ಜಾಗದ ಕುರಿತು ಸಮಗ್ರ ಮಾಹಿತಿ ನೀಡುವಂತೆ ಒತ್ತಾಯಿಸಿ ಸಂಗಮೇಶ ಡಿಗ್ಗಿ ಅವರು ತಹಶೀಲ್ದಾರ್ ಅವರಿಗೆ ಮನವಿ

ಜಾಗದ ಕುರಿತು ಸಮಗ್ರ ಮಾಹಿತಿ ನೀಡುವಂತೆ ಒತ್ತಾಯಿಸಿ ಸಂಗಮೇಶ ಡಿಗ್ಗಿ ಅವರು ತಹಶೀಲ್ದಾರ್ ಅವರಿಗೆ ಮನವಿ Sangamesha Diggi submits a memorandum to the Tahsildar, urging for comprehensive information regardi

ಲೋಕದರ್ಶನ ವರದಿ 

ಸಿಂದಗಿ 18 : ನಗರದ ಸರ್ವೇ ನಂ.487ರಲ್ಲಿ ನಿರ್ಮಾಣವಾಗುತ್ತಿರುವ ತಳವಾರ ಸಮಾಜ ಭವನ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಜಾಗದ ಕುರಿತು ಸಮಗ್ರ ಮಾಹಿತಿ ನೀಡುವಂತೆ ಒತ್ತಾಯಿಸಿ ಸಂಗಮೇಶ ಡಿಗ್ಗಿ ಅವರು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಿದರು. ನಂತರ ಸಂಗಮೇಶ ಡಿಗ್ಗಿ ಮಾತನಾಡಿ, ಸರ್ವೇ ನಂ.487ರ ಜಾಗವು ವಿವಾದಿತವಾಗಿದ್ದು, ಅದರ ಬಗ್ಗೆ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ತಿಳಿಯದೆಯೇ ಸಮಾಜ ಭವನ ನಿರ್ಮಾಣ ಕಾರ್ಯಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಈ ಸ್ಥಳದ ಸುತ್ತಮುತ್ತ ಸರ್ಕಾರಿ ಶಾಲೆಗಳು, ಆದರ್ಶ ಶಾಲೆ ಹಾಗೂ ವಿದ್ಯಾರ್ಥಿ ವಸತಿ ನಿಲಯಗಳಿದ್ದು, ಇಲ್ಲಿ ಸಮಾಜ ಭವನ ನಿರ್ಮಾಣವಾದರೆ ಸಭೆ-ಸಮಾರಂಭಗಳ ಕಾರಣದಿಂದ ಉಂಟಾಗುವ ಶಬ್ದಮಾಲಿನ್ಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ.

ಇದೇ ಜಾಗವನ್ನು ಒಂದು ಸಮುದಾಯಕ್ಕೆ ನೀಡಿದರೆ, ಮುಂದಿನ ದಿನಗಳಲ್ಲಿ ಇತರೆ ಸಮುದಾಯಗಳು ಹಾಗೂ ಧರ್ಮದವರೂ ಸಹ ಭವನ ಅಥವಾ ಧಾರ್ಮಿಕ ಕೇಂದ್ರಗಳಿಗಾಗಿ ಇದೇ ರೀತಿಯ ಬೇಡಿಕೆ ಮುಂದಿಡುವ ಸಾಧ್ಯತೆ ಇದ್ದು, ಇದರಿಂದ ಸಾಮಾಜಿಕ ಸೌಹಾರ್ದತೆಗೆ ಧಕ್ಕೆಯಾಗುವ ಆತಂಕ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಜಾತಿ-ಧರ್ಮ ಸಂಬಂಧಿತ ಸಂಘರ್ಷಕ್ಕೆ ಅವಕಾಶ ನೀಡಬಾರದು ಎಂದು ಅವರು ಒತ್ತಾಯಿಸಿದ್ದಾರೆ. ನಗರದಲ್ಲಿ ಸಮುದಾಯ ಭವನ ಅಥವಾ ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸಬೇಕಾದರೆ, ಲೇಓಟ್‌ಗಳಲ್ಲಿರುವ ಸಿ.ಎ.ಸೈಟ್‌ಗಳಲ್ಲಿ ನಿರ್ಮಿಸಬೇಕು. ಸರ್ವೇ ನಂ.487ರ ಜಾಗದಲ್ಲಿ ಯಾವುದೇ ಒಂದು ಸಮುದಾಯದ ಭವನ ನಿರ್ಮಿಸುವ ಬದಲು, ವಿಜ್ಞಾನ ಕೇಂದ್ರ ಹಾಗೂ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಲು ಮೀಸಲಿಡಬೇಕು.

ಇದರಿಂದ ಸುತ್ತಮುತ್ತಲಿನ ಶಾಲೆ-ಕಾಲೇಜು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅನುಕೂಲವಾಗಲಿದೆ. ಕೂಡಲೇ ಕಾಮಗಾರಿಗೆ ತಡೆ ಹಿಡಿಯಬೇಕು. ಜೊತೆಗೆ ಸರ್ವೇ ನಂ.487ಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆ ಹಾಗೂ ಮಾಹಿತಿಯನ್ನು ಒದಗಿಸುವಂತೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಮನವಿಯನ್ನು ಸ್ವೀಕರಿಸಿದ ತಹಶೀಲ್ದಾರ್ ಕರೆಪ್ಪ ಬೆಳ್ಳಿ ಮಾತನಾಡಿ, ಸಂಗಮೇಶ ಡಿಗ್ಗಿ ಅವರು ನೀಡಿದ ಸರ್ವೇ ನಂ.487ರ ಕಂದಾಯ ಇಲಾಖೆಯ ಜಾಗವನ್ನು ಸಮಾಜ ಕಲ್ಯಾಣ ಇಲಾಖೆಗೆ ಮಂಜೂರು ಮಾಡಲಾಗಿದೆ. ಅಲ್ಲಿ ತಳವಾರ ಸಮಾಜದ ಭವನ ನಿರ್ಮಾಣವಾಗುತ್ತಿದೆ ಇದರಿಂದ ಅಲ್ಲಿ ಓದುವ ಮಕ್ಕಳಿಗೆ ತೊಂದರೆ ಉಂಟಾಗುತ್ತದೆ. ಎಂದು ಅವರು ಮನವಿ ಸಲ್ಲಿಸಿದ್ದಾರೆ. ಅವರ ಮನವಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ಬಂದು ಪರಿಹಾರ ಕೊಡಿಸುವ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.