‘ಸಮಾಜವಾದಿ ರಾಚಪ್ಪ ಹಡಪದ’ ‘ಉಪನ್ಯಾಸ ಹಾಗೂ ಸನ್ಮಾನ ಸಮಾರಂಭ’
Samajwadi Rachappa Hadapada: Lecture and felicitation ceremony’
ಧಾರವಾಡ 12: ಕರ್ನಾಟಕ ವಿದ್ಯಾವರ್ಧಕ ಸಂಘವು ಹಿರಿಯ ಸಮಾಜವಾದಿ ದಿ. ಶ್ರೀ ರಾಚಪ್ಪ ಹಡಪದ ದತ್ತಿ ಅಂಗವಾಗಿ ದಿನಾಂಕ: 13 ಜುಲೈ 2025 ರಂದು ಸಂಜೆ 6 ಗಂಟೆಗೆ ಸಂಘದ ದೇಶಪಾಂಡೆ ಸಭಾಭವನದಲ್ಲಿ ‘ಉಪನ್ಯಾಸ ಹಾಗೂ ಸನ್ಮಾನ ಸಮಾರಂಭ’ ಏರ್ಪಡಿಸಿದೆ.
ಧಾರವಾಡ-ಬೆಂಗಳೂರಿನ ನ್ಯಾಯವಾದಿ ಸಿ.ಎಸ್. ಪಾಟೀಲ ‘ಸಮಾಜವಾದಿ ರಾಚಪ್ಪ ಹಡಪದ’ ಕುರಿತು ಅತಿಥಿ ಉಪನ್ಯಾಸ ನೀಡುವರು.
ಧಾರವಾಡದ ಸಿದ್ಧಾರೂಢ ಟ್ರಸ್ಟ್ ಕಮೀಟಿಯ ಮಾಜಿ ಉಪಾಧ್ಯಕ್ಷ ಮಹಾದೇವ ಜಿ. ಬಾಗೇವಾಡಿ ಗೌರವ ಸನ್ಮಾನ ಸ್ವೀಕರಿಸುವರು.
ಧಾರವಾಡ ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು.
ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ದಿ. ಶ್ರೀ ರಾಚಪ್ಪ ಹಡಪದ
ರಾಚಪ್ಪ ಹಡಪದ ಧಾರವಾಡದ ಹೋರಾಟಗಳ ಧ್ವನಿಯಾಗಿದ್ದರು. ಲೋಹಿಯಾ ಪ್ರಭಾವಕ್ಕೆ ಒಳಗಾಗಿ ಜೀವನದುದ್ದಕ್ಕೂ ಸಮಾಜವಾದ ಸಿದ್ಧಾಂತದಂತೆ ನಡೆದು ಹೋರಾಟಗಾರರಿಗೆ ಮಾದರಿಯಾದವರು. ಧಾರವಾಡದಲ್ಲಿಯ ಅವರ ‘ಸಮತಾ ಸಲೂನ್’ ಅಂಗಡಿ ರಾಜ್ಯದ ಸಮಾಜವಾದಿ ಮುಖಂಡರ ಚರ್ಚೆಯ ಮತ್ತು ಹೋರಾಟಗಳ ನಿರ್ಣಯಿಸುವ ಕೇಂದ್ರ ಸ್ಥಳವಾಗಿತ್ತು. ಕೊನೆಯ ದಿನಗಳವರೆಗೂ ತಮ್ಮ ವೃತ್ತಿಯನ್ನು ಬಿಡದೇ ಅದರ ಗೌರವ ಹೆಚ್ಚಿಸಿದವರು.
ಬೈಲಹೊಂಗಲದ ಹೊಳೆಹೊಸೂರು ಪುಟ್ಟ ಗ್ರಾಮದಿಂದ ಧಾರವಾಡಕ್ಕೆ ಬಂದು ನೆಲೆಯೂರಿದ ರಾಚಪ್ಪ ಓದು ಪ್ರಾಥಮಿಕ ಶಿಕ್ಷಣ ದಾಟದಿದ್ದರೂ ಲೋಹಿಯಾ ವಾದವನ್ನು ಜೀವನದಲ್ಲಿ ಅಳವಡಿಸಿಕೊಂಡವರು.
ತಂದೆ ಧೂಳಪ್ಪ ತಾಯಿ ನಾಗಮ್ಮರ ಹಿರಿಯ ಮಗನಾಗಿ ದಿನಾಂಕ 18-7-1937ರಲ್ಲಿ ಜನಿಸಿದರು. ಬೆಳೆಯುತ್ತಲೇ ಸಮಾಜದ ಅಸಮಾನತೆ ವಿರುದ್ಧ ಧ್ವನಿ ಎತ್ತುತ್ತಾ ಹೋರಾಟಗಾರರಾಗಿ ರೂಪಗೊಂಡರು.
ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿ ಜೈಲುವಾಸ ಕಂಡರು. ಜಯಪ್ರಕಾಶ ನಾರಾಯಣರ ‘ನವನಿರ್ಮಾಣ ಕ್ರಾಂತಿ’ ಆಂದೋಲನದಲ್ಲಿ ಧುಮುಕಿದರು. ನಂತರದ ದಿನಗಳಲ್ಲಿ ಗೋಕಾಕ ಚಳುವಳಿಯಿಂದ ಹಿಡಿದು ಧಾರವಾಡದ ಎಲ್ಲ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟಗಳಿಗೆ ಶಕ್ತಿ ತುಂಬಿದವರು.
ಬಡತನವನ್ನು ಅಪ್ಪಿಕೊಂಡು ಅದನ್ನೂ ಪ್ರೀತಿಯಿಂದ ಅನುಭವಿಸಿದವರು. ಇಂಥ ಧೀಮಂತ ಹೋರಾಟಗಾರನಿಗೆ ‘ಶಾಂತವೇರಿ ಗೋಪಾಲಗೌಡ ಪ್ರಶಸ್ತಿ’ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷ ಸ್ಥಾನ ನೀಡಿ ಗೌರವ ಸಲ್ಲಿಸಿವೆ.
ದಿನಾಂಕ: 4-3-2020 ರಂದು ನಿಧನ ಹೊಂದಿದ ರಾಚಪ್ಪರ ಸ್ಮರಣೆ ನಿರಂತರ ಇರಲಿ ಎಂದು ಅವರ ತಮ್ಮನ ಮಗ ಯೋಗೇಶ ರವಿರಾಜ ಹಡಪದ ಸಂಘದಲ್ಲಿ 2022 ರಲ್ಲಿ ದತ್ತಿ ಸ್ಥಾಪಿಸಿ, ಕಾರ್ಯಕ್ರಮ ಮಾಡಲು ಅನುವು ಮಾಡಿಕೊಟ್ಟಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 