ಶೇಕ್ಸ್ ಪಿಯರ್ ಸರಿ ಸಮನಾದ ಕವಿ ಕಾಳಿದಾಸ

ಬೆಂಗಳೂರು, ನ 9: ಇಂಗ್ಲೀಷ್ನ ಪ್ರಖ್ಯಾತ ಕವಿ ಶೇಕ್ಸ್ ಪಿಯರ್ ಹುಟ್ಟೂರಿನಲ್ಲಿ ನಡೆಯುವ ಉತ್ಸವದಂತೆ ಬೆಂಗಳೂರಿನಲ್ಲೂ ಕವಿ ಕಾಳಿದಾಸ ಅವರ ಹೆಸರಿನಲ್ಲಿ ಉತ್ಸವ ನಡಸಬೇಕು, ಶೇಕ್ಸ್ ಪಿಯರ್ನಿಗೆ ಸರಿ ಸಮನಾದ ಕವಿ ಎಂದರೆ ಕಾಳಿದಾಸ ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಹೇಳಿದ್ದಾರೆ. 

ಕಾಳಿದಾಸ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಘದ ಆಶ್ರಯದಲ್ಲಿ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಪುರುಶೋತ್ತಮ ದಾಸ್ ಹೆಗ್ಗಡೆ ಅವರಿಂದ ವಿರಚಿತ ಕಾಳಿದಾಸನ ಮೇಘದೂತ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಮನುಷ್ಯ ಸಂಬಂಧ ಅದರಲ್ಲೂ ಗಂಡು ಹೆಣ್ಣಿನ ಪ್ರೇಮ ನಿವೇದನೆಯನ್ನು ಶೇಕ್ಸ್ ಪಿಯರ್ಗಿಂತ ರಸವತ್ತಾಗಿ ಕಟ್ಟಿಕೊಟ್ಟವರು ಕಾಳಿದಾಸ ಎಂದರು. 

ಇಂಥಹ ಮಹಾನ್ ಕವಿಯನ್ನು ಸಾಮಾನ್ಯ ಜನರ ಜನ ಮಾನಸದಲ್ಲಿ ಚಿರಸ್ಥಾಯಿಯಾಗುವಂತೆ ತಮ್ಮ ಅಭಿನಯದ ಮೂಲಕ ಕಟ್ಟಿಕೊಟ್ಟವರು ಮೇರು ನಟ ಡಾ. ರಾಜ್ಕುಮಾರ್.  ಕಾಳಿದಾಸರಂತಹ ಮಹಾನ್ ಕವಿಯ ಹೆಸರಿನಲ್ಲಿ ಪ್ರತಿ ವರ್ಷ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡಬೇಕಾಗಿರುವುದು ನಾಗರೀಕ ಸಮಾಜದ ಕರ್ತವ್ಯವಾಗಿದೆ ಎಂದರು.   

ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ಕೂಡ ಸಂಸ್ಕೃತದ ಮೇಘದೂತ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ಪುರುಶೋತ್ತಮ ದಾಸ್ ಹೆಗ್ಗಡೆ ಯವರ ಸಾಧನೆ ಶ್ಲಾಘನೀಯ.  ಕಾಳಿದಾಸನ ಮೇಘದೂತ ಕೃತಿಯಲ್ಲಿ  ಪ್ರೇಮ ನಿವೇದನೆ ಮಾಡಿಕೊಳ್ಳುವ ರೀತಿ ಕರ್ಣಮನೋಹರ. ಭಾರತೀಯ ಕವಿಗಳಿಗೆ ಮಾತ್ರ ಇದು ಸಾಧ್ಯ. ಭಾರತದ ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನೆಲೆಯಲ್ಲಿ ಮೂಲ ಕೃತಿಗೆ ಚ್ಯುತಿ ಬಾರದಂತೆ ಅದನ್ನು ಕನ್ನಡಕ್ಕೆ ಅನುವಾದಿಸಿರುವ ರೀತಿ ಅನನ್ಯ ಎಂದು ಹೇಳಿದರು. ಕಾಳಿದಾಸನ ಮೇಘದೂತ ಕೃತಿಯಲ್ಲಿ ಮೇಘವೇ ದೂತ, ನಳದಮಯಂತಿ ಕೃತಿಯಲ್ಲಿ ಹಂಸ ಪಕ್ಷಿಯೇ ದೂತ.  ಹಾಗೆಯೇ ರಾಮಾಯಣದಲ್ಲಿ ರಾಮನಿಗೆ ಹನುಮಂತನೇ ದೂತ ಎಂದು ವಿಶ್ವನಾಥ್ ವಿಶ್ಲೇಷಿಸಿದರು. 

ನಗರದ ಯವನಿಕ ಸಭಾಂಗಣದಲ್ಲಿ ನಡೆದ ಕೃತಿ ಬಿಡಗಡೆ ಕಾರ್ಯಕ್ರಮದಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠಾಧ್ಯಕ್ಷ  ಶಿವಾನಂದಪುರಿ ಮಹಾಸ್ವಾಮೀಜಿ, ಕಾಳಿದಾಸ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಘದ ಅಧ್ಯಕ್ಷರಾದ ಬಿ. ದೇವರಾಜ, ಕವಿ ಹಾಗೂ ಸಂಸ್ಕೃತಿ ಚಿಂತಕರಾದ  ಪ್ರೊ. ನಾರಾಯಣ ಘಟ್ಟ, ಆಚಾರ್ಯ ನಾಗರಾಜ್, ಬಿ. ಗುರುಪ್ರಸಾದ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.