ವಡಗೋಳದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣ

ವಡಗೋಳದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣ  Sangolli Rayanna statue unveiled in Vadagola

ಚಿಕ್ಕೋಡಿ 22 : ತಾಲ್ಲೂಕಿನ ವಡಗೋಳ ಗ್ರಾಮದಲ್ಲಿ ಶ್ರೀ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಶಾಸಕ ಗಣೇಶ ಹುಕ್ಕೇರಿ ನೆರವೇರಿಸಿದರು.  ಗ್ರಾಮಸ್ಥರ ಬಹುದಿನಗಳ ಬೇಡಿಕೆಯಂತೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಿರ್ಮಿಸಲಾಗಿರುವ ಪುತ್ಥಳಿ ಅನಾವರಣಕ್ಕೂ ಮುನ್ನ ಗ್ರಾಮದಲ್ಲಿ ಡೊಳ್ಳು, ವಾದ್ಯ ತಂಡಗಳು ಹಾಗೂ ಮಹಿಳೆಯರ ಕುಂಭಮೇಳದೊಂದಿಗೆ ಮೆರವಣಿಗೆ ನಡೆಯಿತು.  

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಗಣೇಶ ಹುಕ್ಕೇರಿ, ವಡಗೋಳ ಗ್ರಾಮದಲ್ಲಿ ರಾಯಣ್ಣ ವೃತ್ತ ಅಭಿವೃದ್ಧಿಗೆ 22 ಲಕ್ಷ ಹಾಗೂ ಅನ್ನಪೂರ್ಣೇಶ್ವರ ಫೌಂಡೇಶನ್ ವತಿಯಿಂದ 8.20 ಲಕ್ಷ ಅನುದಾನ ನೀಡಲಾಗಿದೆ. ಇದರ ಮೂಲಕ ಸುಂದರವಾದ ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಿಸಲಾಗಿದೆ ಎಂದರು.  ವಡಗೋಳ ಗ್ರಾಮದಲ್ಲಿ ಸಿಸಿ ರಸ್ತೆ ಅಭಿವೃದ್ಧಿಗೆ 70 ಲಕ್ಷ, ಮುತಲಕೋಡಿ ಬೀರೇಶ್ವರ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ಹಾಗೂ ಅಮೃತ್‌-2 ಯೋಜನೆಯಡಿ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿಗೆ 80 ಲಕ್ಷ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.  

ವಡಗೋಳದಿಂದ ಮುತಲಕೋಡಿ ದೇವಸ್ಥಾನ ಹಾಗೂ ಮಲಿಕವಾಡ ಶೈರತಿ ರಸ್ತೆಯವರೆಗೆ 1.30 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗ್ರಾಮಸ್ಥರ ಸಹಕಾರದೊಂದಿಗೆ ವಡಗೋಳ ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಗಣೇಶ ಹುಕ್ಕೇರಿ ಭರವಸೆ ನೀಡಿದರು.  ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಗುಂಡಕಲ್ಲೆ, ಮುಖಂಡರಾದ ಅರುಣ ದೇಸಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.