ಧಾರವಾಡ 24: ವಾಯುಪುತ್ರ ಆಂಜನೇಯನನ್ನು ಸ್ಮರಣೆ ಮಾಡುವುದರಿಂದ ಶಕ್ತಿ, ಯುಕ್ತಿ, ಮುಕ್ತಿ, ವಿಶ್ವಾಸ, ಯಶಸ್ಸುಗಳು ನಮಗೆ ದೊರೆಯುತ್ತವೆಯಲ್ಲದೇ ಅಧೈರ್ಯ, ಅನಾರೋಗ್ಯ ಸಮಸ್ಯೆಗಳು ಹೊರಟು ಹೋಗುತ್ತವೆ. ಅದ್ಭುತವಾದ ವಾಕ್ ಶಕ್ತಿಯು ಹನುಮನನ್ನು ನೆನೆಯುವುದರಿಂದ ನಮಗೆ ದೊರೆಯುತ್ತದೆ ಎಂದು ಖ್ಯಾತ ಪ್ರವಚನಕಾರ ಪಂಡಿತ ಭೀಮಸೇನಾಚಾರ್ಯ ಮಳಗಿ ಶನಿವಾರ ಹೇಳಿದರು.
ಇಲ್ಲಿಯ ನುಗ್ಗಿಕೇರಿಯ ಪ್ರಖ್ಯಾತ ಹನುಮಂತದೇವರ ಗುಡಿಯಲ್ಲಿ ನಗರದ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನವು, ದಾಸ ಸಾಹಿತ್ಯ ಪ್ರಚಾರ ಕಾರ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡುವ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಭಗವಂತನ ನಾಮಸ್ಮರಣೆ ನಮಗೆ ಮುಕ್ತಿ ಸಾಧನವಾಗಿದ್ದು, ಆತನ ನಂಬಿದ ಭಕ್ತರನ್ನು ಎಂದೆಂದಿಗೂ ಕೈಬಿಡುವುದೇ ಇಲ್ಲ. ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಬಿಡುವು ಎಂಬುದೇ ದೊರೆಯುತ್ತಿಲ್ಲವಾದ್ದರಿಂದ ಮನಸ್ಸಿಗೆ ಶಾಂತಿ, ಸಮಾಧಾನಗಳೇ ದೊರೆಯುತ್ತಿಲ್ಲ. ಮನಸ್ಸು ಉಲ್ಲಸಿತವಾಗಿರಲು ದೇವರ ನಾಮಸ್ಮರಣೆ ಅಗತ್ಯವೆಂದರು.
ದೇವಸ್ಥಾನದ ಪರ್ಯಾಸ್ಥರಾದ ಕೆ.ಆರ್. ದೇಸಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಡೀ ಜಗತ್ತು ಶಾಂತಿ, ಆಧ್ಯಾತ್ಮಗಳಿಗಾಗಿ ಭಾರತದತ್ತ ನೋಡುತ್ತಿದ್ದು, ನಮ್ಮ ಪರಂಪರೆ-ಸಂಸ್ಕೃತಿ ಶ್ರೇಷ್ಠವಾಗಿದೆ ಎಂದು ಹೇಳಿ, ದಾಸರು ತಮ್ಮ ಕೃತಿಗಳಿಂದ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಜನರಿಗೆ ಸನ್ಮಾರ್ಗ ತೋರಿಸಿದ ಪುಣ್ಯ ಪುರುಷರಾಗಿದ್ದಾರೆ ಎಂದರು.
ಖ್ಯಾತ ಸಂಗೀತಗಾರ ಡಾ. ಶ್ರೀಧರ ಕುಲಕರ್ಣಿಯವರಿಂದ ಮಾರುತಿ ಭಜನೆ, ಸರೋಜಾ ರಾವ್ ಅವರಿಂದ ಪ್ರಾರ್ಥನೆ ನಡೆದವು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೃಷ್ಣ ಜೋಶಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಷ್ಠಾನದ ಕಾರ್ಯ ಸಾಧನೆ ವಿವರಿಸಿದರು. ಅಧ್ಯಕ್ಷ ಎಸ್.ಬಿ. ಗುತ್ತಲ ಪ್ರತಿಷ್ಠಾನದ ಮುಂದಿನ ಯೋಜನೆಗಳನ್ನು ವಿವರಿಸಿ, ದಶಮಾನೋತ್ಸವದ ನಿಮಿತ್ತ ಹತ್ತು ಹರಿದಾಸರನ್ನು ಸನ್ಮಾನಿಸಲಾಗುವುದು ಎಂದರು.
ಡಾ. ಎಚ್.ಎ. ಕಟ್ಟಿ, ಪ್ರೇಮಾನಂದ ಹುಲಕೊಪ್ಪ, ರವಿ ನಾಯಕ, ಪ್ರಕಾಶ ಕುಲಕರ್ಣಿ ಶ್ರೀನಿವಾಸ ಕುಲಕರ್ಣಿ, ಆರ್. ಬಿ. ಗುತ್ತಲ, ಪಿ.ಬಿ. ಗುತ್ತಲ, ಬದರೀನಾಥ ರಾಜಪುರೋಹಿತ, ಇಂದಿರಾ ದೇಸಾಯಿ, ವಿದ್ಯಾ ಗುತ್ತಲ, ವಾದಿರಾಜ ದೇಸಾಯಿ, ಹೋಳಿಕಟ್ಟಿ ಉಪಸ್ಥಿತರಿದ್ದರು. ರೋಹಿಣಿರಾವ್ ವಂದಿಸಿದರು.