ಸಪ್ತಸ್ವರ ಸಂಸ್ಥೆಯ ಸಾಧನೆ ಪ್ರಶಂಸನೀಯ: ರವಿ ಭಜಂತ್ರಿ

ಸಪ್ತಸ್ವರ ಸಂಸ್ಥೆಯ ಸಾಧನೆ ಪ್ರಶಂಸನೀಯ: ರವಿ ಭಜಂತ್ರಿ  Saptaswara organization's achievements are praiseworthy: Ravi Bhajantri


ಬೆಳಗಾವಿ 02: ಮಕ್ಕಳಲ್ಲಿ ಸಂಗೀತದ ಅಭಿರುಚಿ ಬೆಳೆಸುತ್ತಿರುವ  ಸಪ್ತಸ್ವರ ಸಂಗೀತ ವಿದ್ಯಾಲಯದ ಸಾಧನೆ  ಪ್ರಶಂಸನೀಯ. ಇಂದಿನ ಪೀಳಿಗೆಯ ಮಕ್ಕಳಲ್ಲಿ ಸಂಗೀತದ ಆಸಕ್ತಿ ಅಬಿರುಚಿಗಳನ್ನು ಬೆಳೆಸುವ ಕೆಲಸ ಆಗಬೇಕಾಗಿದೆ" ಎಂದು ಬೆಳಗಾವಿ ನಗರ ವಲಯ ಶಿಕ್ಷಣಾಧಿಕಾರಿ ರವಿ ಭಜಂತ್ರಿಯವರಿಲ್ಲಿ ಹೇಳಿದರು. 

ಸಪ್ತಸ್ವರ ಸಂಗೀತ ವಿದ್ಯಾಲಯದ ಎರಡು ದಿವಸಗಳ 26 ನೆಯ ಗುರುವಂದನಾ ಕಾರ್ಯಕ್ರಮವನ್ನು ಐಎಂಇಆರ್ ಸಭಾಗೃಹದಲ್ಲಿ ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದ ಭಜಂತ್ರಿಯವರು ಸಂಗೀತದ ಮೂಲಕ ಸಮಾಜ ಉತ್ತಮ ಸಂಸ್ಕಾರವನ್ನು ಪಡೆದುಕೊಳ್ಳುತ್ತದೆ. ಇಂದಿನ ಪೀಳಿಗೆಯವರಲ್ಲಿ ಗುರುಭಕ್ತಿ, ಸಂಗೀತದ ಆಸಕ್ತಿ ಕಡಿಮೆಯಾಗದಂತೆ ನೋಡಿಕೊಳ್ಳುವಲ್ಲಿ ಸಪ್ತಸ್ವರದಂತಹ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.  

ಸಪ್ತಸ್ವರದ ಗುರುಮಾತೆ ನಿರ್ಮಲಾ ಪ್ರಕಾಶ ಅವರು ಗುರುನಮನ ಸಲ್ಲಿಸಿ ಸ್ವಾಗತಿಸಿದರು. ಪೂರ್ವಿ ರಾಜಪುರೋಹಿತ ಪರಿಚಯವಿತ್ತರು, ಶೀತಲ ರಾಜಪುರೋಹಿತ ಮತ್ತು ವೀಣಾ ಹೆಗಡೆಯವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಜಯಲಕ್ಷ್ಮಿ ಮತ್ತು ರವಿ ಭಜಂತ್ರಿಯವರನ್ನು ಸನ್ಮಾನಿಸಲಾಯಿತು.  

ಶನಿವಾರ ಮಧ್ಯಾಹ್ನ ಮತ್ತು ರವಿವಾರ ಸಂಜೆಯತನಕ  ಸಪ್ತ ಸ್ವರದ ಹಿರಿಕಿರಿಯ  ಶಿಷ್ಯವೃಂದದವರು ಗಾಯನ, ವಾದನ, ನೃತ್ಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಮುಕುಂದ ಗೋರೆ, ನಿತಿನ್ ಸುತಾರ್, ನಾರಾಯಣ ಗಣಾಚಾರಿ, ಕೃಷ್ಣ ಏರಿ, ಪ್ರಮೋದ ಶೇಟ್ ಇವರು ಹಾರ್ಮೋನಿಯಂ ಮತ್ತು ತಬಲಾ ಸಾಥ ನೀಡಿದರು.  

ವಿದುಷಿ ನಿರ್ಮಲಾ ಪ್ರಕಾಶ ಅವರು ರಾಗ ಛಾಯಾನಟ್ ಮತ್ತು ರಾಗಮಾಲಿಕೆಯನ್ನು ಮತ್ತು ಎಲ್‌. ಎಸ್‌. ಶಾಸ್ತ್ರಿಯವರು ಬರೆದ ಕನ್ನಡ ಬಂದಿಶನ್ನು ರಾಗ ಮಧುವಂತಿಯಲ್ಲಿ ತಮ್ಮ ಹಿರಿಯ ಶಿಷ್ಯರುಗಳೊಂದಿಗೆ ಪ್ರಸ್ತುತಪಡಿಸಿದರು. ನ್ಯಾಯವಾದಿಗಳಾದ ಶಾಮಸುಂದರ ಪತ್ತಾರ, ನಾಗರತ್ನ ಪತ್ತಾರ, ಶ್ರೀವತ್ಸ, ಹೆಗಡೆ, ಆನಂದ ಪುರಾಣಿಕ, ಸೂರ್ಯಪ್ರಕಾಶ ಅಯ್ಯರ ಮೊದಲಾದವರು ಉಪಸ್ಥಿತರಿದ್ದರು.