ಬಡ ಕ್ಷೌರಿಕರ ನೆರವಿಗೆ ಸವಿತಾ ಸಮಾಜದ ನೆರವು – ಡಾ. ಅಶ್ವಥ್‌ ನಾರಾಯಣ್ ಚಾಲನೆ

ಬೆಂಗಳೂರು ಏ 12, ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಣೆಯಾಗಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಕ್ಷೌರಿಕ ಕುಟುಂಬಗಳಿಗೆ ನೆರವಾಗಲು ರಾಜ್ಯ ಸವಿತಾ ಸಮಾಜ ಮುಂದಾಗಿದೆ. ಇದಕ್ಕಾಗಿ ಸವಿತಾ ಜೀವ ಕಿರಣ ಎಂಬ ಯೋಜನೆಯನ್ನು ಆರಂಭಿಸಿರುವ  ಕ್ಷೌರಿಕ ಸಮಾಜ ರಾಜ್ಯದ 3 ಸಾವಿರ ಕ್ಷೌರಿಕ ಕುಟುಂಬಳಿಗೆ ನೆರವು ನೀಡಲು ತೀರ್ಮಾನಿಸಿದೆ. ಇದರ ಮೊದಲ ಕಂತಾಗಿ ಇಂದು ಮೂರು ಸಾವಿರ ಕ್ಷೌರಿಕ ಸಮಾಜಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಕೊಂಡೊಯ್ಯುವ ಲಾರಿಗಳಿಗೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್‌ ನಾರಾಯಣ್ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಕೋರೋನಾ ಪರಿಣಾಮ ಇಡೀ ಜಗತ್ತು ತೊಂದರೆಗೆ ಸಿಲುಕಿದೆ. ಈ ಸಮಯದಲ್ಲಿ ಎಲ್ಲಾ ಸಮುದಾಯಗಳು ಹಾಗೂ ವೃತ್ತಿಗಳು ತೀವ್ರ ತೊಂದರೆ ಅನುಭವಿಸುತ್ತಿವೆ. ಕ್ಷೌರಿಕ ಸಮುದಾಯ ಕೂಡಾ ತೀವ್ರ ತೊಂದರೆಗೀಡಾಗಿದೆ. ಈ ಸಮುದಾಯದ ಮುಖಂಡರುಗಳು ಬಡ ಕ್ಷೌರಿಕರ ಸಹಾಯಕ್ಕೆ ಬಂದಿರುವುದು ಸಂತಸದ ಸಂಗತಿ.  ಈ ಸಮುದಾಯದ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಸವಿತಾ ಸಮಾಜದ ರಾಜ್ಯಾಧ್ಯಕ್ಷರಾದ ಸಂಪತ್‌ ಕುಮಾರ್‌ ಮಾತನಾಡಿ, ರಾಜ್ಯದ 30 ಜಿಲ್ಲೆಗಳ ಕಡು ಬಡತನದಲ್ಲಿರುವ ಸವಿತಾ ಸಮಾಜದ ಬಂಧುಗಳಿಗೆ ದಿನಸಿಯನ್ನು ನೀಡುವ ಯೋಜನೆ ಸವಿತಾ ಜೀವ ಕಿರಣವನ್ನು ಪ್ರಾರಂಭಿಸಲಾಗಿದೆ. ಕ್ಷೌರಿಕ ವೃತ್ತಿಯನ್ನು ನಂಬಿಕೊಂಡು ರಾಜ್ಯದಲ್ಲಿ 8 ಲಕ್ಷ ಕುಟುಂಬಗಳಿವೆ. ಇಂತಹ 1 ಲಕ್ಷ ಕ್ಕೂ ಹೆಚ್ಚು ಕ್ಷೌರಿಕರು ತೊಂದರೆಯಲ್ಲಿದ್ದಾರೆ. ಈ ಸಂಬಂಧ ನೆರವು ನೀಡುವಂತೆ ಮುಖ್ಯಮಂತ್ರಿ ಹಾಗೂ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಆದ ಕಾರಣ ಸವಿತಾ ಸಮಾಜದಲ್ಲಿರುವ ಹಣದ ಮೂಲಕ ಮೊದಲ ಹಂತದಲ್ಲಿ  5 ಸಾವಿರ ಕುಟುಂಬಗಳಿಗೆ ನೆರವು ನೀಡಲಾಗುತ್ತಿದೆ ಎಂದರು.  ನೆರವು ನೀಡಲಿಚ್ಛಿಸುವವರು- FEDERAL BANK, A/C NO : 13340200103781, IFSC :FDRL0001334 ಗೆ ಹಣ ಸಹಾಯ ಮಾಡಬಹುದಾಗಿದೆ.