ಬೆಂಗಳೂರು, ಫೆ 5, ಸಿಲಿಕಾನ್ ಸಿಟಿಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಬೆಂಗಳೂರು ಅಭಿವೃದ್ಧಿ ವಲಯಕ್ಕೆ ಒಟ್ಟಾರೆ ಮೊತ್ತ 8,772 ಕೋಟಿ ರೂ.ಮೀಸಲಿರಿಸಿದ್ದಾರೆ. ವಿಧಾನಮಂಡಲದ ಎದುರು ಗುರುವಾರ ಬಜೆಟ್ ಪ್ರತಿ ಮಂಡಿಸಿದ ಯಡಿಯೂರಪ್ಪ, ಬೆಂಗಳೂರು ನಗರಕ್ಕೆ ಸೀಮಿತವಾಗಿ ಪ್ರತ್ಯೇಕ ಪೌರ ನಿಗಮ ಕಾಯ್ದೆ ರಚಿಸಲಾಗುವುದು. ಇದು ನಗರಕ್ಕೆ ಪರಿಣಾಮಕಾರಿ ಆಡಳಿತ ಹಾಗೂ ನಾಗರಿಕ ಸೇವೆಗಳನ್ನು ನೀಡಲು ನೆರವಾಗಲಿದೆ ಎಂದು ಘೋಷಿಸಿದರು.ಜೊತೆಗೆ, ಬೆಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿಗೆ 8344 ಕೋಟಿ ರೂ. ಮೊತ್ತದ “ಮುಖ್ಯಮಂತ್ರಿಗಳ ನವ ನಗರೋತ್ಥಾನ” ಯೋಜನೆ ಅನುಷ್ಠಾನಗೊಳಿಸಲಾಗುವುದು. ನಗರದ ಘನತ್ಯಾಜ್ಯ ನಿರ್ವಹಣೆಗೆ “ಶುಭ್ರ ಬೆಂಗಳೂರು” ಯೋಜನೆಯಡಿ 999 ಕೋಟಿ ರೂ. ಅನುದಾನದ ಕ್ರಿಯಾಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಬೆಂಗಳೂರು ನಗರಕ್ಕೆ ಸೇರ್ಪಡೆಗೊಂಡಿರುವ 110 ಹಳ್ಳಿಗಳಲ್ಲಿ ದುಃಸ್ಥಿತಿಯಲ್ಲಿರುವ ರಸ್ತೆಗಳ ಪುನಶ್ಚೇತನಕ್ಕೆ ಮುಂದಿನ ಎರಡು ವರ್ಷಗಳಿಗೆ 1000 ಕೋಟಿ ರೂ. ಅನುದಾನ ನೀಡುವುದಾಗಿ ಕೂಡ ಯಡಿಯೂರಪ್ಪ ಪ್ರಕಟಿಸಿದರು.
ಕೆರೆ ಅಭಿವೃದ್ಧಿಗೆ 417 ಕೋಟಿ ರೂ.:ಪ್ರಸಕ್ತ ಸಾಲಿನ ಬಜೆಟ್ ನಲ್ಲಿಬೆಂಗಳೂರು ನಗರದ ಕೆರೆಗಳ ಸರ್ವತೋಮುಖ ಅಭಿವೃದ್ಧಿಗೆ ಶುಭ್ರ ಬೆಂಗಳೂರು ಹಾಗೂ ಮುಖ್ಯಮಂತ್ರಿಗಳ ನವ ನಗರೋತ್ಥಾನ ಕ್ರಿಯಾ ಯೋಜನೆಗಳಡಿ ಒಟ್ಟು 417 ಕೋಟಿ ರೂ. ನಿಗದಿಪಡಿಸಲಾಗಿದೆ. ಬೆಂಗಳೂರು ನಗರದ ಬೃಹತ್ ನೀರುಗಾಲುವೆಗಳ ಜಾಲದಲ್ಲಿರುವ ಕೊರತೆಗಳನ್ನು (ಮಿಸ್ಸಿಂಗ್ ಗ್ಯಾಪ್ ) ಅಭಿವೃದ್ಧಿ ಕಾಮಗಾರಿಗೆ 200 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ತ್ಯಾಜ್ಯದಿಂದ ವಿದ್ಯುತ್:ಕರ್ನಾಟಕ ವಿದ್ಯುತ್ ನಿಗಮದಿಂದ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಬಿಬಿಎಂಪಿ ಸಹಯೋಗದೊಂದಿಗೆ 210 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಬೇರ್ಪಡಿಸಿದ ತ್ಯಾಜ್ಯ ಬಳಸಿಕೊಂಡು 11.5 ಮೆಗಾ ವ್ಯಾಟ್ ಸಾಮಥ್ರ್ಯದ ಹೊಸ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಇದರಿಂದ ವಾರ್ಷಿಕ 70 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ ಎಂದು ಯಡಿಯೂರಪ್ಪ ಘೋಷಿಸಿದರು. ನಮ್ಮ ಮೆಟ್ರೋ ಯೋಜನೆಗೆ ವೇಗ:“ಬೆಂಗಳೂರು ಸ್ಮಾರ್ಟ್ ಸಿಟಿ” ಯೋಜನೆಯಡಿ ಆಯ್ದ ಸರ್ಕಾರಿ ಕಛೇರಿಗಳಲ್ಲಿ ಮಹಿಳಾ ವಿಶ್ರಾಂತಿ ಕೋಣೆಗಳ ಸೌಲಭ್ಯಗಳನ್ನು ಕಲ್ಪಿಸಲಾಗುವುದು.
ಜೊತೆಗೆ, ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಾಲ್ಕು ವಿದ್ಯುತ್ ಚಿತಾಗಾರಗಳ ಸ್ಥಾಪನೆ, ನಮ್ಮ ಮೆಟ್ರೊ ಯೋಜನೆಯಡಿ ಮೈಸೂರು ರಸ್ತೆಯಲ್ಲಿ ಕೆಂಗೇರಿಯವರೆಗೆ ಮತ್ತು ಕನಕಪುರ ರಸ್ತೆಯಲ್ಲಿ ಅಂಜನಾಪುರ ಟೌನ್ಷಿಪ್ ವರೆಗೆ ಒಟ್ಟು 12.8 ಕಿ.ಮೀ. ಉದ್ದದ ಮೆಟ್ರೋ ಕಾಮಗಾರಿ ಪೂರ್ಣಗೊಳಿಸಿ, 2020 ರಲ್ಲಿ ಸೇವೆ ಒದಗಿಸಲು ಕ್ರಮ ಮತ್ತಿತರರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಿಸಿದರು. ಮೆಟ್ರೋ ಪ್ರಯಾಣಿಕರಲ್ಲದ ಪಾದಚಾರಿಗಳಿಗೆ 24 ಮೆಟ್ರೋ ನಿಲ್ದಾಣಗಳ ಮೂಲಕ ಮೇಲ್ಸೇತುವೆ ಸೌಲಭ್ಯ ಕಲ್ಪಿಸಲಾಗುವುದು. ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 14,500 ಕೋಟಿ ರೂ. ಅಂದಾಜು ವೆಚ್ಚದಲ್ಲಿ 56 ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆ – ಏರ್ ಪೋರ್ಟ್ ಮೆಟ್ರೋ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 44 ಕಿ.ಮೀ. ಹೊಸ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ ಎಂದರು. ಸಬ್ -ಅರ್ಬನ್ ರೈಲಿಗೆ 500 ಕೋಟಿ ರೂ.ಸಬ್-ಅರ್ಬನ್ ರೈಲು ಯೋಜನೆಗೆ ರಾಜ್ಯ ಸರ್ಕಾರದ ವತಿಯಿಂದ ಪ್ರಸಕ್ತ ಸಾಲಿನಲ್ಲಿ 500 ಕೋಟಿ ರೂ. ಅನುದಾನ ನೀಡಲಾಗುತ್ತಿದೆ.
ಜೊತೆಗೆ, ಬೈಯಪ್ಪನಹಳ್ಳಿ-ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ಜೋಡಿ ರೈಲು ಮಾರ್ಗ ಯೋಜನೆಯ ಶೇ. 50 ರಷ್ಟು ವೆಚ್ಚ ಭರಿಸಲು ರಾಜ್ಯದ ನಿರ್ಧರಿಸಿದೆ. ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಿಸಲು ಮೂಲಸೌಲಭ್ಯ, ಟ್ರಾನ್ಸಿಟ್ ಆಧಾರಿತ ಬೆಳವಣಿಗೆ ಹಾಗೂ ಇತರ ಅಗತ್ಯ ನಿಯಂತ್ರಣಾ ಕ್ರಮಗಳಿಗೆ ಆದ್ಯತೆ ನೀಡಲಾಗುವುದು ಎಂದರು. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ:ನಗರದಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ಹೆಬ್ಬಾಳ, ಸಿಲ್ಕ್ ಬೋರ್ಡ್ ಹಾಗೂ ಕೆ.ಆರ್.ಪುರಂ ಜಂಕ್ಷನ್ಗಳಲ್ಲಿ ಸಂಚಾರ ಸಾಮರ್ಥ್ಯ ಹೆಚ್ಚಳಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಗರ ವ್ಯಾಪ್ತಿಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ವಾಹನ ದಟ್ಟಣೆ ಇರುವ ರಸ್ತೆಗಳ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ ಎಂದರು. ಸಮೂಹ ಸಾರಿಗೆಯನ್ನು ಉತ್ತೇಜಿಸಲು ಹಾಗೂ ಮೆಟ್ರೋ ಪ್ರಯಾಣಿಕರಿಗೆ ಸಮರ್ಪಕ ಮೆಟ್ರೋ ಫೀಡರ್ ಸಾರಿಗೆ ಸೌಲಭ್ಯ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ 890 ವಿದ್ಯುತ್ ಚಾಲಿತ ಬಸ್ ಗಳೂ ಸೇರಿದಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 2390 ಹೊಸ ಬಸ್ಗಳು ಸೇರ್ಪಡೆಯಾಗಲಿವೆ ಎಂದು ಯಡಿಯೂರಪ್ಪ ಬಜೆಟ್ ಭಾಷಣದಲ್ಲಿ ತಿಳಿಸಿದರು.
ಸಾರ್ವಜನಿಕ ಸಾರಿಗೆಯ ಕೊನೆಯ ಮೈಲಿನ ಸಂಪರ್ಕ
ಸುಧಾರಣೆಗೆ “ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ” ಯೋಜನೆ, ಸಂಚಾರ ದಟ್ಟಣೆಯ 12 ಕಾರಿಡಾರ್
ಗಳಲ್ಲಿ ಎರಡನೇ ಹಂತದ ಬಸ್ ಆದ್ಯತಾ ಪಥ ಅನುಷ್ಠಾನ, ರಸ್ತೆ ಸುರಕ್ಷತಾ ಚಟುವಟಿಕೆ
ಕೈಗೊಳ್ಳುವ ರಸ್ತೆ ಸುರಕ್ಷತಾ ನಿಧಿಗೆ 200 ಕೋಟಿ ರೂ. ಅನುದಾನ, ಪ್ರಯಾಣಿಕ ಮತ್ತು ಸರಕು
ಸಾಗಣೆ ವಾಹನಗಳಿಗೆ 20 ಕೋಟಿ ರೂ. ವೆಚ್ಚದಲ್ಲಿ ವಾಹನಗಳ ಸ್ಥಳ ಗುರುತಿಸುವ ವ್ಯವಸ್ಥೆ
ಅಳವಡಿಕೆಯಂತಹ ಯೋಜನೆಗಳನ್ನು ಆರಂಭಿಸುವುದಾಗಿ ಅವರು ಪ್ರಕಟಿಸಿದರು. ಬೆಂಗಳೂರು ನಗರದ
ಹೊರವಲಯದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ 'ಸಮಗ್ರ ಬಹು ಮಾದರಿ ಸಾರಿಗೆ ಹಬ್'
ಅಭಿವೃದ್ಧಿಪಡಿಸುವ ಕುರಿತು ಕುರಿತು ಕಾರ್ಯಾಧ್ಯಯನ ನಡೆಸಲಾಗುವುದು. ಬೆಂಗಳೂರಿನ
ಜನನಿಬಿಡ ಪ್ರದೇಶದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ‘ನೆಲಮಹಡಿಯ ವಾಹನ ನಿಲುಗಡೆ' ಯೋಜನೆ
ಜಾರಿಗೊಳಿಸಲಾಗುವುದು. ಬೆಂಗಳೂರು ನಗರದಲ್ಲಿರುವ ಎಲ್ಲಾ ಗ್ರಾಹಕರಿಗೆ ಅತೀ ವೇಗದ
ಇಂಟರ್ನೆಟ್ ಸಂಪರ್ಕವನ್ನು ಒದಗಿಸಲು ಆಪ್ಟಿಕಲ್ ಫೈಬರ್ ಅಳವಡಿಸಲಾಗುವುದು ಎಂದರು.
ಸೆಪ್ಟೆಂಬರ್ 2021ರ ಅಂತ್ಯಕ್ಕೆ ಟಿ.ಜಿ.ಹಳ್ಳಿ ನೀರಿನ ಮೂಲದ ಪುನರುಜ್ಜೀವನ ಯೋಜನೆ
ಪೂರ್ಣಗೊಳ್ಳಲಿದೆ. 2020-21ನೇ ಸಾಲಿನ ಅಂತ್ಯಕ್ಕೆ ಬೆಂಗಳೂರು ಜಲಮಂಡಲಿಯ ತ್ಯಾಜ್ಯ
ನೀರು ಸಂಸ್ಕರಣೆಯ ಸಾಮರ್ಥ್ಯವನ್ನು1587 ದಶಲಕ್ಷ ಲೀಟರ್ ಗೆ ಹೆಚ್ಚಿಸಲು ಕ್ರಮ
ಕೈಗೊಳ್ಳಲಾಗುವುದು.ಹಳೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಪುನರುಜ್ಜೀವನ ಮತ್ತು
ನವೀಕರಣಕ್ಕೆ 1000 ಕೋಟಿ ರೂ. ಅನುದಾನ ಮೀಸಲಿರಿಸಲಾಗುವುದು ಎಂದರು. ಬೆಂಗಳೂರು ಜನರ
ಬಹುನಿರೀಕ್ಷಿತ ಕಾವೇರಿ ನೀರು ಸರಬರಾಜು ಐದನೇ ಹಂತದ ಯೋಜನೆ 5,550 ಕೋಟಿ ರೂ.
ವೆಚ್ಚದಲ್ಲಿ 2023ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.