ಸಂತ ಸೇವಾಲಾಲ ಮಹಾರಾಜ ಒಬ್ಬ ಮಹಾಪುರುಷ: ಪ್ರೊ. ಶಶಿಕಾಂತ್ ಎಸ್. ಉಡಿಕೇರಿ
Saint Sewalala Maharaja is a great man said Prof. Shashikant
ಲೋಕದರ್ಶನ ವರದಿ
ಕಲಬುರಗಿ 17: ಜಗತ್ತಿನಲ್ಲಿ ಸಂಭವಿಸಿದ ಅನಾಚಾರಗಳ ಕಾಲದಿಂದಲೂ ಅನೇಕ ಮಹಾಪುರುಷರು ಜನಿಸಿದ್ದಾರೆ. ಸಂತ ಸೇವಾಲಾಲ ಮಹಾರಾಜರು ಮಹಾಪುರುಷನಾಗಿ ಸಮಾಜದ ಏಳಿಗೆಗೆ ಶ್ರಮಿಸುವ ಮೂಲಕ ಸಕಲ ಜೀವಗಳಿಗೂ ಹಿಂಸೆ ಮತ್ತು ದ್ರೋಹ ಬಗೆಯದಂತೆ ಜಾಗೃತಗೊಳಿಸಿದ್ದಾರೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ ಸಂತ ಸೇವಾಲಾಲ ಮಹಾರಾಜರ 287ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸಂತ ಸೇವಾಲಾಲ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ಸಮರ್ಿಸಿ ಮಾತನಾಡಿ ಸಂತ ಸೇವಾಲಾಲ ಮಹಾರಾಜರು ಶಾಂತಿ, ಅಹಿಂಸೆ ಮತ್ತು ಜ್ಞಾನ ಬೆಳೆಸಿಕೊಂಡು ಜಾಗೃತ ಸಮಾಜವನ್ನು ಪೋಷಿಸಬೇಕೆಂದು ಎಚ್ಚರಿಸಿದ್ದಾರೆ. ಸಕಲ ಜೀವ ಸಂಕುಲಗಳಿಗೂ ಒಳ್ಳೆಯದಾಗಬೇಕು. ಹಿಂಸಿಸುವ ಮತ್ತು ಕೇಡು ಬಯಸುವ ಪ್ರವೃತ್ತಿ ಒಳ್ಳೆಯದಲ್ಲ. ಅವರ ಸಂದೇಶದಂತೆ ಯುವಜನತೆ ಸಂಯಮದಿಂದ ಅವರ ವಿಚಾರಗಳನ್ನು ಅರಿತುಕೊಳ್ಳಬೇಕು ಎಂದರು.
ಸೇವಾಲಾಲ ಮಹಾರಾಜರ ಬೋದನೆ ಮತ್ತು ಸಂದೇಶಗಳ ಅಧ್ಯಯನಕ್ಕೆ ಒತ್ತು ಸಿಗಬೇಕು. ಅಲೆಮಾರಿ ಜೀವನ ಸಾಗಿಸುತ್ತಿದ್ದ ಈ ಸಮುದಾಯ ದೇಶದ ವಿವಿಧ ರಾಜ್ಯಗಳ ತಾಂಡಗಳಲ್ಲಿ ವಾಸವಿರುವ ಇವರ ಭಾಷೆ ಸರಳತೆಯಿಂದ ಕೂಡಿದೆ. ಇವರ ಬುದ್ದಿಮತ್ತೆ, ಸಂಸ್ಕೃತಿ, ಆಚರಣೆಗಳು ನೃತ್ಯ, ಲಾವಣಿ, ಜನಪದ ಹಾಡುಗಳಲ್ಲಿ ವ್ಯಕ್ತವಾಗಿವೆ. ಇವರ ಜೀವನ ಮತ್ತು ಆಚಾರ ವಿಚಾರಗಳು ಶೋಧನೆ ಮೂಲಕ ಚರಿತ್ರೆ ಹೊರಬರಬೇಕು ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಈ. ಟಿ. ಪುಟ್ಟಯ್ಯ ಮುಖ್ಯ ಅತಿಥಿಯಾಗಿ ಮಾತನಾಡಿ ಮಾರಿಕಾಂಬ ದೇವಿಯ ಪರಮಭಕ್ತರಾದ ಭೀಮನಾಯ್ಕ ಮತ್ತು ಧರ್ಮಿಣಿ ಬಾಯಿ ದಂಪತಿಗಳ ಮಗನಾದ ಸಂತ ಸೇವಾಲಾಲ ಮಹಾರಾಜರು 1739 ಫಬ್ರವರಿ 15 ರಂದು ಜನಿಸಿದರೆಂದು ಕೆಲವರು ದಾಖಲಿಸಿದ್ದಾರೆ. ಸೇವಾಲಾಲರು ಪವಾಡ ಪುರುಷ, ಪ್ರಕೃತಿ ಪ್ರಿಯರೆಂದು ಕೆಲವು ಕೃತಿಗಳಲ್ಲಿ ಉಲ್ಲೇಖವಿದೆ. ಆರ್ಯುವೇದ ಜ್ಞಾನದಿಂದ ಜನರಿಗೆ ರೋಗ ನಿವಾರಣೆ ಮಾಡುತ್ತಿದ್ದರು. ಗಿಡಮೂಲಿಕೆ ಚಿಕಿತ್ಸೆ ನೀಡುತ್ತಿದ್ದ ಇವರ ಸೇವೆಯನ್ನು ಸುಮಾರು 287 ವರ್ಷಗಳ ಹಿಂದೆ ಜನರು ಗೌರವಿಸುತ್ತಿದ್ದರು. ಇವರ ಸಮಾಜಮುಖಿ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು ಇವರ ಜೀವನ, ಸೇವೆ ಮತ್ತು ಸಂದೇಶಗಳ ಬಗ್ಗೆ ಅಧ್ಯಯನಗಳ ಮೂಲಕ ಸತ್ಯ ಶೋಧನೆ ಆಗಬೇಕು. ಜಯಂತಿ ಆಚರಿಸಿ ಅವರ ಸಂದೇಶಗಳ ಬಗ್ಗೆ ಯುವ ಪೀಳಿಗೆಗೆ ತಲುಪಿಸುತ್ತಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಸಂತ ಸೇವಾಲಾಲರ ಪೀಠದ ಕಾರ್ಯವನ್ನು ಅಭಿನಂದಿಸಿದರು.
ಸಂತ ಶ್ರೀ ಸೇವಾಲಾಲ ಅಧ್ಯಯನ ಮತ್ತು ಸಂಶೋದನ ಕೇಂದ್ರದ ನಿರ್ದೇಶಕ ಪ್ರೊ. ದಶರಥ ಎಸ್. ನಾಯಕ್ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಲಂಬಾಣಿ ಜನಾಂಗ ಮೂಲತಃ ರಾಜಸ್ಥಾನ ಮೂಲದವರು. 12 ಮತ್ತು 13ನೇ ಶತಮಾನದಿಂದ ಅಲೆಮಾರಿ ಜೀವನ ನಡೆಸುತ್ತಿದ್ದರು. ಕೆಲಸದ ಕಡೆ ಹೋಗಿ ನೆಲೆಸುವ ಮೂಲಕ ಬಾವಿ, ಕೆರೆ ನಿರ್ಮಿಸುವುದು, ಕುದುರೆ ಮೇಲೆ ಆಹಾರ ಧಾನ್ಯ, ಸಾಂಭಾರ ಪದಾರ್ಥಗಳನ್ನು ಸಾಗಿಸಲು ಪ್ರಯಾಣ ಮಾಡಿ ಜೀವನ ಸಾಗಿಸುತ್ತಿದ್ದರು. ಪ್ರಸ್ತುತ ರಾಜ್ಯದ ನಾನಾ ಕಡೆಗಳ ತಾಂಡಗಳಲ್ಲಿ ನೆಲೆಸಿದ್ದಾರೆ. ಲಂಬಾಣಿ, ಬೆಡಗು, ರಾಠೋಡ್, ಚೌವಾಣ್, ನಾಯಕ್ ಮತ್ತು ಬಂಜಾರ ಸಮುದಾಯಗಳ ವಿಶೇಷ ಸಂಪ್ರದಾಯ ಮತ್ತು ಸಂಸ್ಕೃತಿಯಿದೆ. 1947 ರಿಂದ ಮತ ಚಲಾಯಿಸುವ ಹಕ್ಕು ಸಿಕ್ಕಿದೆ. ಪ್ರತಿಶತ 97 ರಷ್ಟು ತಾಂಡಗಳಲ್ಲಿ ವಾಸವಾಗಿವೆ. ಈ ಸಮುದಾಯಗಳ ಬೆಳವಣಿಗೆಗೆ ಸರ್ಕಾರ ವಿಶೇಷ ಆಸಕ್ತಿ ವಹಿಸಬೇಕು ಎಂದು ಹೇಳಿದರು.
ಮಾಜಿ ಸಂಸದ ಡಾ. ಉಮೇಶ ಜಾಧವ ಮಾತನಾಡಿ ಆರ್ಥಿಕವಾಗಿ ದುರ್ಬಲವಾಗಿರುವ ಬಂಜಾರ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಕೆಲವು ಅಪರಾಧಗಳಿಗೆ ಈ ಸಮುದಾಯವನ್ನೇ ನೇರ ಹೊಣೆ ಮಾಡಲಾಗುತ್ತಿದೆ. ಶಿಕ್ಷಣ ಮತ್ತು ಸಮಾನತೆ ನೀಡುವ ಮೂಲಕ ಮುಖ್ಯವಾಹಿನಿಗೆ ತರಬೇಕಿದೆ. ಬಂಜಾರ ಯುವ ಪೀಳಿಗೆಗೆ ಪ್ರಜ್ಞಾವಂತಿಕೆ ಬೆಳೆಸಬೇಕು. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸಂತ ಸೇವಾಲಾಲ ಅಧ್ಯಯನ ಪೀಠ ಸ್ಥಾಪನೆ ಮತ್ತು ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ದೇಶಪಾಂಡೆ ಅವರಿಗೆ ಮನವಿ ಮಾಡಲಾಯಿತು. ಅಂದಿನ ಕುಲಪತಿ ಪ್ರೊ. ಜಿ. ಆರ್. ನಾಯಕ ಹಾಗೂ ಹಿರಿಯ ವಿದ್ವಾಂಸ ಪ್ರೊ. ಪಿ. ಕೆ. ಖಂಡೋಬಾ ಅವರ ಸಹಕಾರ ನೆನೆಸಿಕೊಂಡ ಅವರು ಪೀಠದಲ್ಲಿ ಬಂಜಾರ ಸತ್ಯ ಇತಿಹಾಸ ಶೋಧನೆಗೆ ಯೋಜನೆ ರೂಪಿಸಬೇಕು. ಸಂಶೋಧಕರಿಗೆ ಪ್ರೋತ್ಸಾಹಿಸಿ ಚರಿತ್ರೆಯನ್ನು ರಚಿಸಿದರೆ ಹೆಚ್ಚು ಈ ಸಮುದಾಯದ ಯುವಕರ ಭವಿಷ್ಯ ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.
ಚೌಡಾಪುರದ ಮುರಾರಿ ಮಹಾರಾಜರು ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವ ರೇವು ನಾಯಕ್ ಬೆಳಮಗಿ, ಶಾಸಕ ಡಾ. ಅವಿನಾಶ್ ಜಾದವ್, ಮೌಲ್ಯಮಾಪನ ಕುಲಸಚಿವ ಡಾ.ನಿಂಗಣ್ಣ ಕೊಣ್ಣೂರ, ಹಣಕಾಸು ಅಧಿಕಾರಿ ಶ್ರೀಮತಿ. ಜಯಂಬಿಕಾ, ಕುಲಸಚಿವ ಪ್ರೊ. ರಮೇಶ್ ಲಂಡನಕರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ನಿಕಾಯಗಳ ಡೀನರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಗೀತ ವಿಭಾಗದ ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ನಾಡಗೀತೆ ಮತ್ತು ಸಂತಸೇವಾಲಾಲರ ಗೀತೆ ಪ್ರಸ್ತುತಪಡಿಸಿದರು. ಡಾ. ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು. ಸಿಕಂದರ್ ಚೌಹಾಣ್ ವಂದಿಸಿದರು.
ಗುಲಬರ್ಗಾ ವಿವಿಯಲ್ಲಿ ಅನೇಕ ಮಹಾಪುರುಷರ ಪೀಠಗಳಿವೆ. ಬೇರೆ ವಿಶ್ವವಿದ್ಯಾಲಗಳಲ್ಲಿ ಕಡಿಮೆಯಿವೆ. ಫಂಡ್ ಪ್ರೋಗ್ರಾಂ ನಡೆಸಲು ಧಾನಿಗಳು ಅಗತ್ಯ ನೆರವು ನೀಡಿದರೆ ಸಾರ್ಟ್ ಟರ್ಮ್ ಕೋರ್ಸುಗಳ ಆರಂಭಿಸಿ ಮಹಾನ್ ಪುರುಷರ ಜೀವನ ಮತ್ತು ಸಂದೇಶ ಕುರಿತು ಅಧ್ಯಯನಕ್ಕೆ ಪ್ರೋತ್ಸಾಹ ನೀಡಲಾಗುವುದು. ಕಳೆದ ಕೆಲವು ದಿನಗಳ ಹಿಂದೆ ಡಾ. ಬರಗೂರು ರಾಮಚಂದ್ರ್ಪ ಅವರ ನೇತೃತ್ವದಲ್ಲಿ ಪೀಠಗಳ ಶೈಕ್ಷಣಿಕ ಕಾರ್ಯಕ್ರಮಗಳ ಕುರಿತು ಚರ್ಚೆಯಾಗಿದೆ. ಮುಂದೆ ಪೀಠಗಳ ಚಟುವಟಿಕೆಗಳನ್ನು ಕ್ರಿಯಾಶೀಲಗೊಳಿಸಲು ಉತ್ತೇಜನ ಸಿಗಬಹುದು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 