ಎಸ್‌ಐಆರ್ ಕಾರ್ಯ: ಹಾವೇರಿ ಜಿಲ್ಲೆಯಲ್ಲಿ 12.15 ಲಕ್ಷ ಮತದಾರರ ಮಾಹಿತಿ ಗಣಕೀಕರಣ ಪೂರ್ಣ

ಎಸ್‌ಐಆರ್ ಕಾರ್ಯ: ಹಾವೇರಿ ಜಿಲ್ಲೆಯಲ್ಲಿ 12.15 ಲಕ್ಷ ಮತದಾರರ ಮಾಹಿತಿ ಗಣಕೀಕರಣ ಪೂರ್ಣ SIR Task: Computerization of voter data for 12.15 lakh voters completed in Haveri district

ಲೋಕದರ್ಶನ ವರದಿ 

 ಹಾವೇರಿ, ಜು.31: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯವು ಹಾವೇರಿ ಜಿಲ್ಲೆಯಲ್ಲಿ ಚುರುಕಾಗಿ ಸಾಗುತ್ತಿದ್ದು, ಇದುವರೆಗೆ 12,15,739 ಮತದಾರರ ಮಾಹಿತಿಯನ್ನು ಗಣಕೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ್ ತಿಳಿಸಿದ್ದಾರೆ.  

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶೇ.100ರಷ್ಟು ಎನ್ಯೂಮರೇಷನ್ ನಮೂನೆಗಳ ವಿತರಣೆ ಪೂರ್ಣಗೊಂಡಿದೆ.

ಆಗಸ್ಟ್‌ 8ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಹೆಸರು ಸೇರೆ​‍್ಡ, ತಿದ್ದುಪಡಿ ಹಾಗೂ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು.  

ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಎಸ್‌ಐಆರ್ ಕಾರ್ಯ ನಡೆಯುತ್ತಿದ್ದು, ಎನ್ಯೂಮರೇಷನ್ ನಮೂನೆಗಳಲ್ಲಿ ಕುಟುಂಬ ಸದಸ್ಯರ ಸಹಿ, ಭಾವಚಿತ್ರ ಹಾಗೂ ಅಗತ್ಯ ವಿವರಗಳನ್ನು ದಾಖಲಿಸಲಾಗುತ್ತಿದೆ. ಈ ಕಾರ್ಯಕ್ಕೆ ರಾಜಕೀಯ ಪಕ್ಷಗಳ ಸಹಕಾರವೂ ಮಹತ್ವದ್ದಾಗಿದೆ ಎಂದು ಹೇಳಿದರು.  

ಶೇ.91.04ರಷ್ಟು ಗಣಕೀಕರಣ  

ಜಿಲ್ಲೆಯಲ್ಲಿ ಒಟ್ಟು 13,35,342 ಎನ್ಯೂಮರೇಷನ್ ನಮೂನೆಗಳು ವಿತರಿಸಲಾಗಿದ್ದು, ಅವುಗಳಲ್ಲಿ 12,15,739 ಮಾಹಿತಿಗಳನ್ನು ಗಣಕೀಕರಿಸುವ ಮೂಲಕ ಶೇ.91.04ರಷ್ಟು ಪ್ರಗತಿ ಸಾಧಿಸಲಾಗಿದೆ.  

ತಾಲ್ಲೂಕುವಾರು ಪ್ರಗತಿ ಹೀಗಿದೆ:  

ಹಾನಗಲ್ 2,01,904 (ಶೇ.92.38)   

ಶಿಗ್ಗಾಂವಿ 2,18,430 (ಶೇ.91.15)   

ಹಾವೇರಿ  2,12,337 (ಶೇ.88.84)   

ಬ್ಯಾಡಗಿ 1,96,695 (ಶೇ.91.54)   

ಹಿರೇಕೆರೂರು 1,75,129 (ಶೇ.93.46)   

ರಾಣೆಬೆನ್ನೂರು 2,11,244 (ಶೇ.89.56)   

ವೇಳಾಪಟ್ಟಿ  

ಜೂನ್ 30 ರಿಂದ ಆಗಸ್ಟ್‌ 8, 2026: ಬಿಎಲ್‌ಒಗಳ ಮನೆ-ಮನೆ ಭೇಟಿ   

ಆಗಸ್ಟ್‌ 8: ಕರಡು ಮತದಾರರ ಪಟ್ಟಿ ಪ್ರಕಟಣೆ   

ಆಗಸ್ಟ್‌ 17 ರಿಂದ ಸೆಪ್ಟೆಂಬರ್ 16: ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ   

ಆಗಸ್ಟ್‌ 17 ರಿಂದ ಅಕ್ಟೋಬರ್ 15: ಹಕ್ಕು-ಆಕ್ಷೇಪಣೆಗಳ ಪರೀಶೀಲನೆ   

ಅಕ್ಟೋಬರ್ 19, 2026: ಅಂತಿಮ ಮತದಾರರ ಪಟ್ಟಿ ಪ್ರಕಟಣೆ   

ದಾಖಲೆಗಳಿಂದ ಗುರುತಿಸಲಾದ ಪ್ರಕರಣಗಳು ಪರಿಷ್ಕರಣೆ ವೇಳೆ ಇದುವರೆಗೆ:  

ಮೃತರು  31,633   

ಸ್ಥಳಾಂತರ/ಗೈರು  3,871   

ಶಾಶ್ವತ ವಲಸೆ  54,765   

ದ್ವಿಪ್ರತಿ ಹೆಸರುಗಳು  16,506   

ಇತರೆ  408   

ಒಟ್ಟು 1,07,183 ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್‌., ಚುನಾವಣಾ ತಹಶೀಲ್ದಾರ್ ಅಮೃತಗೌಡ ಪಾಟೀಲ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.