ಶಿಲ್ಪಕಲೆ ಭಾರತೀಯ ಪರಂಪರೆಯ ಹೆಮ್ಮೆಯ ಸಂಕೇತ: ಡಾ. ಶಿವಾನಂದ ಬಂಟನೂರು
Sculpture is a proud symbol of Indian heritage: Dr. Shivananda Bantanur
ಲೋಕದರ್ಶನ ವರದಿ
ಕಲಬುರ್ಗಿ 27: ಕರ್ನಾಟಕದ ಶಿಲ್ಪಕಲೆ ಭಾರತೀಯ ಸಾಂಪ್ರದಾಯಿಕ ಕಲೆಗೆ ಅಮೂಲ್ಯ ಕೊಡುಗೆ ನೀಡಿದ್ದು, ಹಂಪಿ, ಆನೆಗುಂಡಿ, ಸನ್ನತಿ, ಕಾಳಗಿ ಹಾಗೂ ಜಲಸಂಗವಿ ಮೊದಲಾದ ಪ್ರದೇಶಗಳ ಶಿಲ್ಪಗಳು ವಿಶ್ವಪ್ರಸಿದ್ಧವಾಗಿವೆ ಎಂದು ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಬಂಟನೂರು ಹೇಳಿದರು.
ನಗರದ ದಿ ಆರ್ಟ್ ಇಂಟಿಗ್ರೇಷನ್ ಚಿತ್ರಕಲಾ ಮಹಾವಿದ್ಯಾಲಯದ ಅಂಕುರ ಕಲಾ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ್ದ ಶಿಲ್ಪಕಲಾವಿದ ಹಣಮಂತ ಬಾಡದ ಅವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶತಮಾನಗಳಿಂದ ಈ ಭಾಗದ ಕಲಾವಿದರು ಶಿಲ್ಪ ಮತ್ತು ಚಿತ್ರಕಲೆಯ ಪರಂಪರೆಯನ್ನು ಸಮೃದ್ಧಗೊಳಿಸಿದ್ದಾರೆ. ಧನಂಜಯ ಶಿಲ್ಪಿ, ನಾಡೋಜ ನಾಗಣ್ಣ ಬಡಿಗೇರ, ಶಾಂತಲಿಂಗಪ್ಪ ಪಾಟೀಲ, ಶಂಕರರಾವ್ ಆಳಂದಕರ, ಎಸ್.ಎಂ. ಪಂಡಿತ್ ಸೇರಿದಂತೆ ಅನೇಕ ಹಿರಿಯ ಕಲಾವಿದರು ದೃಶ್ಯಕಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಇಂದಿನ ಯುವ ಕಲಾವಿದರು ಸಹ ಆ ಪರಂಪರೆಯನ್ನು ಮುಂದುವರಿಸುತ್ತಿದ್ದು, ಹಣಮಂತ ಬಾಡದ ಅವರ ಸಮಕಾಲೀನ ಶಿಲ್ಪಕೃತಿಗಳು ವಿಶೇಷ ಗಮನ ಸೆಳೆಯುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಉತ್ತರದೇವಿ ಮಾತನಾಡಿ, ಕಲಾವಿದರು ಸೀಮಿತ ಆರ್ಥಿಕ ನೆರವಿನ ನಡುವೆಯೂ ಸ್ವಂತ ವೆಚ್ಚದಲ್ಲಿ ಕಲಾ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಹೆಚ್ಚಿನ ಪ್ರೋತ್ಸಾಹ ಹಾಗೂ ನೆರವು ನೀಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಿ ಆರ್ಟ್ ಇಂಟಿಗ್ರೇಷನ್ ಚಿತ್ರಕಲಾ ಮಹಾವಿದ್ಯಾಲಯದ ಎಂ.ಎಚ್. ಬೆಳಮಗಿಯವರು ಮಾತನಾಡಿ, ಕಲಾವಿದರು ಸ್ವತಂತ್ರ ಚಿಂತನೆಯೊಂದಿಗೆ ಕಲಾಕೃತಿಗಳನ್ನು ರಚಿಸಬೇಕು. ವಿದ್ಯಾರ್ಥಿಗಳು ಹಿರಿಯ ಕಲಾವಿದರ ಅನುಭವಗಳನ್ನು ಅಳವಡಿಸಿಕೊಂಡು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಆರಂಭದಲ್ಲಿ ಶಿಲ್ಪಕಲಾವಿದ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ಹಣಮಂತ ಬಾಡದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿ.ಎನ್. ಪಾಟೀಲ ನಿರೂಪಣೆ ನಡೆಸಿದ್ದು, ಬಸವರಾಜ ಕಾಮಾಜಿ ವಂದಿಸಿದರು. ವಿವಿಧ ಕಲಾವಿದರು, ಕಲಾಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 