ಅರ್ಹ ದಂಪತಿಗೆ ಗರ್ಭನಿರೋಧಕ ಇಂಪ್ಲಾಂಟ್ ಅಳವಡಿಕೆ ಯೋಜನೆ
Scheme for the insertion of contraceptive implants for eligible couples
ಲೋಕದರ್ಶನ ವರದಿ
ಬಳ್ಳಾರಿ, ಸೆ.24: ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ದಂಪತಿಗಳ ನಡುವೆ ಅಂತರ ಕಾಯ್ದುಕೊಳ್ಳಲು ಸರ್ಕಾರ ಹೊಸ ವಿಧಾನಗಳನ್ನು ಜಾರಿಗೆ ತರುತ್ತಿದ್ದು, ಈಗಾಗಲೇ ಚುಚ್ಚುಮದ್ದು, ಪಿಪಿಐಯುಸಿಡಿ, ಛಾಯಾ ಮಾತ್ರೆ ಹಾಗೂ ನಿರೋಧ್ ಸೇವೆಗಳು ಲಭ್ಯವಿವೆ. ಇದೀಗ ಹೊಸದಾಗಿ ಚರ್ಮದಡಿಯ ಗರ್ಭನಿರೋಧಕ ಇಂಪ್ಲಾಂಟ್ ಅಳವಡಿಸುವ ಯೋಜನೆಯನ್ನೂ ಜಾರಿಗೊಳಿಸಲಾಗುತ್ತಿದೆ ಎಂದು ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಕುಟುಂಬ ಕಲ್ಯಾಣ ಕಾರ್ಯಕ್ರಮ ಉಪನಿರ್ದೇಶಕಿ ಡಾ. ಚಂದ್ರಿಕಾ ಬಿ.ಆರ್. ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ವಿಭಾಗ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗರ್ಭನಿರೋಧಕ ಇಂಪ್ಲಾಂಟ್ ಅಳವಡಿಕೆ ಕುರಿತು ಪುನರ್ಮನನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೂರು ವರ್ಷಗಳವರೆಗೆ ಪರಿಣಾಮ
ಬೆರಳಕಡ್ಡಿ ಗಾತ್ರದ ಸಣ್ಣ, ಬಾಗಿಕೊಳ್ಳುವ ರಾಡ್ ಅನ್ನು ತರಬೇತಿ ಪಡೆದ ತಜ್ಞ ವೈದ್ಯರು ಮಹಿಳೆಯ ಮೇಲ್ತೋಳಿನ ಚರ್ಮದ ಕೆಳಗೆ ಅಳವಡಿಸುತ್ತಾರೆ. ಒಮ್ಮೆ ಅಳವಡಿಸಿದ ಬಳಿಕ ಇದು ಗರ್ಭಧಾರಣೆಯಿಂದ ಸುಮಾರು ಮೂರು ವರ್ಷಗಳವರೆಗೆ ರಕ್ಷಣೆ ನೀಡುತ್ತದೆ ಎಂದು ಅವರು ವಿವರಿಸಿದರು.
ಈ ಇಂಪ್ಲಾಂಟ್ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವುದನ್ನು ತಡೆಯುವುದರ ಜೊತೆಗೆ ಗರ್ಭಕಂಠದ ಲೋಳೆಯ ದಪ್ಪವನ್ನು ಹೆಚ್ಚಿಸಿ ವೀರ್ಯಾಣುಗಳು ಅಂಡಾಣುವನ್ನು ತಲುಪದಂತೆ ಮಾಡುತ್ತದೆ. ಅಲ್ಲದೆ ಗರ್ಭಕೋಶದ ಒಳಪದರವನ್ನು ತೆಳುವಾಗಿಸುವ ಮೂಲಕ ಫಲವತ್ತಾದ ಅಂಡಾಣು ಅಳವಡಿಕೆಯನ್ನು ತಡೆಯುತ್ತದೆ ಎಂದು ತಿಳಿಸಿದರು.
ಇದು ಹಾರ್ಮೋನ್ ಆಧಾರಿತ, ಪರಿಣಾಮಕಾರಿ ಹಾಗೂ ಅಗತ್ಯವಿದ್ದಲ್ಲಿ ಹಿಂತೆಗೆದುಕೊಳ್ಳಬಹುದಾದ ಗರ್ಭನಿರೋಧಕ ವಿಧಾನವಾಗಿದೆ. ಅರ್ಹ ದಂಪತಿಗಳಿಗೆ ಈ ಸೌಲಭ್ಯ ಒದಗಿಸುವುದರಿಂದ ಮಹಿಳೆಯರ ಆರೋಗ್ಯ ರಕ್ಷಣೆಯೊಂದಿಗೆ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿಯಾಗಬಹುದು ಎಂದು ಡಾ. ಚಂದ್ರಿಕಾ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಲಕಾನಂದ ಡಿ. ಮಳಗಿ ಮಾತನಾಡಿ, ಇಂಪ್ಲಾಂಟ್ ಅಳವಡಿಕೆ ಕುರಿತು ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ತಮ್ಮ ಕಾರ್ಯಕ್ಷೇತ್ರಗಳಲ್ಲಿ ಅರ್ಹ ದಂಪತಿಗಳಿಗೆ ಮೊದಲು ಸೂಕ್ತ ಅರಿವು ಮೂಡಿಸಿ, ನಂತರ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಕರೆ ನೀಡಿದರು.
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ 