ಆತ್ಮರಕ್ಷಣೆ ದೈಹಿಕ ಶಕ್ತಿಯ ಪ್ರದರ್ಶನವಲ್ಲ, ಅದು ಆತ್ಮವಿಶ್ವಾಸದ ಸಂಕೇತ : ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ

ಆತ್ಮರಕ್ಷಣೆ ದೈಹಿಕ ಶಕ್ತಿಯ ಪ್ರದರ್ಶನವಲ್ಲ, ಅದು ಆತ್ಮವಿಶ್ವಾಸದ ಸಂಕೇತ : ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ  Self-defense is not a display of physical strength, it is a sign of confidence: Deputy Commissioner


ವಿಜಯನಗರ (ಹೊಸಪೇಟೆ)  05:  ಮಹಿಳೆ ಅಬಲೆಯಲ್ಲ ಸಬಲೆ. ಆತ್ಮರಕ್ಷಣೆ ಎಂಬುದು ಕೇವಲ ದೈಹಿಕ ಶಕ್ತಿಯ ಪ್ರದರ್ಶನವಲ್ಲ, ಅದು ಆತ್ಮವಿಶ್ವಾಸದ ಸಂಕೇತ. ಪ್ರತಿಯೊಬ್ಬ ಹೆಣ್ಣು ಸಂಕಷ್ಟದ ಸಮಯದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಕೌಶಲ್ಯ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ತಿಳಿಸಿದರು.  

 ನಗರದ ವಿಜಯನಗರ ಕಾಲೇಜಿನಲ್ಲಿ ವಿಜಯನಗರ ಕಾಲೇಜ್, ಮಹಿಳಾ ಸಬಲೀಕರಣ ಕೋಶ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಹಿಳೆಯರಿಗೆ ಸ್ವಯಂ ರಕ್ಷಣೆ ಕುರಿತ ಏರಿ​‍್ಡಸಲಾಗಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.  

 ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ವೈದ್ಯಕೀಯ, ಕಲೆ, ವಾಸ್ತುಶಿಲ್ಪ, ಉದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅದಷ್ಟೇ ಅಲ್ಲದೇ ಬಾಹ್ಯಾಕಾಶ ಸಂಶೋಧನೆಯಂತಹ ಉನ್ನತ ಕ್ಷೇತ್ರಗಳಲ್ಲೂ ಮಹಿಳೆಯರು ಮುನ್ನುಗ್ಗುತ್ತಿರುವುದು ಹೆಮ್ಮೆಯ ಸಂಗತಿ. ಇಷ್ಟೆಲ್ಲಾ ಸಬಲೀಕರಣಗೊಳ್ಳುತ್ತಿದ್ದರು ಇಂದಿಗೂ ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಬಲರಾಗಬೇಕಿದೆ. ಈ ನಿಟ್ಟಿನಲ್ಲಿ ಪೋಷಕರು ಸಹ ಕೇವಲ ಹೆಣ್ಣು ಮಕ್ಕಳಿಗೆ ಸುರಕ್ಷಿತವಾಗಿರು ಎಂದು ಹೇಳುವುದಕ್ಕಿಂತ ಹೆಚ್ಚಾಗಿ, ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳನ್ನು, ಗುರು ಹಿರಿಯರನ್ನು ಗೌರವಿಸುವ ಉತ್ತಮ ಸಂಸ್ಕಾರ ಕಲಿಸಬೇಕು. ಆಗದಾಗ ಸಮಾಜದಲ್ಲಿ ನಡೆಯುವ ಶೇ. 99. ರಷ್ಟು ಕೃತ್ಯಗಳನ್ನು ತಡೆಯಬಹುದು.  

 ಆದರೆ ಇಂದಿನ ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶದಲ್ಲಿ ಮಹಿಳೆಯರ ಸುರಕ್ಷತೆ ಮುಖ್ಯ. ಎಲ್ಲಾ ಸಂದರ್ಭದಲ್ಲೂ ಕೇವಲ ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯಿಂದ ಮಾತ್ರ ಸುರಕ್ಷತೆ ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯೂ ಸಮಾಜದಲ್ಲಿ ಉಂಟಾಗುವ ಸಂಕಷ್ಟದ ಸಂದರ್ಭಗಳನ್ನು ಎದುರಿಸಲು ಆತ್ಮರಕ್ಷಣಾ ತಂತ್ರಗಳನ್ನು ಕಲಿಯುವುದು ಅನಿವಾರ್ಯತೆ ಎಂದು ತಿಳಿಸಿದ ಅವರು, ಮಹಿಳಾ ಹಕ್ಕುಗಳು ಮತ್ತು ತುರ್ತು ಸಂದರ್ಭದಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.  

 ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಸ್‌. ಜಾಹ್ನವಿ ಮಾತನಾಡಿ, ಮಹಿಳಾ ಸಬಲೀಕರಣ ಎಂದರೆ ಸ್ವೇಚ್ಛಾಚಾರವಲ್ಲ. ಬದಲಿಗೆ ಸರಿ ತಪ್ಪು ವಿಮರ್ಶಿಸಿ ಯಾವುದು ಸರಿ ಇದೆ ಎಂಬುದನ್ನರಿತು ಮಾಡುವುದು ತಮ್ಮ ಜವಾಬ್ದಾರಿ. ವಿದ್ಯಾರ್ಥಿಗಳು ಪೋಷಕರು ನೀಡಿದ ಶಿಕ್ಷಣ ಮತ್ತು ಅವಕಾಶಗಳನ್ನು ಬಳಸಿಕೊಂಡು ಸಮಾಜದಲ್ಲಿ ಘನತೆಯ ವ್ಯಕ್ತಿಗಳಾಗಿ ಬಾಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.  

 ಇಂದಿನ ಜಗತ್ತಿನಲ್ಲಿ ಮಾಹಿತಿಯ ಕೊರತೆಯಿಲ್ಲ, ಆದರೆ ಆಕರ್ಷಕವಾಗಿರುವುದಕ್ಕೆ ಮಾರುಹೋಗದೆ ಜೀವನಕ್ಕೆ ಪೂರಕವಾದುದನ್ನ ಆಯ್ದುಕೊಳ್ಳಬೇಕು. ದೈಹಿಕ ದೌರ್ಜನ್ಯದ ವಿರುದ್ಧ ಆತ್ಮರಕ್ಷಣೆ ಕಲಿಯುವುದು ಎಷ್ಟು ಮುಖ್ಯವೋ, ಸಾಮಾಜಿಕ ಮಾಧ್ಯಮಗಳ ಕೆಟ್ಟ ಪ್ರಭಾವದಿಂದ ಉಂಟಾಗುವ ಮಾನಸಿಕ ದೌರ್ಜನ್ಯದಿಂದ ರಕ್ಷಿಸಿಕೊಳ್ಳುವುದು ಅಷ್ಟೇ ಮುಖ್ಯ ಎಂದರು.  

 ಮಹಿಳಾ ಸಬಲೀಕರಣ ಕೋಶ ಸಂಯೋಜಕಿ ಡಾ.ಸುಷ್ಮಾ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಹಿಂದೆ ಮಹಿಳೆ ಬಾಲ್ಯದಲ್ಲಿ ತಂದೆ, ಯೌವನದಲ್ಲಿ ಪತಿ ಹಾಗೂ ವೃದ್ಧಾಪ್ಯದಲ್ಲಿ ಮಕ್ಕಳ ರಕ್ಷಣೆಯಲ್ಲಿ ಇರಬೇಕಿತ್ತು. ಆದರೆ ಇಂದು ಮಹಿಳೆ ತಾನೇ ಸಬಲಳಾಗಿ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಎಲ್ಲರನ್ನೂ ರಕ್ಷಿಸುವ ಹಂತಕ್ಕೆ ತಲುಪಿದ್ದಾಳೆ. ಅದರಂತೆ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಅವರಂತಹ ಸಾಧಕಿಯರು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.  

 ಅದೇ ರೀತಿ ಒಂದು ಕಡೆ ಸಾಧಕಿಯರ ಪಟ್ಟಿ ಬೆಳೆಯುತ್ತಿದ್ದರೆ, ಮತ್ತೊಂದೆಡೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಸಹ ಏರಿಕೆಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು. ನ್ಯಾಷನಲ್ ಕ್ರೈಂ ರೆಕಾರ್ಡ್ಸ ಬ್ಯೂರೋ  (ಓಅಖಃ) ವರದಿಯ ಪ್ರಕಾರ ಶೇ. 40ರಷ್ಟು ಮಹಿಳೆಯರು ಇಂದಿಗೂ ಮನೆ ಮತ್ತು ಕೆಲಸದ ಸ್ಥಳಗಳಲ್ಲಿ ಅಸುರಕ್ಷಿತ ಭಾವನೆ ಹೊಂದಿದ್ದಾರೆ. ಶೇ.90.2ರಷ್ಟು ಅಪಹರಣ ಪ್ರಕರಣಗಳು, ಶೇ.31ರಷ್ಟು ಪತಿಯಿಂದಲೇ ಕಿರುಕುಳ ಹಾಗೂ ಶೇ.18ರಷ್ಟು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ.  

ಕೇವಲ ಕೆಲವು ಮಹಿಳೆಯರು ಸಾಧನೆ ಮಾಡುವುದು ಸಬಲೀಕರಣದ ಮಾನದಂಡವಲ್ಲ. ಸಾಮಾನ್ಯ ಮಹಿಳೆಯ ಮನೆ, ಮನಸ್ಸು ಮತ್ತು ಜೀವನ ಸಬಲವಾದಾಗ ಮಾತ್ರ ಸಬಲೀಕರಣಕ್ಕೆ ನಿಜವಾದ ಅರ್ಥ ಸಿಗಲಿದೆ. ಮಹಿಳಾ ಸಬಲೀಕರಣವು ಕೇವಲ ಮಹಿಳೆಯರಿಗೆ ಸೀಮಿತವಾದ ವಿಷಯವಲ್ಲ. ಇದು ಸ್ತ್ರೀ ಮತ್ತು ಪುರುಷರಿಬ್ಬರ ಸಮಾನ ಪ್ರಯತ್ನದಿಂದ ಸಾಧ್ಯ. ಸಮಾಜವು ಒಂದು ಹಕ್ಕಿಯಿದ್ದಂತೆ, ಅದಕ್ಕೆ ಸ್ತ್ರೀ ಮತ್ತು ಪುರುಷ ಎಂಬ ಎರಡು ರೆಕ್ಕೆಗಳು ಬಲವಾಗಿದ್ದಾಗ ಮಾತ್ರ ಸಮಾಜ ಪ್ರಗತಿ ಹೊಂದಲು ಸಾಧ್ಯ ಎಂದರು.  

 ಈ ವೇಳೆ ವಿಜಯನಗರ ಮಹಾವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಎನ್‌. ಮಲ್ಲಿಕಾರ್ಜುನ ಮೆಟ್ರಿ, ಪ್ರಾಂಶುಪಾಲರಾದ ಮಹಾಂತೇಶ್ ಎನ್‌.ಆರಾಧ್ಯಮಠ, ಕಿರ್ಲೋಸ್ಕರ್ ಎವಿ ಕ್ಲಬ್ ನ ಜಂಟಿ ಕಾರ್ಯದರ್ಶಿ ಭಾಗ್ಯ, ವಕೀಲೆ ಅನಿತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.