ಈ ಶತಮಾನದ ಶ್ರೇಷ್ಠ ಗಾಯಕಿ ಎಸ್ ಜಾನಕಿ. ರಾಮು ಅಗ್ನಿ

ಈ ಶತಮಾನದ ಶ್ರೇಷ್ಠ ಗಾಯಕಿ ಎಸ್ ಜಾನಕಿ. ರಾಮು ಅಗ್ನಿ S. Janaki is the greatest female singer of this century. Ramu Agni

ಲೋಕದರ್ಶನ ವರದಿ 

        ಸಿಂದಗಿ 15: ಭಾರತ ದೇಶ ಸೇರಿದಂತೆ ವಿಶ್ವ ಕಂಡ ಈ ಶತಮಾನದ ಶ್ರೇಷ್ಠ ಗಾಯಕಿ ಎಸ್ ಜಾನಕಿ ಅಮ್ಮನವರು ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ ಹೇಳಿದರು.  ಪಟ್ಟಣದ ತಾಲೂಕ ಪಂಚಾಯತ್ ಸಭಾಭವನದ ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕಾಲ ಕೋಗಿಲೆ ಎಸ್ ಜಾನಕಿಯವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಭಾರತ ದೇಶದ ಸುಮಾರು ಹದಿನಾರಕ್ಕೂ ಅಧಿಕ ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ ಎಸ್ ಜಾನಕಿ ಅವರು ಲತಾ ಮಂಗೇಶ್ಕರ ಅವರನ್ನು ಬಿಟ್ಟರೆ ವಿವಿಧ ಭಾಷೆಗಳಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿರುವ ಕೀರ್ತಿ ಹಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.  

        ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ್ ವಾಲಿಕಾರ್ ಮಾತನಾಡಿ, ಎಸ್ ಜಾನಕಿ ಅಮ್ಮನವರು ಕೇವಲ ಒಬ್ಬ ಗಾಯಕಿಯಾಗಿರದೆ ಭಾರತೀಯ ಸಂಗೀತ ಲೋಕದ ಧೃವ ತಾರೆಯಾಗಿದ್ದರು. ಸಂಗೀತ ಪ್ರೇಮಿಗಳ ಹೃದಯ ಸಾಮ್ರಾಜ್ಞಿಯಾಗಿ ಮೆರೆದ ಅವರ ಕಂಡ ಸಿರಿಯಲ್ಲಿ ಮೂಡಿ ಬಂದ ಭಕ್ತಿಗೀತೆಗಳು ಭಾವಗೀತೆಗಳು ಹಾಗೂ ಚಲನಚಿತ್ರ ಗೀತೆಗಳು ಸದಾ ಅಮರ ಎಂದರು.  ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಆನಂದ ಶಾಬಾದಿ ಹಾಗೂ ಸಾಹಿತಿ ಎಸ್‌.ಎಸ್‌.ಸಾತಿಹಾಳ ಮಾತನಾಡಿ,

          ಮೂಲತಃ ತಮಿಳುನಾಡಿನವರಾದರೂ ತಮ್ಮನ್ನು ಕಾಣಲು ಬಂದ ಮೈಸೂರಿನ 13 ವರ್ಷದ ಬಾಲಕನನ್ನೇ ತಮ್ಮ ಮಗನಾಗಿ ಸ್ವೀಕರಿಸಿ, ತಮ್ಮ ಕೊನೆಯ ದಿನಗಳವರೆಗೂ ಆತನ ಮನೆಯಲ್ಲಿಯೇ ಇದ್ದು ಅಲ್ಲಿಯೇ ತಮ್ಮ ಕೊನೆ ಉಸಿರೆಳೆದ ಜಾನಕಿ ಅಮ್ಮನವರಿಗೆ ಸಾಂಸ್ಕೃತಿಕ ನಗರಿ ಮೈಸೂರಿನೊಂದಿಗೆ ತವರು ಮನೆಯ ಅವಿನಾಧವ ಸಂಬಂಧ. ದೇವರು ಹಲವರನ್ನು ಭೂಮಿಗೆ ವಿಶೇಷತೆಯನ್ನು ಸಾಧಿಸಲಿಕ್ಕಾಗಿಯೇ ಕಳುಹಿಸಿರುತ್ತಾನೆ. ಸಂಗೀತ ಲೋಕದಲ್ಲಿ ಅಂತಹ ವಿಶಿಷ್ಟ ಸಾಧನೆಗಾಗಿ ದೇವರ ಸೃಷ್ಟಿಯೇ ಎಸ್ ಜಾನಕಿ ಎಂದು ಅಭಿಪ್ರಾಯಪಟ್ಟರು. 

       ಕಸಾಪ ತಾಲೂಕಾಧ್ಯಕ್ಷ ವೈ ಸಿ ಮಯೂರ, ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ಶಾಂತು ಮೌಸಲಗಿ ಕವಿತೆ ವಾಚನ, ಶಿಕ್ಷಕಿ ಶೈನಾಬಿ ಮಸಳಿ ಹಾಗೂ ಡಾ. ಪ್ರಕಾಶ ರಾಗರಂಜನಿ ಇವರಿಂದ ಗೀತ ಗಾಯನ ಮೂಲಕ ನುಡಿ ನಮನ ಸಲ್ಲಿಸಲಾಯಿತು.  ರಾಜಶೇಖರ್ ನರಗೋದಿ, ಸುನಂದಾ ಯಂಪುರೆ, ಅನುಸೂಯಾ ಪರಗೊಂಡ, ವರ್ಷಾ ಪಾಟೀಲ, ಶಾಂತು ರಾಣಾಗೋಳ, ಎಸ್ ಜಿ ಪಾಟೀಲ, ಶಿವಕುಮಾರ ಶಿವಶಂಪಿಗೇರ, ಎಂ ಆರ್ ಡೋಣಿ, ಜೈಭೀಮ್ ತಳಕೇರಿ ಸೇರಿದಂತೆ ಹಲವರಿದ್ದರು.