ದ್ವಿತೀಯ ಪಿಯುಸಿ: ತುಪ್ಪದ ಕುಟುಂಬದ ಹೆಣ್ಣುಮಕ್ಕಳಿಬ್ಬರ ಸಾಧನೆ

ದ್ವಿತೀಯ ಪಿಯುಸಿ: ತುಪ್ಪದ ಕುಟುಂಬದ ಹೆಣ್ಣುಮಕ್ಕಳಿಬ್ಬರ ಸಾಧನೆ  Second PUC: Achievement of two daughters from a ghee family

ರವಿಕುಮಾರ ತುಪ್ಪದ ಕೊಲ್ಹಾರ   

ಕೋಲ್ಹಾರ 11: ಸಾಧನೆಗೆ ಬಡತನವಾಗಲಿ ಅಥವಾ ಭೌಗೋಳಿಕ ಹಿನ್ನೆಲೆಯಾಗಲಿ ಅಡ್ಡಿಯಾಗದು ಎಂಬುದನ್ನು ಕೊಲ್ಹಾರ ಭಾಗದ ತುಪ್ಪದ ಮನೆತನದ ಇಬ್ಬರು ಹೆಣ್ಣುಮಕ್ಕಳು ಸಾಬೀತುಪಡಿಸಿದ್ದಾರೆ. ಒಂದೇ ಕುಟುಂಬದ ಕುಡಿಗಳಾದ ಸ್ಫೂರ್ತಿ ಪರಸುರಾಮ ತುಪ್ಪದ ಹಾಗೂ ತೇಜಶ್ವಿನಿ ಈರಣ್ಣ ತುಪ್ಪದ ಇಬ್ಬರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸುವ ಮೂಲಕ ವಿಜಯಪುರ ಜಿಲ್ಲೆಯ ಗಮನ ಸೆಳೆದಿದ್ದಾರೆ.  

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಗ್ರಾಮದ ನಿವಾಸಿ ಪರಸುರಾಮ ತುಪ್ಪದ ಅವರ ಪುತ್ರಿ, ಸ್ಫೂರ್ತಿ ಮಂಗಳೂರಿನ ಪ್ರತಿಷ್ಠಿತ ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ವಿದ್ಯಾರ್ಥಿನಿ ಕಠಿಣವೆನಿಸುವ ವಿಜ್ಞಾನ ವಿಭಾಗದಲ್ಲಿ ಅಹೋರಾತ್ರಿ ಅಭ್ಯಾಸ ಮಾಡಿ 600 ಅಂಕಗಳಿಗೆ 574 ಅಂಕಗಳನ್ನು (ಶೇ. 95.67) ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವ ಗುರಿ ಹೊಂದಿರುವ ಸ್ಫೂರ್ತಿ, ತನ್ನ ಸಾಧನೆಯನ್ನು ಪೋಷಕರು ಹಾಗೂ ಗುರುಗಳಿಗೆ ಅರ​‍್ಿಸಿದ್ದಾರೆ.  

ಇನ್ನೊಂದೆಡೆ ವಿಜಯಪುರ ಜಿಲ್ಲೆಯ ಕೊಲ್ಹಾರ ನಿವಾಸಿ ಈರಣ್ಣ ತುಪ್ಪದ ಅವರ ಪುತ್ರಿ, ತೇಜಶ್ವಿನಿ ಬೀಳಗಿಯ ಸ್ವಾಮಿ ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ ಬರೋಬ್ಬರಿ 560 ಅಂಕಗಳನ್ನು (ಶೇ.93.33) ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.ವಿದ್ಯಾರ್ಥಿನಿಯು ಗ್ರಾಮೀಣ ಭಾಗದ ಕಾಲೇಜಿನಲ್ಲಿ ಓದಿದರೂ ಪ್ರತಿಭೆಗೆ ಮಿತಿಯಿಲ್ಲ ಎಂಬುದನ್ನು ತೇಜಶ್ವಿನಿ ತೋರಿಸಿಕೊಟ್ಟಿದ್ದಾರೆ.  

ಕುಟುಂಬದಲ್ಲಿ ಹಬ್ಬದ ವಾತಾವರಣ: ಒಂದೇ ಮನೆತನದ ಇಬ್ಬರು ಹೆಣ್ಣುಮಕ್ಕಳು ಬೇರೆ ಬೇರೆ ನಗರಗಳಲ್ಲಿ, ಬೇರೆ ಬೇರೆ ವಿಷಯಗಳಲ್ಲಿ ಓದಿದರೂ, ಅಂತಿಮ ಫಲಿತಾಂಶದಲ್ಲಿ ಮಾತ್ರ ಇಬ್ಬರೂ ಸಾಧನೆಯ ಶಿಖರ ಏರಿದ್ದಾರೆ. ಮನೆಯ ಮಕ್ಕಳು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿರುವುದು ನಮ್ಮ ಇಡೀ ಕುಟುಂಬಕ್ಕೆ ಹೆಮ್ಮೆಯ ವಿಷಯ ಎಂದು ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.  ಈ ಸಹೋದರಿಯರ ಸಾಧನೆಯು ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕೆ ದೊಡ್ಡ ಪ್ರೇರಣೆಯಾಗಿದೆ. ವಿಜ್ಞಾನ ಮತ್ತು ವಾಣಿಜ್ಯ ಎರಡೂ ಕ್ಷೇತ್ರಗಳಲ್ಲಿ ತುಪ್ಪದ ಮನೆತನದ ಹೆಸರನ್ನು ಈ ಇಬ್ಬರು ಸಾಧಕಿಯರು ಅಜರಾಮರಗೊಳಿಸಿದ್ದಾರೆ.