ಹಳೆಯ ತಳಿಗಳ ಸಂರಕ್ಷಣೆಗೆ ಬೀಜ ಸಂರಕ್ಷಣೆ ಅಗತ್ಯ: ಡಾ.ಆರ್‌.ಆರ್‌. ಹಂಚಿನಾಳ

ಹಳೆಯ ತಳಿಗಳ ಸಂರಕ್ಷಣೆಗೆ ಬೀಜ ಸಂರಕ್ಷಣೆ ಅಗತ್ಯ: ಡಾ.ಆರ್‌.ಆರ್‌. ಹಂಚಿನಾಳ  Seed conservation is essential for preserving traditional varieties: Dr. R.R. Hanchinal

ಲೋಕದರ್ಶನ ವರದಿ 

ಧಾರವಾಡ ಸೆ.25: ಕೃಷಿಯಲ್ಲಿ ತಲೆತಲಾಂತರದಿಂದ ಬಳಕೆಯಲ್ಲಿರುವ ಹಳೆಯ ತಳಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ. ಈ ನಿಟ್ಟಿನಲ್ಲಿ ಹಳೆಯ ತಳಿಗಳ ಬೀಜಗಳನ್ನು ಸಂರಕ್ಷಿಸುವುದು ಅತ್ಯಂತ ಅಗತ್ಯ ಎಂದು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಆರ್‌.ಆರ್‌. ಹಂಚಿನಾಳ ಹೇಳಿದರು.  ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಕೃಷಿ ಮೇಳ-2026 ಅಂಗವಾಗಿ ಆಯೋಜಿಸಿದ್ದ ಬೀಜ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ನಮ್ಮ ಪೂರ್ವಜರ ಪ್ರಯತ್ನದಿಂದ ಹಳೆಯ ತಳಿಗಳು ಇಂದಿಗೂ ಬೆಳೆಯುತ್ತಿವೆ. ಇವು ಭೂಮಿಯ ಲವಣಾಂಶವನ್ನು ಹೀರಿಕೊಂಡು ಉತ್ತಮವಾಗಿ ಬೆಳೆಯುತ್ತವೆ. ಯಾವುದೇ ರೀತಿಯ ರಾಸಾಯನಿಕ ಗೊಬ್ಬರ ಬಳಸದೇ ಬೆಳೆಯಬಹುದಾದ ಸುಮಾರು ಎರಡು ಲಕ್ಷಕ್ಕೂ ಅಧಿಕ ಭತ್ತದ ತಳಿಗಳು ದೇಶದಲ್ಲಿವೆ. ಬೀಜದ ಮಹತ್ವವನ್ನು ರೈತರಿಗೆ ತಿಳಿಸಿಕೊಡುವುದು ಬಹಳ ಮುಖ್ಯ. ಫಲವತ್ತಾದ ಭೂಮಿಯಲ್ಲಿ ಉತ್ತಮ ಗುಣಮಟ್ಟದ ಬೀಜ ಬಿತ್ತಿದರೆ ಉತ್ತಮ ಇಳುವರಿ ಪಡೆಯಬಹುದು ಎಂದರು.  

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್‌.ಬಿ. ಪ್ರಕಾಶ ಮಾತನಾಡಿ, ಗುಣಮಟ್ಟದ ಬೀಜದಿಂದ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ. ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರ ಅಗತ್ಯ. ಕೃಷಿ ವಿಶ್ವವಿದ್ಯಾಲಯದಲ್ಲಿ ಬೀಜ ಘಟಕ ಸ್ಥಾಪನೆಯಾಗಿ 25 ವರ್ಷಗಳು ಕಳೆದಿದ್ದು, ರೈತರ ಸಹಭಾಗಿತ್ವದಲ್ಲಿ ಬೀಜ ಉತ್ಪಾದನೆ ಮಾಡಲಾಗುತ್ತಿದೆ. ಬೀಜ ಘಟಕವು ಐಸಿಎಆರ್ನಿಂದ 2013 ಹಾಗೂ 2020ರಲ್ಲಿ ಪ್ರಶಸ್ತಿ ಪಡೆದಿದೆ. ರೈತರ ಬೀಜಗಳನ್ನು ಸಂರಕ್ಷಿಸುವುದು ಅತ್ಯಂತ ಮುಖ್ಯ ಎಂದರು.  

ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ವೀರನಗೌಡ ಪೊಲೀಸಗೌಡರ, ಪಾರ್ವತಿ ಕುಲ್ಕರ್ಣಿ, ರವಿಕುಮಾರ ಮಾಳಿಗೇರ, ಬಸವರಾಜ ಕುಂದಗೋಳಮಠ, ಮಾಲತೇಶ ಶ್ಯಾಗೋಟಿ, ಜಯಶ್ರೀ ಶಿಂತ್ರಿ, ಶಿಕ್ಷಣ ನಿರ್ದೇಶಕ ಡಾ.ಎಂ.ವಿ. ಮಂಜುನಾಥ, ವಿಸ್ತರಣಾ ನಿರ್ದೇಶಕಿ ಡಾ.ಮಂಜುಳಾ ಎನ್‌. ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.