ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್

ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ Setback to pro-Kannada resolution: MLA Seth came forward to present the resolution in the corporatio

ಬೆಳಗಾವಿ : ಬೆಳಗಾವಿ ಪಾಲಿಕೆಯಲ್ಲಿ ಕನ್ನಡಪರ ನಿರ್ಣಯ ಕೈಗೊಳ್ಳು ಹಿಂದೇಟು ಹಾಕುತ್ತಿರುವದಕ್ಕೆ ಈಗ ರಾಜಕೀಯ ತಿರುವು ಪಡೆಯುತ್ತಿದ್ದು, ಮುಂಬರು ಬೆಳಗಾವಿ ಮಹಾನಗರ ಪಾಲಿಕೆ ಸಭೆಯಲ್ಲಿ ಬೆಂಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಗಡಿ ವಿಷಯದಲ್ಲಿ ಮಹಾಜನ ವರದಿ ಅಂತಿಮ ಎಂಬ ನಿರ್ಣಯವನ್ನು ನಾನೇ ಮಂಡಿಸುತ್ತೇನೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ ಘೋಷಣೆ ಮಾಡಿದ್ದಾರೆ.

     ಸೋಮವಾರ ಸಂಜೆ ಸಚಿವ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಪಾಲಿಕೆಯಲ್ಲಿ ಕನ್ನಡಪರ ನಿರ್ಣಯ ಕೈಗೊಳ್ಳಲು ನಕಾರ ಮಾಡುತ್ತಿರುವ ಕುರಿತು ಗಂಭೀರ ಚರ್ಚೆ ನಡೆಯಿತು. ಈ ಸಭೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಕೆ. ರಾಮರಾಜನ್, ಪಾಲಿಕೆ ಆಯುಕ್ತ ಕಾರ್ತಿಕ ಎಂ. ಸೇರಿದಂತೆ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಇಂದಿನ ಈ ಸಭೆಯಲ್ಲಿ ಭಾಗವಹಿಸಿದ್ದರು.
       ಕಳೆದ ಪಾಲಿಕೆ ಸಭೆಯಲ್ಲಿ ಸರ್ಕಾರಿ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಅವರು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಒಂದು ಸಾಲಿನ ಠರಾವ್ ಮಂಡಿಸಲು ಪ್ರಸ್ತಾಪಿಸಿದ್ದರು. ಆದರೆ ಮಹಾಪೌರ ಅವರು, ವಿಷಯ ಸುಪ್ರೀಂ ಕೋರ್ಟಲ್ಲಿರುವ ಕಾರಣ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯುವ ರೂಲಿಂಗ್ ನೀಡಿದ್ದರು ಎಂದು ಪಾಲಿಕೆ ಆಯುಕ್ತರು ಸಭೆಯಲ್ಲಿ ವಿವರಿಸಿದರು.
     ಆದರೆ ಈ ವಿವರಣೆಗೆ ಸಭೆಯಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಸ್ಪಷ್ಟವಾಗಿ, ಇದನ್ನು ಸರ್ಕಾರಕ್ಕೆ ತಳ್ಳುವ ಅಗತ್ಯವಿಲ್ಲ. ಪಾಲಿಕೆ ಆಯುಕ್ತರೇ ತಮ್ಮ ಮಟ್ಟದಲ್ಲೇ ತೀರ್ಮಾನ ಮಾಡಬಹುದು ಎಂದು ಹೇಳುವ ಮೂಲಕ ಕನ್ನಡಪರ ನಿರ್ಣಯಕ್ಕೆ ಜೈ ಎಂದರು. ಈ ಎಲ್ಲ ಬೆಳವಣಿಗೆಗಳ ಕುರಿತು ಸರ್ಕಾರಕ್ಕೆ ಪತ್ರ ಕಳುಹಿಸಿರುವ ಬಗ್ಗೆ ಸಭೆಯಲ್ಲಿ ಪಾಲಿಕೆ ಆಯುಕ್ತರನ್ನು ಪ್ರಶ್ನಿಸಲಾಯಿತು. ಆದರೆ ಅದಕ್ಕೆ ಆಯುಕ್ತರಿಂದ ಸ್ಪಷ್ಟ ಉತ್ತರ ಬರಲಿಲ್ಲ. ಇದರಿಂದ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಕೊನೆಗೆ ಜಿಲ್ಲಾಧಿಕಾರಿಗಳು, ಈ ಬಗ್ಗೆ ನನಗೆ ಅಧಿಕೃತವಾಗಿ ಪತ್ರ ಬರೆದರೆ, ನಾನೇ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
     ಸಭೆಯಲ್ಲಿ, ಈ ಠರಾವ್ ಮಂಡನೆಯಾದರೆ ಎಂಇಎಸ್‌ನ ಇಬ್ಬರು ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರೂ ವಿರೋಧಿಸುವ ಸಾಧ್ಯತೆ ಇಲ್ಲ ಎಂಬ ಮಾತು ಕೇಳಿಬಂದಿತು. ಯಾರಾದರೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದರೆ, ಅವರ ನಿಲುವು ಸಾರ್ವಜನಿಕವಾಗಿ ಬಯಲಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ವಿರೋಧಿಸುವವರ ವಿರುದ್ಧ ಸರ್ಕಾರಕ್ಕೆ ವರದಿ ನೀಡಿ. ನಂತರ ಸರ್ಕಾರವೇ ಕ್ರಮ ತೆಗೆದುಕೊಳ್ಳಲಿ ಎಂದು ಕನ್ನಡ ಸಂಘಟನೆಗಳು ತಮ್ಮ ಅಭಿಪ್ರಾಯವನ್ನು ಸಭೆಯಲ್ಲಿ ತಿಳಿಸಿದರು.
ಇಂದಿನ ಈ ಸಭೆಯಲ್ಲಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಮಹಾದೇವ ತಳವಾರ, ಬಲರಾಮ ಮಾಸೇನಟ್ಟಿ, ಶ್ರೀನಿವಾಸ ತಾಳೂಕರ ಸೇರಿದಂತೆ ಅನೇಕ ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು.