ಜುಗೂಳದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ಗುರುನಮನ;
ಕಾಗವಾಡ 10: ಜುಗೂಳ ಗ್ರಾಮಸ್ಥರ ಭಕ್ತಿಯಿಂದಾಗಿ ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಜುಗೂಳ ಗ್ರಾಮ ನನ್ನ ತವರೂರು ಎಂದು ಬಣ್ಣಿಸಿದ್ದರು. ಅದರಂತೆ ಅವರ ಶಿಷ್ಯರಾದ ಪಪೂ ಸಿದ್ದೇಶ್ವರ ಶ್ರೀಗಳು ಸಹ ಈ ಗ್ರಾಮದೊಂದಿಗೆ ಅವಿನಾವಭಾವ ಸಂಬಂಧ ಹೊಂದಿದ್ದರು. ಇಲ್ಲಿಯ ಗ್ರಾಮಸ್ಥರ ಕಣಕಣದಲ್ಲಿಯೂ ಸಿದ್ದೇಶ್ವರ ಶ್ರೀಗಳು ನೆಲೆಸಿದ್ದಾರೆಂದು ವಿಜಯಪೂರ ಜ್ಞಾನಯೋಗಾಶ್ರಮದ ಪಪೂ ಬಸವಲಿಂಗ ಶ್ರೀಗಳು ಹೇಳಿದ್ದಾರೆ.
ಅವರು, ವೈಕುಂಠ ಏಕಾದಶಿಯ ಶುಕ್ರವಾರ ದಿ. 10 ರಂದು ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಿದ್ದೇಶ್ವರ ಶ್ರೀಗಳ 2ನೇ ವರ್ಷದ ಗುರುನಮನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ, ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಪರಮಾನಂದವಾಡಿಯ ಪಪೂ ಶ್ರೀ ಡಾ. ಅಭಿನವ ಬ್ರಹ್ಮಾನಂದ ಶ್ರೀಗಳು, ಭೋಜದ ಪಪೂ ಶ್ರೀ ಮಲ್ಲಯ್ಯ ಶ್ರೀಗಳು ಮತ್ತು ಉಗಾರ ಗುರುದೇವಾಶ್ರಮದ ಪಪೂ ಶ್ರೀ ಜ್ಞಾನಾನಂದ ಶ್ರೀಗಳು ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ಬೆಳಿಗ್ಗೆ 9 ಗಂಟೆಗೆ ಅಲಂಕಾರಿಕ ರಥದಲ್ಲಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರದ ಮೆರವಣಿಗೆಯು ವಿವಿಧ ವಾಧ್ಯ ವೃಂದಗಳೊಂದಿಗೆ, ಕುಂಭ ಹೊತ್ತ ಮಹಿಳೆಯರು, ಗ್ರಾಮಸ್ಥರ ಉಪಸ್ಥಿತಿಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರದ ಪೂಜೆ ನೆರವೇರಿಸಲಾಯಿತು. ಚಿಕ್ಕೋಡಿ ಸಿಬಿಕೆಎಸ್ಎಸ್ ಕಾರ್ಖಾನೆಯ ನಿರ್ದೇಶಕರು ಹಾಗೂ ಗ್ರಾಮದ ಮುಖಂಡರಾದ ಪರಸಗೌಡಾ (ಅಣ್ಣಾಸಾಬ ಪಾಟೀಲ) ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಮಯದಲ್ಲಿ ಮಹಾಪ್ರಸಾದ ಸೇವೆ ಮಾಡಿದ ವೆಂಕಟರಮನ ಗಾಂವಕರ ಮತ್ತು ಪದ್ಮಾ ಗಾಂವಕರ ದಂಪತಿಗಳನ್ನು ಸನ್ಮಾನಿಸಲಾಯಿತು.
ಈ ಸಮಯದಲ್ಲಿ ತಾತ್ಯಾಸಾಬ ಪಾಟೀಲ, ಅನೀಲ ಕಡೋಲೆ, ಬಸವರಾಜ ನಂದ್ಯಾಳೆ, ಕಾಕಾಸಾಬ ಪಾಟೀಲ, ಅನೀಲ ಸುಂಕೆ, ಚಿದಾನಂದ ಮಿಣಚೆ, ರವಿ ವ್ಹಾಂಟೆ, ಭಾಸ್ಕರ ಪಾಟೀಲ, ಉಮೇಶ ಪಾಟೀಲ ಸೇರಿದಂತೆ ಜುಗೂಳ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು. ನಂತರ ಮಹಾಪ್ರಸಾದ ನೆರವೇರಿತು.