ನೀಟ್ ಅಕ್ರಮ ಖಂಡಿಸಿ ಎಸ್ ಎಪ್‌ಐ-ಡಿವೈಎಪ್‌ಐ ಪ್ರತಿಭಟನೆ

ನೀಟ್ ಅಕ್ರಮ ಖಂಡಿಸಿ ಎಸ್ ಎಪ್‌ಐ-ಡಿವೈಎಪ್‌ಐ  ಪ್ರತಿಭಟನೆ  SFI-DYFI protest against NEET irregularities

ಹಾವೇರಿ 22: ನೀಟ್  ಪರೀಕ್ಷೆಯಲ್ಲಿನ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ, ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಭಾರತೀಯ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.  ಬಸವೇಶ್ವರ ಪ್ರತಿಮೆಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮೈಲಾರ ಮಹದೇವಪ್ಪ ಪ್ರತಿಮೆ ಎದುರು ಸಮಾವೇಶಗೊಂಡಿತು.  

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅವ್ಯವಸ್ಥೆ ಹಾಗೂ ಅಕ್ರಮಗಳ ಕುರಿತು ಸಮಗ್ರ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕಲು ನಡೆದ ಪೊಲೀಸ್ ಕ್ರಮವನ್ನು ಖಂಡಿಸಿದ ಅವರು, ಕೇಂದ್ರ ಸರ್ಕಾರ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  

ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಬಸವರಾಜ ಎಸ್‌. ಮಾತನಾಡಿ, ನೀಟ್ ಪರೀಕ್ಷೆಯಲ್ಲಿನ ನಿರಂತರ ಅಕ್ರಮಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟುಮಾಡಿವೆ. ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡಲು ಕೇಂದ್ರ ಸರ್ಕಾರ ಹೊಣೆಗಾರಿಕೆ ವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.  

ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳ ಜೈನ್ ಮಾತನಾಡಿ, ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಗೌರವಿಸಬೇಕು ಹಾಗೂ ಬಂಧನಕ್ಕೊಳಗಾದ ಪ್ರತಿಭಟನಾಕಾರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.  

ಎಸ್‌ಎಫ್‌ಐ ಕಾಲೇಜು ಘಟಕದ ಅಧ್ಯಕ್ಷೆ ಚೈತ್ರಾ ಕೊರವರ ಮಾತನಾಡಿ, ಪರೀಕ್ಷಾ ಅಕ್ರಮಗಳಿಂದ ಹಾನಿಗೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಬೇಕು ಎಂದು ಒತ್ತಾಯಿಸಿದರು.  

ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ಸಂಜಯ್ ಗಾಂಧಿ, ಖಾದರ್ ಧಾರವಾಡ, ಡಿವೈಎಫ್‌ಐ ರಾಜ್ಯ ಸಮಿತಿ ಸದಸ್ಯೆ ರೇಣುಕಾ ಕಹಾರ, ಮುಖಂಡರಾದ ಖಲಂದರ್ ಅಲಿಗೌಡ್ರ, ಎಸ್‌ಎಫ್‌ಐ ಜಿಲ್ಲಾ ಮುಖಂಡ ಅರುಣ್ ಕುಮಾರ ನಾಗವತ್, ಭವ್ಯ ಓಲೇಕಾರ, ಸುನೀತಾ ಮಾದರ, ಸಂಗೀತಾ ಆರಿ​‍್ಸ., ರಂಜಿತ್ ಆಲೂರು, ಜಾಸ್ಮಿನ್, ರಕ್ಷಿತಾ ಎಸ್‌., ರಾಜೇಶ್ವರಿ ಎಸ್‌.ಎಂ., ನಾಗಿನ್ ನದಾಫ್, ವಿನಾಯಕ ಲಮಾಣಿ, ಲೋಹಿತ್ ಹರಿಜನ, ಸಂದೀಪ್ ಪವಾರ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.