ಬಳ್ಳಾರಿಯಲ್ಲಿ ರಾಜ್ಯಮಟ್ಟದ ಆಯುರ್ವೇದ ಶೈಕ್ಷಣಿಕ ಸಂವಾದ

ಬಳ್ಳಾರಿಯಲ್ಲಿ ರಾಜ್ಯಮಟ್ಟದ ಆಯುರ್ವೇದ ಶೈಕ್ಷಣಿಕ ಸಂವಾದ  State-level Ayurveda educational dialogue in Ballari

ಬಳ್ಳಾರಿ, ಜು. 23: ನಗರದ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಸುವರ್ಣ ಸಂಭ್ರಮದ ಅಂಗವಾಗಿ ‘ಬಸ್ತಿ ಹಿ ಅರ್ಧ ಚಿಕಿತ್ಸೆವೇ ಅಥವಾ ಪೂರ್ಣ ಚಿಕಿತ್ಸೆವೇ?’ ಎಂಬ ವಿಷಯದ ಕುರಿತು ರಾಜ್ಯಮಟ್ಟದ ಶೈಕ್ಷಣಿಕ ಸಂವಾದ (ಸಂಶೋಧನಾ ಚರ್ಚೆ) ಶುಕ್ರವಾರ ನಡೆಯಿತು.  

ರಾಜ್ಯದ ವಿವಿಧ 25 ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳಿಂದ ಆಗಮಿಸಿದ್ದ ಪಂಚಕರ್ಮ ಸ್ನಾತಕೋತ್ತರ ವಿದ್ಯಾರ್ಥಿಗಳು ಆಯುರ್ವೇದದ ಮೂಲ ಸಿದ್ಧಾಂತಗಳು ಹಾಗೂ ಆಧುನಿಕ ವೈಜ್ಞಾನಿಕ ದೃಷ್ಟಿಕೋನಗಳ ಆಧಾರದ ಮೇಲೆ ತಮ್ಮ ವಿಚಾರಗಳು ಮತ್ತು ಅಭಿಪ್ರಾಯಗಳನ್ನು ಮಂಡಿಸಿದರು.  

ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಸಂತೋಷ್ ಎಲ್‌. ಯಡಹಳ್ಳಿ, ವಿದ್ಯಾರ್ಥಿಗಳಲ್ಲಿ ಆಯುರ್ವೇದದ ಮೂಲತತ್ವಗಳ ಕುರಿತು ವಿಮರ್ಶಾತ್ಮಕ ಚಿಂತನೆ ಮತ್ತು ಸಂಶೋಧನಾ ಮನೋಭಾವ ಬೆಳೆಸುವ ಉದ್ದೇಶದಿಂದ ಈ ಸಂವಾದವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.  

ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ರಾಜಶೇಖರ್ ಎಸ್‌. ಗಾಣಿಗೇರ ಅಧ್ಯಕ್ಷತೆ ವಹಿಸಿ, ಇಂತಹ ಶೈಕ್ಷಣಿಕ ಸಂವಾದಗಳು ವಿದ್ಯಾರ್ಥಿಗಳಲ್ಲಿ ವಿಷಯದ ಆಳವಾದ ಅರಿವು, ಆತ್ಮವಿಶ್ವಾಸ ಹಾಗೂ ವೈಜ್ಞಾನಿಕ ಚರ್ಚೆಯ ಸಂಸ್ಕೃತಿಯನ್ನು ಬೆಳೆಸುತ್ತವೆ ಎಂದರು. ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಈ ಕಾರ್ಯಕ್ರಮವು ರಾಜ್ಯದ ವಿವಿಧ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ನಡುವಿನ ಶೈಕ್ಷಣಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದರು.