ಸತ್ಸಂಗದಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ: ದ್ರುವ ಕುಲಕರ್ಣಿ

ಸತ್ಸಂಗದಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ: ದ್ರುವ ಕುಲಕರ್ಣಿ Satsang can bring positive changes in life: Dhruva Kulkarni

ವಿಜಯಪುರ 14 : ಜೀವನದಲ್ಲಿ ಅತಿಯಾದ ಆಸೆಗಳನ್ನು ತ್ಯಜಿಸಿ, ಸಾತ್ವಿಕ ಚಿಂತನೆ, ಭಕ್ತಿ ಮತ್ತು ಧ್ಯಾನದ ಮೂಲಕ ನಮ್ಮ ಮನಸ್ಸನ್ನು ಹತೋಟಿಯಲ್ಲಿಡಬೇಕು. ಭಗವದ್ಗೀತೆ ಮತ್ತು ಶರಣರ ವಚನಗಳ ಸಾರ-ಸಂದೇಶವು ನಮಲ್ಲಿರುವ ಅರಿಷಡ್ವರ್ಗಗಳನ್ನು ತ್ಯಜಿಸುತ್ತಾ, ಅಂಧಕಾರವೆಂಬ ಅಜ್ಞಾನವನ್ನು ತೊಲಗಿಸಿ ಸುಜ್ಞಾನದ ಸುಧೆ ಬೆಳಗುವಂತೆ ಮತ್ತು ಸಮಚಿತ್ತತೆಯಿಂದ ಬದುಕಲು ಮಾರ್ಗದರ್ಶನ ನೀಡುತ್ತವೆ ಎಂದು ಸನಾತನ ಸಾಧಕರಾದ ದೃವ ಕುಲಕರ್ಣಿ ಅವರು ಅಭಿಪ್ರಾಯಪಟ್ಟರು. ಅವರು ನಗರದ ಅಲ್‌-ಅಮೀನ್ ಎದುರಿಗೆ ಇರುವ ಎನ್‌.ಜಿ.ಓ. ಕಾಲನಿಯ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ದಿನಾಂಕ: 13-6-2026 ರಂದು ಜರುಗಿದ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. 

ಅವರು ಮಾತನಾಡುತ್ತಾ, ಲೌಕಿಕ ಜಂಜಾಟದಿಂದ ಮುಕ್ತಿ ಪಡೆದು ಜೀವನದ ಕೊನೆಯ ಉಸಿರಿರುವರೆಗೂ ಸದಾ ಸಹಾಯ, ಸಹಕಾರ, ಸಮತಾಭಾವ, ಸಮನ್ವಯತೆ ಮತ್ತು ಸಮಷ್ಠಿಭಾವಗಳೆಂಬ ಪಂಚ ಸದ್ಗುಣಗಳನ್ನು ಅನುಪಾಲಿಸಬೇಕು. ನಮ್ಮ ಬದುಕಿನ ನಿಜವಾದ ಅಸ್ತಿತ್ವನ್ನು ಅರಿತುಕೊಂಡು ಅಧ್ಯಾತ್ಮ, ಸತ್ಸಂಗ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಮಾಜದ ಒಳಿತಿಗಾಗಿ ದುಡಿಯುವುದೇ ಜೀವನದ ಸಾರ್ಥಕ್ಯವನ್ನು ಮನಗಾಣಬೇಕು. ಸತ್ಸಂಗವು ವ್ಯಕ್ತಿಯ ಆಲೋಚನೆ, ನಡುವಳಿಕೆ ಮತ್ತು ಜೀವನದ ದೃಷ್ಟಿಕೋನವನ್ನು ಧನಾತ್ಮಕವಾಗಿ ಬದಲಿಸುವ ಶಕ್ತಿಯನ್ನು ಹೊಂದಿವೆ ಎಂದು ಹೇಳಿದರು.

ಪ್ರೊ. ಎಂ.ಎಸ್‌.ಖೊದ್ನಾಪೂರ ಮಾತನಾಡಿ, ವಚನ ಸಾಹಿತ್ಯ ಪ್ರತಿಯೊಬ್ಬರ ಬದುಕಿಗೆ ಹಾಸುಹೊಕ್ಕಾಗಿದೆ. ವಚನ ಮಾತಿನ ಮೂಲವಾಗಿದ್ದು, ಸಮಾಜದಲ್ಲಿ ಸಾಮಾಜಿಕ ಮೌಲ್ಯ ಎತ್ತಿ ಹಿಡಿಯುವ ಶಕ್ತಿಯನ್ನು ಹೊಂದಿದೆ. ನಾವೆಲ್ಲರೂ ಶರಣರ ವಚನಗಳಲ್ಲಿ ತಿಳಿಸಿರುವ ಸಂದೇಶದಂತೆ, ಪ್ರತಿಯೊಬ್ಬರೂ ಭಕ್ತಿ ಮಾರ್ಗ, ಜ್ಞಾನ ಮಾರ್ಗ ಮತ್ತು ಕಾಯಕ ಮಾರ್ಗದಲ್ಲಿ ಪ್ರಾಮಾಣಿಕವಾಗಿ ನಡೆದು ಜೀವನದಲ್ಲಿ ಸಾರ್ಥಕತೆ ಹೊಂದಬೇಕು. ಪೋಷಕರು ತಮ್ಮ ಮಕ್ಕಳನ್ನು ಇಂತಹ ಸತ್ಸಂಗಗಳಿಗೆ ಕರೆತಂದು ಅವರಿಗೂ ಶಿಕ್ಷಣ ಜತೆಗೆ ಜೀವನ ಮೌಲ್ಯ, ಸಮಾಜದ ಋಣ ಮತ್ತು ಬದುಕಿನ ಸತ್ಯದ ಬಗ್ಗೆ ಅರಿವು ಮೂಡಿಸುವಂತಾಗಬೇಕು ಅಂದಾಗ ಮಾತ್ರ ನಾಳಿನ ನಮ್ಮ ಸಮಾಜದಲ್ಲಿ ಪರಿವರ್ತನೆ ಮತ್ತು ಸುಸ್ಥಿರತೆಯನ್ನು ಸಾಧಿಸಲು ಸಾಧ್ಯವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ಶ್ರೀ ಸಂತೋಷ ಪಾಟೀಲ, ಹಿರಿಯರಾದ ಭೀಮರಾಯ ಬಿರಾದಾರ, ಬಾಬು ಕೋಲಕಾರ, ನಾನಾಸಾಬ ಕೂಟನೂರ, ಶಿವಾನಂದ ಬಿಜ್ಜರಗಿ, ಶ್ರೀರಾಂ ದೇಶಪಾಂಡೆ, ರಮೇಶ ಕುಮಟಗಿ, ವೆಂಕಟೇಶ ಹೊಸಮನಿ, ಎಸ್‌.ಎಸ್‌.ಬಶೆಟ್ಟಿ, ಆರ್‌.ಬಿ.ಪೂಜಾರಿ, ಗಂಗಾಧರ ಚಾಬೂಕಸವಾರ, ಬಿ.ಆರ್‌.ಬಿರಾದಾರ, ಎಸ್‌.ಬಿ.ಪೂಜಾರಿ, ವಿನಾಯಕ ಕಿಚಡಿ, ಆರ್‌.ಎಸ್‌.ತಳವಾರ ಇನ್ನಿತರು ಸಹ ಉಪಸ್ಥಿತರಿದ್ದರು. ಈ ಸತ್ಸಂಗದಲ್ಲಿ ನವ ರಸಪುರದ ನೂರಾರು ಮಕ್ಕಳು, ಮಹಿಳೆಯರು, ಹಿರಿಯರು ಸೇರಿದಂತೆ ಭಾಗವಹಿಸಿದ್ದರು. ನಂತರ ಸಾಮೂಹಿಕ ಹನುಮಾನ ಚಾಲೀಸ್ ಪಠಣ ಮತ್ತು ಮಹಾಮಂಗಳಾರತಿ ನೆರವೇರಿತು.