ಶಿಕ್ಷಕರ ನೇಮಕಾತಿಗೆ ವಯೋಮಿತಿ ಹೆಚ್ಚಿಸುವಂತೆ ಎಸ್‌.ವಿ. ಸಂಕನೂರು ಆಗ್ರಹ

ಶಿಕ್ಷಕರ ನೇಮಕಾತಿಗೆ ವಯೋಮಿತಿ ಹೆಚ್ಚಿಸುವಂತೆ ಎಸ್‌.ವಿ. ಸಂಕನೂರು ಆಗ್ರಹ  S.V. Sankanur urges for raising the age limit for teacher recruitment

ಕಾರವಾರ   24:     ಶಿಕ್ಷಕರ ನೇಮಕಾತಿಗೆ ವಯೋಮಿತಿ ಹೆಚ್ಚಿಸಲು ವಿಧಾನ ಪರಿಷತ್ ಸದಸ್ಯ  ಎಸ್‌.ವಿ.ಸಂಕನೂರ  ಒತ್ತಾಯಿಸಿದ್ದಾರೆ.  ಮಾಧ್ಯಮಗಳಿಗೆ ಗುರುವಾರ ಹೇಳಿಕೆ ಬಿಡುಗಡೆ ಮಾಡಿರುವ ಅವರು , ಸಾಮಾನ್ಯ ವರ್ಗ ಕ್ಕೆ 42, ಹಿಂದುಳಿದ ವರ್ಗಕ್ಕೆ  45 , ಎಸ್ಸಿ ಎಸ್ಟಿಗೆ 47 ವರ್ಷ ತುಂಬಿದವರಿಗೆ ಅರ್ಜಿ ಹಾಕಲು ಅವಕಾಶ ನೀಡುವಂತೆ ವಯೋಮಿತಿ ಹೆಚ್ಚಿಸಬೇಕೆಂದು  ಸರ್ಕಾರದ ಶಿಕ್ಷಣ ಇಲಾಖೆಯ  ಕಾರ್ಯದರ್ಶಿಗೆ ಲಿಖಿತ ಮನವಿ ನೀಡಿದ್ದೇನೆ.  ಸರ್ಕಾರದಲ್ಲಿ ಬಹಳ ವರ್ಷದಿಂದ ನೇಮಕಾತಿಯಾಗದ ಹಿನ್ನೆಲೆಯಲ್ಲಿ ಮುಂದಿನ ಎಲ್ಲ ಸರ್ಕಾರಿ ನೇಮಕಾತಿಗಳಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷವರೆಗೆ ಹೆಚ್ಚಿಸಲು ನಿರ್ಣಯಿಸಿದೆ.

ಅಲ್ಲದೇ ಆಡಳಿತ ಮಾಡುತ್ತಿರುವ  ಸರ್ಕಾರ ದಿ:29 ಜನೇವರಿ 2026 ರಂದು ವಿಶೇಷ ರಾಜ್ಯಪತ್ರ ಹೊರಡಿಸಿದೆ.  ಆದರೆ  ಶಾಲಾ ಶಿಕ್ಷಣ ಇಲಾಖೆಯಲ್ಲಿ  ನೇಮಕ ಮಾಡಿಕೊಳ್ಳಲಿರುವ 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ  ಗರಿಷ್ಠ ವಯೋಮಿತಿಯನ್ನು ಹೆಚ್ಚಿಸುವ ಬದಲಾಗಿ ಎಲ್ಲಾ ವರ್ಗಗಳಗೆ 4 ವರ್ಷ ಕಡಿಮೆ ಮಾಡಿ ಅಧಿಸೂಚನೆ ಹೊರಡಿಸಿದೆ. ಈ  ಮೂಲಕ ಶಿಕ್ಷಕ ಹುದ್ದೆಗಳ ಉದ್ಯೋಗಾಕಾಂಕ್ಷಿಗಳಿಗೆ ಬಹುದೊಡ್ಡ ಅನ್ಯಾಯ ಮಾಡಿರುವುದನ್ನು  ಎಸ್‌.ವಿ.ಸಂಕನೂರ  ಖಂಡಿಸಿದ್ದಾರೆ.   ಸಾಮಾನ್ಯ ವರ್ಗ ಕ್ಕೆ 42, ಹಿಂದುಳಿದ ವರ್ಗಕ್ಕೆ 45 , ಎಸ್ಸಿ ಎಸ್ಟಿಗೆ 47 ವರ್ಷ ತುಂಬಿದವರಿಗೆ ಅರ್ಜಿ ಹಾಕಲು ಅವಕಾಶ ನೀಡುವಂತೆ ವಯೋಮಿತಿ ಹೆಚ್ಚಿಸಬೇಕೆಂದು ಅವರು ವಿನಂತಿಸಿದ್ದಾರೆ. 

ಸರಕಾರ ಇತ್ತೀಚಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಪ್ರಕಟಣೆ ಹೊರಡಿಸಿದ್ದು ಅದರಲ್ಲಿ ಗರಿಷ್ಠ ವಯೋಮಿತಿಯನ್ನು 5 ವರ್ಷ ಹೆಚ್ಚಿಸಲಾಗಿದೆ. ಅದರಂತೆ ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿಯೂ ಕೂಡ ಗರಿಷ್ಠ ವಯೋಮಿತಿಯನ್ನು 5 ವರ್ಷ ಹೆಚ್ಚಿಸಿರುವರು. ಆದ್ದರಿಂದ ಸದ್ಯ ಶಿಕ್ಷಕರ ನೇಮಕಾತಿಗೆ ಹೊರಡಿಸಿರುವ ವಿಶೇಷ ರಾಜ್ಯಪತ್ರದಲ್ಲಿ ಆಗಿರುವ ಲೋಪ ದೋಷಗಳನ್ನು ಸರಿಪಡಿಸಿ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸಿಕೊಡಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಮನವಿ ಮಾಡಿಕೊಂಡಿದ್ದಾರೆ.    

30,000 ಶಿಕ್ಷಕರ ಹುದ್ದೆ ನೇಮಕಾತಿಗೆ ಆಗ್ರಹ:   

 ಶಾಲಾ ಶಿಕ್ಷಣ ಇಲಾಖೆಯಲ್ಲಿ ಸುಮಾರು 79,000 ಹುದ್ದೆಗಳು ಖಾಲಿ ಇದ್ದು, ಅವುಗಳಲ್ಲಿ ಕೇವಲ 15,000 ಹುದ್ದೆಗಳನ್ನು ರಾಜ್ಯ  ಸರ್ಕಾರ ಭರ್ತಿ ಮಾಡಲು ಆದೇಶ ಹೊರಡಿಸಿದೆ. ಇದು ತೀರಾ ಕಡಿಮೆ ಸಂಖ್ಯೆಯಾಗಿದ್ದು, ಆದಕಾರಣ ಕನಿಷ್ಠ 30,000 ಹುದ್ದೆಗಳನ್ನಾದರೂ ಭರ್ತಿ ಮಾಡಿಕೊಳ್ಳಲು ಎಸ್‌.ವಿ.ಸಂಕನೂರ ಒತ್ತಾಯಿಸಿದ್ದಾರೆ. ಅದೇ ರೀತಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯಲ್ಲಿ ಕೂಡ 5000 ಖಾಲಿ ಹುದ್ದೆಗಳಲ್ಲಿ ಕೇವಲ 600 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳುತ್ತಿದ್ದು, ಇದನ್ನು 2000 ಕ್ಕೆ ಹೆಚ್ಚಿಸಲು ಆಗ್ರಹಿಸಿದ್ದಾರೆ.