ಉಗಾರ ಪುರಸಭೆಯಲ್ಲಿ ಸರಣಿ ಪ್ರತಿಭಟನೆ : ಶೌಚಾಲಯ ಕಟ್ಟಡಕ್ಕೆ ಆಗ್ರಹಿಸಿ ಭೀಮ ನಗರ ನಿವಾಸಿಗಳಿಂದ ಧರಣಿ

ಉಗಾರ ಪುರಸಭೆಯಲ್ಲಿ ಸರಣಿ ಪ್ರತಿಭಟನೆ :  ಶೌಚಾಲಯ ಕಟ್ಟಡಕ್ಕೆ ಆಗ್ರಹಿಸಿ ಭೀಮ ನಗರ ನಿವಾಸಿಗಳಿಂದ ಧರಣಿ  Series of protests at Ugar Town Municipality: Bhima Nagar residents stage a sit-in demanding a toile

ಕಾಗವಾಡ 07: ತಾಲೂಕಿನ ಉಗಾರ ಖುರ್ದ ಪುರಸಭೆ ವ್ಯಾಪ್ತಿಯ ವಾ.ನಂ. 9 ಮತ್ತು 10 ರಲ್ಲಿ ಹಲವಾರು ದಿನಗಳಿಂದ ಶೌಚಾಲಯವಿಲ್ಲದೆ ಮಹಿಳೆಯರು ಪರದಾಡುವ ಸ್ಥಿತಿ ಎದುರಾಗಿದೆ. ಹಲವು ಬಾರಿ ಪುರಸಭೆ ಅಧಿಕಾರಿಗಳಿಗೆ ಅಧ್ಯಕ್ಷರಿಗೆ ಹಾಗೂ ಸಂಭಂಧಿಸಿದ ಸದಸ್ಯರುಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬೇಸತ್ತ ಮಹಿಳೆಯರು ಶೌಚಾಲಯ ಕಟ್ಟಡ ಹಾಗೂ ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ಶುಕ್ರವಾರ ದಿ. 07 ರಂದು ಪುರಸಭೆ ಮುಂದೆ ಪ್ರತಿಭಟನೆ ನಡೆಸಿ, ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರೆ ಅವರಿಗೆ ಮನವಿ ಸಲ್ಲಿಸಿದ್ದಾರೆ.  

ಯುವ ಮುಖಂಡ ಗಣೇಶ ಹಿಮಕರ ಮಾತನಾಡಿ, ಕಳೆದ ಐದು ವರ್ಷದಿಂದ ಶೌಚಾಲಯಕ್ಕಾಗಿ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಯಾರೂ ಶೌಚಾಲಯದ ಬಗ್ಗೆ ತಲೆಕೆಡಿಸಿಕೊಳ್ಳದೇ ಕುಂಟುನೆಪ ಹೇಳುತ್ತಾ ಈ ಸಮಸ್ಯೆ ಹಾಗಯೇ ಉಳಿಯುವಂತೆ ಮಾಡಿದ್ದಾರೆ. ಇದರಿಂದ ಬೇಸತ್ತು ಇವತ್ತು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸಮಸ್ಯೆ ಇತ್ಯರ್ಥವಾಗುವವರೆಗೂ ಪ್ರತಿಭಟನೆ ಹಿಂದಕ್ಕೆ ತೆಗೆದುಕೊಳ್ಳುವದಿಲ್ಲ ಎಂದು ಹೇಳಿದರು.  

ಸರಣಿ ಪ್ರತಿಭಟನೆ: ನಿನ್ನೆಯಷ್ಟೇ ಉಗಾರ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಿ, ಉದ್ಯೋಗ ಒದಗಿಸುವಂತೆ ಪರಿಸರವಾದಿ ಹೋರಾಟಗಾರರು ಪ್ರತಿಭಟಿಸುವ ಮೂಲಕ ಮನವಿ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೇ ಇವತ್ತು ಶೌಚಾಲಯ ನಿರ್ಮಿಸುವಂತೆ ಪ್ರತಿಭಟನೆ ಮಾಡಲಾಗಿದೆ. ಇದಕ್ಕಿಂತ ಮೊದಲು ಯುವಕನೊರ್ವ ಡಿಜಿಟಲ್ ಉತಾರ ನೀಡಲು ಹಿಂದೇಟು ಹಾಕಿದ್ದರಿಂದ ಪುರಸಭೆ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಘಟನೆ ಸಂಭವಿಸಿತ್ತು. ಅದೇ ದಿನ ಮೂಲ ಸೌಕರ್ಯಕ್ಕೆ ಆಗ್ರಹಿಸಿ, ಜನಶಕ್ತಿ ಸೇವಾ ಸಂಘಟನೆಯಿಂದ ಪ್ರತಿಭಟನೆ ಮಾಡಲಾಗಿತ್ತು. ಇದರಿಂದ ಮೇಲ್ನೋಟಕ್ಕೆ ಉಗಾರ ಪುರಸಭೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತಿಳಿಯಬಹುದಾಗಿದೆ.  

ಅಧಿಕಾರಿಗಳ ಭೇಟಿ: ಈ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕೌಲಾಪುರ ಪ್ರತಿಭಟನಾಕಾರರ ಸಮಸ್ಯೆಯನ್ನು ಆಲಿಸಿ, ಪುರಸಭೆಯ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೀಮನಗರಕ್ಕೆ ಭೇಟಿ ನೀಡಿ, ಶೀಘ್ರದಲ್ಲೇ ಎರಡು ಶೌಚಾಲಯ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. ಇನ್ನು ಸ್ಥಳಕ್ಕೆ ಆಗಮಿಸಿ ಶೌಚಾಲಯದ ಸಮಸ್ಯೆ ಬಗ್ಗೆ ಶೀಘ್ರವಾಗಿ ಆದೇಶ ನೀಡಿದ ಪುರಸಭೆ ಅಧಿಕಾರಿ ಹಾಗೂ ಅಧ್ಯಕ್ಷ, ಸದಸ್ಯರುಗಳಿಗೆ ಧನ್ಯವಾದ ತಿಳಿಸಿದ್ದಾರೆ.  

ಪುರಸಭೆಯ ಇಂಜಿನಿಯರಗಳಾದ ಡಿ.ಬಿ. ಪಠಾಣ, ಗುರು ಹಿರೇಮಠ, ಜನಸೇವಕ ವಿನಾಯಕ ಕಾಂಬಳೆ, ಸುಭಾಷ ಖುರಾಡೆ, ವಿಜಯ ಅಸೂದೆ, ಗಣೇಶ ಹಿಮಕರ್, ರೋಹಿತ ಬಸನಾಯಿಕ, ವಿಶಾಲ ಬಸನಾಯಿಕ, ಸಚಿನ ಕಾಂಬಳೆ, ರವಿ ಕಾಂಬಳೆ, ಆಕಾಶ ಕಾಂಬಳೆ, ಸಂದೀಪ ಲಾಂಡಗೆ, ಶಿವರಾಜ ಕಾಂಬಳೆ, ಪರಸು ಕಾಂಬಳೆ, ಅಕ್ಷಯ ಬಸನಾಯಿಕ, ಶಕುಂತಲಾ ಕಾಂಬಳೆ, ಮಂಗಲ ಹಿಮಕರ್, ಸಂಗಮ ಕಾಂಬಳೆ, ನಿರ್ಮಾಲ ಡಾಲೆ, ನಮೋ ಬುದ್ದಾಯ ಯುವಕ ಸಂಘ, ಭೀಮ ಆರ್ಮಿ ಸಂಘಟನೆ ಯುವಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.