ದೇವಿಹೊಸೂರಿನಲ್ಲಿ ಎಸ್‌ಐಆರ್ ಜಾಗೃತಿ ಹಾಗೂ ಕಾನೂನು ಅರಿವು ಕಾರ್ಯಕ್ರಮ

   ದೇವಿಹೊಸೂರಿನಲ್ಲಿ ಎಸ್‌ಐಆರ್ ಜಾಗೃತಿ ಹಾಗೂ ಕಾನೂನು ಅರಿವು ಕಾರ್ಯಕ್ರಮ   SIR Awareness and Legal Literacy Program at Devihosuru

ಲೋಕದರ್ಶನ ವರದಿ 

ಹಾವೇರಿ, ಆ.5: ತಾಲೂಕಿನ ದೇವಿಹೊಸೂರ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಹಾಗೂ ಎನ್ಯುಮರೇಷನ್ ಫಾರ್ಮ್‌ ಭರ್ತಿ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.  

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶ್ರೀಶೈಲಜಾ ಹೆಚ್‌.ವಿ. ಅವರು, ಮತದಾರರ ಪಟ್ಟಿಯನ್ನು ನಿಖರಗೊಳಿಸುವ ಉದ್ದೇಶದಿಂದ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಗೆ ಸಾರ್ವಜನಿಕರು ಸಹಕರಿಸಿ ಎನ್ಯುಮರೇಷನ್ ಫಾರ್ಮ್‌ ಕಡ್ಡಾಯವಾಗಿ ಭರ್ತಿ ಮಾಡಬೇಕು ಎಂದು ಕರೆ ನೀಡಿದರು. ಗ್ರಾಮ ವ್ಯಾಪ್ತಿಯಲ್ಲಿ 6,888 ಎನ್ಯುಮರೇಷನ್ ಫಾರ್ಮ್ಗಳ ಗಣಕೀಕರಣ ಪೂರ್ಣಗೊಂಡಿರುವುದಾಗಿ ತಿಳಿಸಿದರು.  

ಸಹಾಯಕ ಕಾನೂನು ನೆರವು ವಕೀಲ ಎನ್‌.ಎನ್‌. ದಿಳ್ಳೆಪ್ಪ ಅವರು ಪೋಕ್ಸೋ ಕಾಯ್ದೆ, ಮಕ್ಕಳ ಹಕ್ಕುಗಳು, ಮಾನವ ಕಳ್ಳಸಾಗಣೆ ತಡೆ, ಕಾನೂನು ಅರಿವು ಹಾಗೂ ಎಸ್‌ಐಆರ್ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.