ಹಾಸನದಲ್ಲಿ ಸಾಮಿ-ಸಬಿನ್ಸಾ ಗ್ರೂಪ್ ನ ಹೊಸ ಉತ್ಪಾದನಾ ಘಟಕ

ಬೆಂಗಳೂರು, ಜ30  ಆರೋಗ್ಯ ವಿಜ್ಞಾನ ಹಾಗೂ ಪೌಷ್ಠಿಕ ಮತ್ತು ಆರೋಗ್ಯ ಪದಾರ್ಥಗಳ ಜಾಗತಿಕ ಕಂಪೆನಿ ಸಾಮಿ-ಸಬಿನ್ಸಾ ಗ್ರೂಪ್ ಹಾಸನದ ಔಷಧ ವಿಶೇಷ ಆರ್ಥಿಕ ವಲಯದಲ್ಲಿ ತನ್ನ ಹೊಸ ಉತ್ಪಾದನಾ ಘಟಕವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಸ್ಥಾವರದ ಮೊದಲ ಹಂತದಲ್ಲಿ 40,000 ಚದರ ಮೀಟರ್ ವಿಶ್ವದರ್ಜೆಯ ಆರೋಗ್ಯ ಮತ್ತು ಪೌಷ್ಠಿಕ ಪದಾರ್ಥಗಳು (ಎಎನ್‍ಐ) ಉತ್ಪಾದನಾ ಘಟಕ ನಿರ್ಮಿಸಲಾಗುವುದು. ಈ ಸ್ಥಾವರ ವಾರ್ಷಿಕ 300 ಟನ್ ನಷ್ಟು ಸಾಮಥ್ರ್ಯ ಹೊಂದಿದ್ದು, 2021ರ ವೇಳೆಗೆ ಕಾರ್ಯನಿರ್ವಹಿಸಲಿದೆ. 200 ಕೋಟಿ ರೂ.ಗಳ ಹೂಡಿಕೆಯೊಂದಿಗೆ ನಿರ್ಮಿಸಲಾಗುತ್ತಿರುವ ಹೊಸ ಘಟಕ ಸಾಮಿ-ಸಬಿನ್ಸಾ ಸಮೂಹದ ಬೆಳವಣಿಗೆಯ ಕಾರ್ಯತಂತ್ರದ ಭಾಗವಾಗಿದೆ. 

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಮಿ-ಸಬಿನ್ಸಾ ಗ್ರೂಪ್ ಸ್ಥಾಪಕ ಮತ್ತು ಅಧ್ಯಕ್ಷ ಮುಹಮ್ಮದ್ ಮಜೀದ್, 'ವಿಶ್ವದಾದ್ಯಂತ, ಗ್ರಾಹಕರು ಉತ್ತಮ ಆರೋಗ್ಯಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಮತ್ತು ಅವರ ಎಲ್ಲಾ ಪೌಷ್ಠಿಕಾಂಶದ ಅಗತ್ಯಗಳನ್ನು ಪೂರೈಸುವ ಆಹಾರ ಮತ್ತು ಪಾನೀಯಗಳನ್ನು ಪೂರೈಸುವುದು ಈ ವಲಯದ ಜವಾಬ್ದಾರಿಯಾಗಿದೆ. ಆರೋಗ್ಯಕರ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಕಡೆಗೆ ಸಂಶೋಧನಾ-ಆಧಾರಿತ, ವಿಜ್ಞಾನ ಆಧಾರಿತ ವಿಧಾನಕ್ಕೆ ಸಂಸ್ಥೆ ಬದ್ಧವಾಗಿದೆ ಎಂದು ಹೇಳಿದ್ದಾರೆ.