ವೆನೆಜುವೆಲಾ ಮೇಲೆ ಸಾಮ್ರಾಜ್ಯಶಾಹಿ ಅಮೇರಿಕಾ ಆಕ್ರಮಣ ಖಂಡಿಸಿ ಎಸ್‌ಎಫ್‌ಐ, ಡಿವೈಎಫ್‌ಐ ಪ್ರತಿಭಟನೆ
SFI, DYFI protest against imperialist US invasion of Venezuela
ಹಾವೇರಿ 04: ವೆನಿಜುವೆಲಾ ದೇಶದ ಮೇಲೆ ಸಾಮ್ರಾಜ್ಯಶಾಹಿ ಅಮೇರಿಕಾದ ಆಕ್ರಮಣವನ್ನು ಖಂಡಿಸಿ, ಅಧ್ಯಕ್ಷ ಮುದುರೋ ಹಾಗೂ ಮುದುರೊ ಪತ್ನಿಯ ಬಿಡುಗಡೆಗಾಗಿ ಆಗ್ರಹಿಸಿ ಮತ್ತು ವೆನೆಜುವೆಲಾ ಜನತೆಗೆ ಸೌಹಾರ್ದ ಬೆಂಬಲ ನೀಡಿ ಎಸ್‌ಎಫ್‌ಐ, ಡಿವೈಎಫ್‌ಐ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಗಾಂಧಿ ಸರ್ಕಲ್ ನಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಡಿವೈಎಫ್‌ಐ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಸಾರ್ವಭೌಮ ರಾಷ್ಟ್ರವಾದ ವೆನೆಜುವೆಲಾ ವಿರುದ್ಧ ಅಮೆರಿಕ ಸಂಯುಕ್ತ ಸಂಸ್ಥಾನವು ನಡೆಸಿರುವ ಘೋರ ಸೇನಾ ಆಕ್ರಮಣವನ್ನು ಡಿವೈಎಫ್‌ಐ ಪ್ರಬಲವಾಗಿ ಖಂಡಿಸುತ್ತದೆ. ವೆನೆಜುವೆಲಾದ ಕ್ಯಾರಕಾಸ್ ಮತ್ತು ಇತರ ಪ್ರದೇಶಗಳಲ್ಲಿ ನಾಗರಿಕ ಮತ್ತು ಮಿಲಿಟರಿ ಸ್ಥಳಗಳ ಮೇಲೆ ಅಮೇರಿಕಾ ನಡೆಸಿರುವ ಬಾಂಬ್ ದಾಳಿಯು ಅಂತರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆಯ ಚಾರ್ಟರ್ ಹಾಗೂ ಸಾರ್ವಭೌಮತ್ವ ಮತ್ತು ಹಸ್ತಕ್ಷೇಪ ಮಾಡದಿರುವ ಮೂಲಭೂತ ತತ್ವಗಳ ಗಂಭೀರ ಉಲ್ಲಂಘನೆಯಾಗಿದೆ.
ಅಮೇರಿಕಾದ ಈ ದುಷ್ಕೃತ್ಯವು ಪ್ರತ್ಯೇಕವಾದ ಘಟನೆಯಲ್ಲ, ಜಾಗತಿಕ ಮನುಷ್ಯರಲ್ಲಿ ಶಾಂತಿ ಐಕ್ಯತೆ ಬಯಸುವರೆಲ್ಲರೂ ಸಾಮ್ರಾಜ್ಯಶಾಹಿ ಈ ನಡೆಯನ್ನು ತೀವ್ರವಾಗಿ ಖಂಡಿಸಬೇಕಿದೆ ಎಂದರು. ಭಾರತದ ಯುವಕರು ವೆನೆಜುವೆಲಾದ ಜನರು ಮತ್ತು ಸಾಮ್ರಾಜ್ಯಶಾಹಿಯನ್ನು ವಿರೋಧಿಸುವ ಎಲ್ಲಾ ರಾಷ್ಟ್ರಗಳೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದಾರೆ. ಸಾಮ್ರಾಜ್ಯಶಾಹಿ ಯುದ್ಧಗಳ ವಿರುದ್ಧ ಒಂದಾಗಲು ಮತ್ತು ಶಾಂತಿ, ಸಾರ್ವಭೌಮತ್ವ ಮತ್ತು ಸ್ವ-ನಿರ್ಣಯವನ್ನು ರಕ್ಷಿಸಲು ಪ್ರಪಂಚದಾದ್ಯಂತದ ಪ್ರಜಾಪ್ರಭುತ್ವ, ಪ್ರಗತಿಪರ ಮತ್ತು ಶಾಂತಿ-ಪ್ರೀತಿಯ ಶಕ್ತಿಗಳಿಗೆ ಎಸ್‌ಎಫ್‌ಐ-ಡಿವೈಎಫ್‌ಐ ಕರೆ ನೀಡುತ್ತವೆ ಎಂದರು. ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ವೆನೆಜುವೆಲಾ ವಿರುದ್ಧದ ಪ್ರಸ್ತುತ ಆಕ್ರಮಣವು ಬಲವಂತವಾಗಿ ಆಡಳಿತ ಬದಲಾವಣೆಯನ್ನು ಹೇರುವ ಮತ್ತು ದೇಶದ ಆಯಕಟ್ಟಿನ ಸಂಪನ್ಮೂಲಗಳನ್ನು, ವಿಶೇಷವಾಗಿ ತೈಲ ಮತ್ತು ಖನಿಜಗಳನ್ನು ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಬಾಹ್ಯ ಹಸ್ತಕ್ಷೇಪವಿಲ್ಲದೆ ತಮ್ಮ ಸ್ವಂತ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಹಕ್ಕನ್ನು ರಕ್ಷಿಸಿಕೊಳ್ಳುವ ಹೋರಾಟದಲ್ಲಿ ಎಸ್‌ಎಫ್‌ಐ - ಡಿವೈಎಫ್‌ಐ ವೆನೆಜುವೆಲಾದ ಜನರು ಮತ್ತು ಅವರ ಕಾನೂನುಬದ್ಧ ಸರ್ಕಾರದೊಂದಿಗೆ ದೃಢವಾಗಿ ನಿಲ್ಲುತ್ತವೆ.
ಸಾಮ್ರಾಜ್ಯಶಾಹಿ ಮಿಲಿಟರಿ ಹಸ್ತಕ್ಷೇಪದಿಂದ ಮುಕ್ತವಾಗಿ ಲ್ಯಾಟಿನ್ ಅಮೆರಿಕವನ್ನು ಶಾಂತಿಯ ವಲಯವೆಂದು ಘೋಷಿಸಬೇಕು. ಯುಎಸ್ ಆಕ್ರಮಣವನ್ನು ತಕ್ಷಣವೇ ನಿಲ್ಲಿಸಲು, ಕೆರಿಬಿಯನ್ ಪ್ರದೇಶದಿಂದ ಎಲ್ಲಾ ಯುಎಸ್ ಮಿಲಿಟರಿ ಉಪಸ್ಥಿತಿಯನ್ನು ಹಿಂತೆಗೆದುಕೊಳ್ಳಲು ಎಸ್‌ಎಫ್‌ಐ-ಡಿವೈಎಫ್‌ಐ ಆಗ್ರಹಿಸುತ್ತವೆ. ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಗೈಯ್ಯುತ್ತಿರುವ ಯುಎಸ್ ಸರ್ಕಾರದ ದುರ್ವರ್ತನೆಯನ್ನು ಬಲವಾಗಿ ವಿರೋಧಿಸುತ್ತವೆ ಎಂದರು. ಪ್ರತಿಭಟನೆಯಲ್ಲಿ ಸಾಮ್ರಾಜ್ಯಶಾಹಿ ಅಮೇರಿಕಾಗೆ ಧಿಕ್ಕಾರ! ಅಂತರಾಷ್ಟ್ರೀಯ ಸೌಹಾರ್ದತೆ ಚಿರಾಯುವಾಗಲಿ! ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಲ್ಲಿ ಡಿಎಸ್‌ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಉಡಚಪ್ಪ ಮಾಳಗಿ, ಬಹುಜನ ಚಳುವಳಿ ಮುಖಂಡ ಎಮ್.ಕೆ ಮಕಬುಲ್, ಅಲೆಮಾರಿ ಸಮುದಾಯ ಸಂಘಟನೆ ಜಿಲ್ಲಾಧ್ಯಕ್ಷ ಸೆಟ್ಟಿ ವಿಭೂತಿ ನಾಯಕ್, ಅಂಗವಿಕಲ ಸಂಘಟನೆ ಮುಖುಂಡರಾದ ಮಂಜುನಾಥ ಕಮ್ಮಾರ, ಬಸನಗೌಡ ಪಾಟೀಲ, ಎಸ್‌ಎಫ್‌ಐ ಡಿವೈಎಫ್‌ಐ ಮುಖಂಡರಾದ ಅರುಣ ನಾಗಾವತ್, ಚೈತ್ರಾ ಕೊರವರ, ಜೀವನಸಿಂಗ್ ರಜಪೂತ, ಧನುಷ್ ದೊಡಮನಿ, ಸೌಮ್ಯಾ ಕ್ಯಾತನ್ ಸೇರಿದಂತೆ ಇತರರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 