ಸಂಡೂರು: ನಾಲ್ವರು ಬಾಲ ಕಾರ್ಮಿಕರ ರಕ್ಷಣೆ

ಸಂಡೂರು: ನಾಲ್ವರು ಬಾಲ ಕಾರ್ಮಿಕರ ರಕ್ಷಣೆ  Sandur: Four child laborers rescued

ಲೋಕದರ್ಶನ ವರದಿ 

ಬಳ್ಳಾರಿ, ಆ.29 (ಕರ್ನಾಟಕ ವಾರ್ತೆ): ಸಂಡೂರು ತಾಲ್ಲೂಕಿನ ಕುರೇಕುಪ್ಪ ಪಟ್ಟಣ ವ್ಯಾಪ್ತಿಯ ವಿವಿಧ ಅಂಗಡಿ ಹಾಗೂ ಉದ್ಯಮಗಳ ಮೇಲೆ ಶನಿವಾರ ಜಂಟಿ ಟಾಸ್ಕ್ಫೋರ್ಸ್‌ ಸಮಿತಿ ದಾಳಿ ನಡೆಸಿ, ನಾಲ್ವರು ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸಿದೆ.  

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಕಾರ್ಮಿಕ ಇಲಾಖೆ, ಕಂದಾಯ, ಶಿಕ್ಷಣ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಚೈಲ್ಡ್ಲೈನ್ ಸಹಯೋಗದಲ್ಲಿ ಕುರೇಕುಪ್ಪದ ಸುಮಾರು 25 ಅಂಗಡಿ ಮತ್ತು ಉದ್ಯಮಗಳ ಪರೀಶೀಲನೆ ನಡೆಸಲಾಯಿತು.  

ಈ ವೇಳೆ ಕೆಲಸದಲ್ಲಿ ತೊಡಗಿದ್ದ ನಾಲ್ವರು ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಅವರ ವಯಸ್ಸಿನ ದಾಖಲೆಗಳನ್ನು ಪರೀಶೀಲಿಸಲಾಯಿತು. ಬಳಿಕ ಅವರು ಈ ಹಿಂದೆ ವ್ಯಾಸಂಗ ಮಾಡುತ್ತಿದ್ದ ಶಾಲೆಗಳಿಗೆ ಮರುದಾಖಲಿಸುವ ಕ್ರಮ ಕೈಗೊಳ್ಳಲಾಗಿದೆ.  

ಮಕ್ಕಳನ್ನು ನಿಯಮಬಾಹಿರವಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದ ಅಂಗಡಿ ಹಾಗೂ ಉದ್ಯಮ ಮಾಲೀಕರ ವಿರುದ್ಧ ಬಾಲಕಾರ್ಮಿಕ ಕಾಯ್ದೆಯಡಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುವುದು.

ಯಾವುದೇ ಕಾರಣಕ್ಕೂ ಬಾಲಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಳ್ಳಬಾರದು ಎಂದು ಅಂಗಡಿ ಮಾಲೀಕರಿಗೆ ಜಾಗೃತಿ ಪೋಸ್ಟರ್ಗಳನ್ನು ಅಂಟಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ. ಮೌನೇಶ್ ತಿಳಿಸಿದ್ದಾರೆ.  

ಜಂಟಿ ಕಾರ್ಯಾಚರಣೆಯಲ್ಲಿ ಉಪತಹಶೀಲ್ದಾರ್ ಸುಬ್ಬರಾವ್, ಸಂಡೂರು ಕಾರ್ಮಿಕ ನೀರೀಕ್ಷಕ ಮಂಜುನಾಥ ತೊಂಡೆಹಾಳ್, ಮೇಲ್ವಿಚಾರಕಿ ಚೇತನಾ, ತಂಬಾಕು ನಿಯಂತ್ರಣ ಕೋಶದ ಗೋವಿಂದಪ್ಪ, ಪುರಸಭೆ ಕಂದಾಯ ಅಧಿಕಾರಿ ಹರ್ಷ, ಪೊಲೀಸ್ ಇಲಾಖೆಯ ರವಿಕುಮಾರ್ ಹಾಗೂ ಮಕ್ಕಳ ಸಹಾಯವಾಣಿಯ ಕಾರ್ತಿಕ್ ಪಾಲ್ಗೊಂಡಿದ್ದರು.