ನೆಲದ ಘಮಲು’ ಎಂಬ ಎರಡು ಗಜಲ್ ಸಂಕಲನಗಳನ್ನು ಪ್ರಕಟಿಸಿ ಗಜಲ್ ಕಾವ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಬರೆದಿರುವ ಒಂದು ಗಜಲ್‌ನ ಓದು ಮತ್ತು ಅದರ ಒಳನೋಟ ಗಜಲ್ ಪ್ರಿಯರಿಗಾಗಿ. 

ಗಜಲ್ 

ನನ್ನ ಬಂಡಾಯದ ಗೀತೆ ತುಟಿಯ ಗಡಿಯನು ದಾಟಲೇಯಿಲ್ಲ 

ನನ್ನ ಮನದಾಳದ ನೋವು ಜಗದ ಮನವನು ಮೀಟಲೇಯಿಲ್ಲ 

ಶತಮಾನಗಳ ತಪಸ್ಸಿಗೆ ಭಂಗ ತರುತ್ತಲೇ ಇದೆ ಸಂಪ್ರದಾಯ 

ನನ್ನ ಮನದೊಳಗಿನ ಸೀತೆ ಅಗ್ನಿಪರೀಕ್ಷೆಯನು ಗೆಲ್ಲಲೇಯಿಲ್ಲ 

ಅದೆಷ್ಟು ಸಾಬೀತು ಪಡಿಸಲಿ ಅಸಲಿ ಅಸ್ತಿತ್ವದ ಕಡುಸತ್ಯವನ್ನು 

ನನ್ನ ಬೆನ್ನಿಗೆ ಆಗಸಕೇರುವ ಗರಿಗಳು ಮೂಡಲೇಯಿಲ್ಲ 

ಮೇಲುಕೀಳಿನ ಧಡಂ ದುಡಕಿಯಲಿ ಸವೆಯುತಿದೆ ಜೀವನ 

ನನ್ನ ಕನಸುಗಳಿಗೆ ನನಸಾಗುವ ಭಾಗ್ಯ ದೊರಕಲೇಯಿಲ್ಲ 

ತಿದಿಯೊತ್ತುವ ಅಲಿಖಿತ ಕಾನೂನಿನ ಬೇಡಿಯಲ್ಲಿ ಬಂಧಿ ನಾನು 

ನನ್ನ ಮನಸಿನ ಆಶೆಗಳ ಶಮೆಯೆಂದೂ ಬೆಳಗಲೇಯಿಲ್ಲ  

- ಶಮಾ ಎಮ್‌. ಜಮಾದಾರ   


“ಆಕಾಶದ ನೀಲಿಯಲ್ಲಿ/ಚಂದ್ರ ತಾರೆ ತೊಟ್ಟಿಲಲ್ಲಿ/ಬೆಳಕನಿಟ್ಟು ತೂಗಿದಾಕೆ/ನಿನಗೆ ಬೇರೆ ಹೆಸರು ಬೇಕೆ?/ಸ್ತ್ರೀ ಅಂದರೆ ಅಷ್ಟೇ ಸಾಕೆ?” ಎಂದು ಹೆಣ್ಣಿನ ತ್ಯಾಗ, ಮಮತೆ, ಶಕ್ತಿಯನ್ನು ಕವಿಗಳು ಕವಿತೆಯಲ್ಲಿ ಹಾಡಿ ಕೊಂಡಾಡಿದ್ದಾರೆ. ನಿಸರ್ಗದ ಎಲ್ಲ ಚೆಲುವಿಕೆಗೂ ಆಕೆಯ ಹೆಸರನ್ನೇ ಇಟ್ಟು ಸಂಭ್ರಮಿಸಿದ್ದಾರೆ. ಯಾವ ನೆಲದಲ್ಲಿ ಸ್ತ್ರೀಯನ್ನು ಗೌರವಿಸಲಾಗುತ್ತದೆಯೋ ಆ ನೆಲ ಸ್ವರ್ಗಕ್ಕಿಂತಲೂ ಮಿಗಿಲು ಎಂದು ನುಡಿದು ಪಾವನವಾಗಿದ್ದಾರೆ. ಆದರೆ ವಾಸ್ತವ ಸ್ಥಿತಿ ಹಾಗಿದೆಯೇ? ಎಂದು ಅವಲೋಕಿಸಿದರೆ ಅದರ ತದ್ವಿರುದ್ಧದ ಸನ್ನಿವೇಶವೇ ಹೆಜ್ಜೆ ಹೆಜ್ಜೆಗೂ ಕಾಣಸಿಗುತ್ತದೆ. ಹೆಣ್ಣೊಬ್ಬಳ ಹೃದಯಾಂತರಾಳದ ದಳ್ಳುರಿಯನ್ನು ಶಮಾ ಜಮಾದಾರ ಅವರ ಗಜಲ್ ಅಭಿವ್ಯಕ್ತಿಸುತ್ತದೆ. ಹೋಲಿಕೆಗೂ ನಿಲುಕದ ಎತ್ತರದ ವ್ಯಕ್ತಿತ್ವ ಮಹಿಳೆಯದಾಗಿದ್ದರೂ ಆಕೆಗೆ ಸಿಗಬೇಕಾದ ಗೌರವ, ಮಾನ್ಯತೆ, ಸ್ವಾತಂತ್ರ್ಯ, ಸಮಾನತೆ ಇನ್ನೂ ದೊರೆತಿಲ್ಲ ಎಂಬುದಕ್ಕೆ ಈ ಗಜಲ್‌ನಲ್ಲಿ ಸಾಕಷ್ಟು ಸಾಕ್ಷಿಗಳು ಸಿಗುತ್ತವೆ. 

ಈ ಜಗತ್ತೇ ಹೀಗೆ... ಇಲ್ಲಿ ಯಾರ ನೋವಿಗೂ ಯಾರ ಮನಸ್ಸೂ ಮಿಡಿಯುವುದೇ ಇಲ್ಲ. ಶತಮಾನಗಳಿಂದಲೂ ಅಳ್ಳೆದೆಯವರ ಮೇಲೆ ಉಳ್ಳವರ ದಬ್ಬಾಳಿಕೆ ನಡೆದೇ ಇದೆ. ಅದರಲ್ಲೂ ರಾಮಾಯಣ, ಮಹಾಭಾರತದ ಕಾಲದಿಂದಲೂ ಹೆಣ್ಣು ಭೋಗದ ವಸ್ತುವಾಗಿ ಭಾವನೆಗೆ ಬೆಲೆಯಿಲ್ಲದಂತೆ ಬದುಕುತ್ತಿರುವುದು ಈ ಶತಮಾನದ ವಿಪರ್ಯಾಸದ ಸಂಗತಿ. ಆಕೆಯ ಪ್ರತಿಭಟನೆ, ವಿರೋಧ ಎಂದೂ ಗಂಟಲಿನಿಂದೀಚೆ ಬರಲೇ ಇಲ್ಲ. ಆಕೆ ಅನುಭವಿಸುತ್ತಿರುವ ನೋವು ಕಲ್ಲು ಹೃದಯದ ಜಗತ್ತಿಗೆ ಅರ್ಥವಾಗಲೇ ಇಲ್ಲ. ಆಕೆ ಎಷ್ಟೇ ಎತ್ತರೆತ್ತರಕ್ಕೇರುವಂತ ಸಾಧನೆಯ ಹರಿಕಾರಳಾಗಿದ್ದರೂ ಸಂಪ್ರದಾಯವೆಂಬ ಬಿಗ್ಗಬಿಗಿ ಚೌಕಟ್ಟಿನಲ್ಲಿ ಸದಾಕಾಲ ಬಂಧಿಯಾಗಿಯೇ ಇರಬೇಕಾದ ಅನಿವಾರ್ಯತೆ. ರಾಮಾಯಣದ ಸೀತೆಯೇನೋ ಅಗ್ನಿಪರೀಕ್ಷೆಯಲಿ ಗೆದ್ದು ತನ್ನತನವನ್ನು ಸಾಬೀತು ಪಡಿಸಿಬಿಟ್ಟಳು. ಆದರೆ ಈ ಆಧುನಿಕ ಕಾಲದ ಸೀತೆಗೆ ಕ್ಷಣ ಕ್ಷಣಕ್ಕೂ ಇದಿರಾಗುವ ಅಗ್ನಿಪರೀಕ್ಷೆಗಳ ಜಯಿಸಲಾಗುತ್ತಿಲ್ಲ. ತನ್ನ ಇರುವಿಕೆಯನ್ನೇ ಸಾಬೀತುಪಡಿಸಬೇಕಾದ ಸಂದರ್ಭದಲ್ಲಿ ಮಹಿಳೆಯಿದ್ದಾಳೆ. ಗಗನಕ್ಕೇರುವ ಆಕೆಯ ಕನಸು ಗಗನಕುಸುಮವಾಗಿರುವುದು ದುರಂತ. ತಾರತಮ್ಯದ ತಕ್ಕಡಿಯಲ್ಲಿ ಕಳೆದು ಹೋಗುತ್ತಿದೆ ಬದುಕು. ಕನಸು ಬಿಡುಗಡೆಯಾಗುವ ಭಾಗ್ಯ ಸಿಗುವುದೆಂದೋ? ಅಲಿಖಿತ ಕಾನೂನು ಕಟ್ಟಳೆಗಳಿಗೆ ಸಿಲುಕಿ ನರಳುತ್ತಿರುವ ಮಹಿಳಾ ಸಂಕುಲಕ್ಕೆ ಮುಕ್ತಿ ಸಿಗಬೇಕಿದೆ. ಕತ್ತಲು ಮುತ್ತಿದ ಆಕೆಯ ಮನಸಿನಂಗಳಕ್ಕೆ ಬೆಳಕಿನ ಕಿರಣಗಳು ಪ್ರವೇಶಿಸಬೇಕಿದೆ. ಹಾಗಾದಾಗಲೇ ಅಲ್ಲವೇ ಗೌರವಯುತ ಬಾಳ್ವೆಗೆ ಬೆಲೆ ಬರುವುದು. ಇಂತಹ ಎಲ್ಲ ಆಶೋತ್ತರಗಳನ್ನು ಹೊರಚೆಲ್ಲುವ ಶಮಾ ಜಮಾದಾರ ಅವರ ಗಜಲ್ ಕಾಡುತ್ತದೆ. 

ಮತ್ತಷ್ಟು ಗಜಲ್ ಸಂಕಲನಗಳನ್ನು ಶಮಾ ಜಮಾದಾರ ಅವರು ಹೊರತರಲಿ, ಅಪರೂಪದ ಗಜಲ್ ಓದುವ ಭಾಗ್ಯ ನಮ್ಮದಾಗಲಿ ಎಂದು ಕೋರುತ್ತಾ ಅವರಿಗೆ ಒಳ್ಳೆಯ ಗಜಲ್‌ಗಾಗಿ ಶುಭ ಕೋರುವೆ. 

- ನಾಗೇಶ್ ಜೆ. ನಾಯಕ 


- * * * -